ಈ ಚುನಾವಣೆಯಲ್ಲಿ ನಾನು ಸೋತರೆ ಮನೆಗೆ ಹೋಗುತ್ತೇನೆ. ಆದರೆ, ನನ್ನ ಎದುರಾಳಿ ಸೋತರೆ ಅವರು ಶಾಸಕರಾಗಿಯೇ ಇರುತ್ತಾರೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಹೇಳಿದರು.
ಬಳ್ಳಾರಿ (ಏ.01): ಈ ಚುನಾವಣೆಯಲ್ಲಿ ನಾನು ಸೋತರೆ ಮನೆಗೆ ಹೋಗುತ್ತೇನೆ. ಆದರೆ, ನನ್ನ ಎದುರಾಳಿ ಸೋತರೆ ಅವರು ಶಾಸಕರಾಗಿಯೇ ಇರುತ್ತಾರೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಹೇಳಿದರು. ನಗರದಲ್ಲಿ ಜರುಗಿದ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ನನ್ನನ್ನು ಸೋಲಿಸಲು ಕಾಂಗ್ರೆಸ್ ಹಠಕ್ಕೆ ಬಿದ್ದಿದೆ. ಹೀಗಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ನನ್ನ ವಿರುದ್ಧ ಕೆಲಸ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ. 1999ರ ಬಳಿಕ ಬಳ್ಳಾರಿಯಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಈ ಬಾರಿಯೂ ಗೆಲ್ಲುವುದಿಲ್ಲ. ಶ್ರೀರಾಮುಲುನನ್ನು ರಾಜಕೀಯದಿಂದ ಮಟ್ಟ ಹಾಕಲು ಕಾಂಗ್ರೆಸ್ ನೋಡುತ್ತಿದೆ.
ಅದು ಖಂಡಿತ ಸಾಧ್ಯವಾಗುವುದಿಲ್ಲ. ಈ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮತ್ತಷ್ಟು ಬಲ ಬಂದಿದೆ. ಮೈತ್ರಿ ಮಾಡಿಕೊಂಡಾಗ ಪ್ರತಿ ಬಾರಿಯೂ ನಾವು ಗೆದ್ದಿದ್ದೇವೆ. ಈ ಬಾರಿಯೂ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, ಮೈತ್ರಿ ಧರ್ಮವನ್ನು ಪಾಲಿಸಿಕೊಂಡು ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡೋಣ. ಮಾಜಿ ಪ್ರಧಾನಿ ದೇವೇಗೌಡರು ದೇಶಕ್ಕೆ ನರೇಂದ್ರ ಮೋದಿ ಅನಿವಾರ್ಯ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಮೋದಿ ಅವರಿಂದ ದೇಶದ ಮತ್ತಷ್ಟು ಪ್ರಗತಿಯನ್ನು ನಿರೀಕ್ಷಿಸಲಾಗುತ್ತಿದೆ. ಕರ್ನಾಟಕದಲ್ಲಿ ಅತಿಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸುವತ್ತ ಗಮನ ಹರಿಸಿ, ಶ್ರಮಿಸಬೇಕಾಗಿದೆ ಎಂದರು.
undefined
ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್, ದೇವೇಗೌಡರು ದೇಶದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಕರ್ನಾಟಕ ಪ್ರಗತಿಗೆ ದೇವೇಗೌಡರು ನೀಡಿದ ಕೊಡುಗೆ ಅಪಾರವಾದದ್ದು. ಯಾವುದೇ ಕಪ್ಪುಚುಕ್ಕೆ ಇಲ್ಲದೆ ರಾಜಕೀಯ ಹೋರಾಟ ನಡೆಸಿದ ಮಹನೀಯರಾಗಿದ್ದಾರೆ. ದೇಶದಲ್ಲಿ ಬಿಜೆಪಿ ಹಾಗೂ ನರೇಂದ್ರ ಮೋದಿ ಅವರ ಪರ ಅಲೆಯಿದೆ. ಇಡೀ ದೇಶವೇ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಆಶಿಸುತ್ತಿದೆ ಎಂದು ತಿಳಿಸಿದರು. ಜೆಡಿಎಸ್ ಶಾಸಕ ನೇಮಿರಾಜ ನಾಯ್ಕ ಮಾತನಾಡಿ, ನರೇಂದ್ರ ಮೋದಿ ದೇವೇಗೌಡರ ಮನಸ್ಸು ಗೆದ್ದಿದ್ದಾರೆ. ದೇವೇಗೌಡರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅಪಾರ ಅಭಿಮಾನವಿದೆ.
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಂಗಳೂರು ಟು ತುಮಕೂರು ಮೆಟ್ರೋ ಕಾರ್ಯ ಚುರುಕು!
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು. ಈ ದೇಶದ ಭವಿಷ್ಯದ ದೃಷ್ಟಿಯಿಂದ ಕೇಂದ್ರದಲ್ಲಿ ಮೋದಿ ಪ್ರಧಾನಮಂತ್ರಿಯಾಗಬೇಕು ಎಂಬುದು ದೇವೇಗೌಡರ ಆಶಯವಾಗಿದೆ. ಚುನಾವಣೆಯಲ್ಲಿ ಶ್ರೀರಾಮುಲು ಅವರನ್ನು ಗೆಲ್ಲಿಸುತ್ತೇವೆ. ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಅತಿಹೆಚ್ಚು ಲೀಡ್ ನೀಡುತ್ತೇವೆ ಎಂದು ಹೇಳಿದರು. ಮಾಜಿ ಶಾಸಕರಾದ ಜಿ.ಸೋಮಶೇಖರರೆಡ್ಡಿ, ಎಂ.ಎಸ್.ಸೋಮಲಿಂಗಪ್ಪ, ಅನಿಲ್ ಲಾಡ್, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ಕೊಟ್ಟೂರಿನ ಎಂ.ಎಂ.ಜೆ. ಹರ್ಷವರ್ಧನ, ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್‌ನ ಜಿಲ್ಲಾ ಪ್ರಮುಖರು ಸಮಾರಂಭದಲ್ಲಿ ಭಾಗವಹಿಸಿದ್ದರು.