ವಿಶ್ವನಾಥ್‌ಗೆ ಅಪಾರ ಮೊತ್ತದ ಹಣ : ತನಿಖೆಗೆ ಆಗ್ರಹ

By Kannadaprabha NewsFirst Published Dec 3, 2020, 7:46 AM IST
Highlights

ಎಚ್ ವಿಶ್ವನಾಥ್‌ಗೆ ಅಪಾರ ಹಣ ನೀಡಲಾಗಿದೆ ಎನ್ನುವ  ವಿಚಾರ ಈಗ ಹೊರ ಬಿದ್ದಿದ್ದು ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಲಾಗಿದೆ. 

ಬೆಂಗಳೂರು (ಡಿ.03):  ಹುಣಸೂರು ಉಪಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಎಚ್‌. ವಿಶ್ವನಾಥ್‌ ಅವರಿಗೆ ಪಕ್ಷದಿಂದ ದೊಡ್ಡ ಮೊತ್ತ ನೀಡಲಾಗಿತ್ತು ಎಂಬ ವಿಚಾರವನ್ನು ಸ್ವತಃ ವಿಶ್ವನಾಥ್‌ ಅವರೇ ಒಪ್ಪಿಕೊಂಡಿದ್ದಾರೆ. ಅವರು ಹೇಳಿರುವ ದೊಡ್ಡ ಮೊತ್ತ ಎಂದರೆ ಎಷ್ಟು? ಅದು ಬಿಳಿ ಹಣವಾ ಅಥವಾ ಕಪ್ಪು ಹಣವಾ ಎಂಬುದರ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ರಾಜ್ಯ ಕಾಂಗ್ರೆಸ್‌ ಆಗ್ರಹಿಸಿದೆ. ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಬಿ.ಎಲ್‌. ಶಂಕರ್‌, ಮುಖಂಡರಾದ ವಿ.ಎಸ್‌. ಉಗ್ರಪ್ಪ ಹಾಗೂ ಎಚ್‌.ಎಂ. ರೇವಣ್ಣ, ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ಪ್ರಕರಣದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಉಪಚುನಾವಣೆ ವೇಳೆಯಲ್ಲಿ ಬಿಜೆಪಿ ಪಕ್ಷದಿಂದ ತಮಗೆ ದೊಡ್ಡ ಮೊತ್ತದ ಹಣವನ್ನು ಕಳುಹಿಸಿಕೊಡಲಾಗಿತ್ತು. ಅದನ್ನು ಸಿ.ಪಿ ಯೋಗೇಶ್ವರ್‌ ಹಾಗೂ ಸಿಎಂ ರಾಜಕೀಯ ಸಲಹೆಗಾರ ಎನ್‌.ಆರ್‌.ಸಂತೋಷ್‌ ಅವರು ತಲುಪಿಸದೇ ನನ್ನ ಸೋಲಿಗೆ ಸಂಚು ನಡೆಸಿದರು ಎಂದು ವಿಧಾನಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿಕೆ ನೀಡಿದ್ದಾರೆ. ಅವರು ಒಮ್ಮೊಮ್ಮೆ ಕಟು ಸತ್ಯ ಹೇಳುತ್ತಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದರು.

ಖಾರದ ಪುಡಿ ಎರಚಿ ಮಾಜಿ ಶಾಸಕರ ಕಿಡ್ನಾಪ್, ಬಿಜೆಪಿಯಲ್ಲಿ ಅಸಮಧಾನ ಸ್ಫೋಟ

ನಾನು ಚುನಾವಣೆಯಲ್ಲಿ ಸೋಲುವಂತೆ ಪಿತೂರಿ ಮಾಡಿದ್ದಾರೆ ಎಂದು ವಿಶ್ವನಾಥ್‌ ಅವರೇ ಹೇಳಿದ್ದಾರೆ. ವಿಶ್ವನಾಥ್‌ ಅವರ ಈ ಹೇಳಿಕೆ ತಪ್ಪೊಪ್ಪಿಗೆ ಹೇಳಿಕೆಯಾಗಿದೆ. ಅವರು ಹೇಳಿರುವ ಮೊತ್ತ 10 ಕೋಟಿಯೇ ಅಥವಾ 25 ಕೋಟಿಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಹಣದ ಮೂಲ ಏನು? ಈ ಹಣವನ್ನು ಯಾರಾದರೂ ದೇಣಿಗೆ ರೂಪದಲ್ಲಿ ಕೊಟ್ಟಿದ್ದಾರಾ ಅಥವಾ ಬಿಡಿಎ ಹಗರಣದಲ್ಲಿ ಆರ್‌ಟಿಜಿಎಸ್‌ ಮೂಲಕ ಬಂದ ಭ್ರಷ್ಟಹಣವನ್ನು ಕೊಟ್ಟರೆ ಎಂಬುದನ್ನು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.

ಹಿರಿಯ ನಾಯಕ ಎಚ್‌. ವಿಶ್ವನಾಥ್‌ ಅವರು ಶಾಸಕರು ಹಾಗೂ ಮುಖ್ಯಮಂತ್ರಿಗಳ ಸಲಹೆಗಾರರು ನನಗೆ ಹಣ ತಲುಪಿಸಿಲ್ಲ ಎನ್ನುತ್ತಾರೆ. ಇವೆಲ್ಲಾ ಬೆಳವಣಿಗೆಗಳಿಂದ ರಾಜಕಾರಣ ವ್ಯಾಪಾರೀಕರಣವಾಗುತ್ತಿದೆ ಎಂದು ಸಾರ್ವಜನಿಕರಲ್ಲಿ ಅಭಿಪ್ರಾಯ ಮೂಡಿದ್ದು, ಈ ಪ್ರಕರಣ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು ಎಂದರು.

- ಅದು ಕಪ್ಪು ಹಣವೋ ಬಿಳಿ ಹಣವೋ? ನ್ಯಾಯಾಂಗ ತನಿಖೆ ನಡೆಸಿ

click me!