ಲೋಕಸಭೆ ಚುನಾವಣೆ ನಂತರ ಸಿದ್ದರಾಮಯ್ಯ ಸರ್ಕಾರ ಪತನ: ರೇಣುಕಾಚಾರ್ಯ ಭವಿಷ್ಯ

By Kannadaprabha News  |  First Published Dec 3, 2023, 2:09 PM IST

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ಸಿನವರು ಪರಸ್ಪರ ಕಚ್ಚಾಟದಲ್ಲಿ ನಿರತರಾಗಿದ್ದು, ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನಗೊಳ್ಳುವುದು ಖಚಿತ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಭವಿಷ್ಯ ನುಡಿದಿದ್ದಾರೆ.


ದಾವಣಗೆರೆ (ಡಿ.03): ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ಸಿನವರು ಪರಸ್ಪರ ಕಚ್ಚಾಟದಲ್ಲಿ ನಿರತರಾಗಿದ್ದು, ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನಗೊಳ್ಳುವುದು ಖಚಿತ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವೇನೂ ಆಪರೇಷನ್ ಕಮಲ ಮಾಡುವುದಿಲ್ಲ. ಕಾಂಗ್ರೆಸ್ಸಿನ ಸಚಿವರೇ ಸರ್ಕಾರದ ಕಾರ್ಯವೈಖರಿ, ಗುಂಪುಗಾರಿಕೆಯನ್ನು ಕಂಡು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕಾರಣವಾಗಲಿದ್ದಾರೆ ಎಂದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಇನ್ನೂ ಟೇಕಾಫ್ ಆಗಿಲ್ಲ. ಸಿಎಂ, ಡಿಸಿಎಂ ಯಾರಾಗಬೇಕೆಂಬುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಹಿಂದೆ ಬಿಜೆಪಿ ಸರ್ಕಾರ ಕೈಗೊಂಡಿದ್ದ ಏತ ನೀರಾವರಿ ಯೋಜನೆ, ರಸ್ತೆ ಕಾಮಗಾರಿ, ಕುಡಿಯುವ ನೀರಿನ ಯೋಜನೆಗಳೇ ಇಂದಿಗೂ ಪ್ರಗತಿಯಲ್ಲಿವೆ. ಸ್ವತಃ ಆಡಳಿತ ಪಕ್ಷದ ಶಾಸಕರಿಗೆ ಕೇವಲ 50 ಲಕ್ಷ ರು. ಅನುದಾನ ನೀಡುತ್ತಿದ್ದು, ಇಷ್ಟು ಅನುದಾನದಲ್ಲಿ ಯಾವ ಅಭಿವೃದ್ಧಿ ಕಾರ್ಯ ಸಾಧ್ಯವೆಂದು ಕಾಂಗ್ರೆಸ್ಸಿನ ಶಾಸಕರೇ ಅಸಮಾಧಾನ ಹೊರ ಹಾಕುತ್ತಿದ್ದಾರೆ ಎಂದು ಅವರು ಟೀಕಿಸಿದರು.

Tap to resize

Latest Videos

ಟಿಪ್ಪು ಯಾವುದೇ ಧರ್ಮ ವಿರೋಧಿಯಲ್ಲ: ಎಚ್.ವಿಶ್ವನಾಥ್

ಸಿದ್ದರಾಮಯ್ಯ ಸರ್ಕಾರದ ಸ್ಥಿತಿ ನೋಡಿದರೆ, ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಸರ್ಕಾರ ಪತನವಾಗುವುದು ಖಚಿತ ಎಂಬಂದಾಗಿದೆ. ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದು, ಈವರೆಗೆ ರೈತರ ಖಾತೆಗೆ ಬರ ಪರಿಹಾರದ ಹಣ ಬಂದಿಲ್ಲ. ರಾಗಿ, ಮೆಕ್ಕೆಜೋಳ, ಶೇಂಗಾ, ಹತ್ತಿ ಸೇರಿದಂತೆ ಬಹುತೇಕ ಎಲ್ಲಾ ಬೆಳೆಗಳೂ ಒಣಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಎಕರೆಗೆ ಕನಿಷ್ಠ 24 ಸಾವಿರ ಖರ್ಚು ಮಾಡಿದ್ದ ರೈತರ ಸಂಕಷ್ಟ ಹೇಳತೀರದು. ರೈತರ ಬದುಕಿಗೆ, ಹೊಟ್ಟೆ ಮೇಲೆ ಹೊಡೆಯುವ ಕೆಲಸ ಸರ್ಕಾರ ಮಾಡುತ್ತಿದೆ. ಬೆಳೆ ಹಾನಿ ಪರಿಹಾರ ನೀಡಬೇಕಾದ ರಾಜ್ಯ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ ಎಂದು ಅವರು ದೂರಿದರು.

ಬರ ಪರಿಹಾರವನ್ನು ಒಬ್ಬ ರೈತನಿಗೆ ಕೇವಲ 2 ಸಾವಿರ ರು. ಬಿಡುಗಡೆ ಮಾಡುವುದಾಗಿ ಸರ್ಕಾರ ಹೇಳಿದೆ. ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಕಾಂಗ್ರೆಸ್ ಸರ್ಕಾರ ಕೇವಲ ವರ್ಗಾವಣೆ, ಭ್ರಷ್ಟಾಚಾರದಲ್ಲಿ ಮುಳುಗಿದೆ. ಗೃಹಲಕ್ಷ್ಮಿ ಹಣ ಇನ್ನೂ ಮಹಿಳೆಯರ ಖಾತೆಗೆ ಬಂದಿಲ್ಲ. ಗೃಹಜ್ಯೋತಿ ಸಮರ್ಪಕ ಜಾರಿಗೊಂಡಿಲ್ಲ. ಒಂದು ಕಡೆ ಗ್ಯಾರಂಟಿ ಯೋಜನೆ ಕೊಟ್ಟು, ಮತ್ತೊಂದು ಕಡೆ ಜನರ ಕಪಾಳಕ್ಕೆ ಹೊಡೆದು, ಕಸಿಯುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಶಕ್ತಿ ಯೋಜನೆಯಡಿ ಬಸ್ಸುಗಳ ವ್ಯವಸ್ಥೆ ಇಲ್ಲವಾಗಿದೆ. ಗ್ರಾಮೀಣ ವಿದ್ಯಾರ್ಥಿಗಳು, ಜನರು ನಗರ, ಪಟ್ಟಣಕ್ಕೆ ಬಂದು ಹೋಗಲು ಬಸ್ ವ್ಯವಸ್ಥೆಯಿಲ್ಲ. ಅನ್ನಭಾಗ್ಯದಡಿ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿ, ಕೇಂದ್ರದ ಅಕ್ಕಿಯನ್ನೇ ನೀಡುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಬಿಜೆಪಿ ವಿರೋಧ ಮಾಡುತ್ತಿಲ್ಲ. ಆದರೆ, ನುಡಿದಂತೆ ಗ್ಯಾರಂಟಿ ಯೋಜನೆ ನಡೆಯುತ್ತಿಲ್ಲ. ಗ್ಯಾರಂಟಿ ಉಚಿತ ಯೋಜನೆ ವಿಫಲವಾಗಿವೆ. ಈವರೆಗೆ ಯುವ ನಿಧಿ ಹಣವನ್ನೇ ನಿರುದ್ಯೋಗಿಗಳಿಗೆ ನೀಡಿಲ್ಲ ಎಂದು ಅವರು ಟೀಕಿಸಿದರು.

ಶಿಕ್ಷಣ ಕ್ಷೇತ್ರಕ್ಕೆ ರೇವಣ್ಣ ದಂಪತಿಯ ಕೊಡುಗೆ ಅಪಾರ: ಎಚ್.ಡಿ.ದೇವೇಗೌಡ

ಬಿಜೆಪಿ ಸರ್ಕಾರದ ವಿದ್ಯಾನಿಧಿಯಡಿ 20 ಸಾವಿರ ರೈತರ ಮಕ್ಕಳಿಗೆ ನೀಡುತ್ತಿದ್ದ ಹಣ ತಡೆ ಹಿಡಿಯಲಾಗಿದೆ. ಮದ್ಯದ ದರ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಮಿತಿ ಮೀರಿದ ಭ್ರಷ್ಟಾಚಾರ ಕ್ಕೆ ಕಡಿವಾಣ ಇಲ್ಲದಂತಾಗಿದೆ. ಭೀಕರ ಬರ ಆವರಿಸಿದ್ದರೂ ಸರ್ಕಾರ ಎಲ್ಲಾ ಕ್ಷೇತ್ರದಲ್ಲೂ ವಿಫಲವಾಗಿವೆ. ಕಾಂಗ್ರೆಸ್ ಪಕ್ಷದ ಸುಳ್ಳು ಭರವಸೆಯನ್ನು ನೀಡಿ, ಅಧಿಕಾರಕ್ಕೆ ಬಂದು, ಜನರಿಗೆ ವಂಚಿಸುತ್ತಿದೆ. ಈಗಾಗಲೇ ಕಾಂಗ್ರೆಸ್ ಸರ್ಕಾರದ ಕುರ್ಚಿ ಕಾದಾಟ, ಸುಳ್ಳು ಭರವಸೆಗಳಿಂದ ಜನರೂ ಭ್ರಮನಿರಸನಗೊಂಡಿದ್ದಾರೆ. ಈ ಸರ್ಕಾರಕ್ಕೂ ಭವಿಷ್ಯವಿಲ್ಲ ಎಂದು ರೇಣುಕಾಚಾರ್ಯ ಹೇಳಿದರು. ಬಿಜೆಪಿ ಮುಖಂಡರಾದ ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಪಿ.ಎಸ್.ರಾಜು ವೀರಣ್ಣ, ಜಯರುದ್ರೇಶ, ಬಸವರಾಜ, ವೆಂಕಟೇಶ, ಪ್ರವೀಣ ಜಾಧವ್‌, ಮಂಜುನಾಥ, ಅಣಜಿ ಬಸವರಾಜ, ಹನುಮಂತಪ್ಪ ಇತರರು ಇದ್ದರು.

click me!