ಬೆಂಗಳೂರು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರವೀಣ್ ಪೀಟರ್ ಉಮೇದುವಾರಿಕೆ| ನಾಮಪತ್ರ ಸಲ್ಲಿಸುವ ವೇಳೆ ಸಾಥ್ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕರಾದ ಎನ್.ಎ.ಹ್ಯಾರಿಸ್|
ಬೆಂಗಳೂರು(ಅ.07): ವಿಧಾನ ಪರಿಷತ್ ಚುನಾವಣೆಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್.ಪ್ರವೀಣ್ ಕುಮಾರ್ (ಪ್ರವೀಣ್ ಪೀಟರ್) ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಶಾಂತಿನಗರದಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ತೆರಳಿ ನಾಮಪತ್ರ ಸಲ್ಲಿಸುವ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕರಾದ ಎನ್.ಎ.ಹ್ಯಾರಿಸ್ ಸಾಥ್ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಭ್ಯರ್ಥಿ ಪ್ರವೀಣ್ ಪೀಟರ್ ಮಾತನಾಡಿ, ಈ ಹಿಂದೆ ನಕಲಿ ಮತಗಳಿಂದ ಚುನಾವಣೆಯನ್ನು ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಿದ್ದರು. ಈಗ ಅಂತಹ ಮತಗಳನ್ನು ತೆಗೆದು ಹಾಕಿಸಲಾಗಿದ್ದು ಈಗ ಅವರು ಗೆದ್ದು ಬರಲಿ ಎಂದು ಬಿಜೆಪಿ ಅಭ್ಯರ್ಥಿಗೆ ಸವಾಲು ಹಾಕಿದರು.
ನಾಮಪತ್ರ ಸಲ್ಲಿಸಿದ ನಿವೃತ್ತ ಶಿಕ್ಷಕ : 1.44 ಕೋಟಿ ಆಸ್ತಿ ಘೋಷಣೆ
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ, ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗಿದ್ದು ಹೈಕಮಾಂಡ್‌ಗೆ ಕಳುಹಿಸಿದ್ದೇವೆ. ಆ ಪಟ್ಟಿಯಲ್ಲಿ ಮುನಿರತ್ನ ಹೆಸರು ಇಲ್ಲ. ಮುನಿರತ್ನ ಅವರ ಹೆಸರು ಇದೆ ಎಂಬುದು ಊಹಾತ್ಮಕವಾಗಿದ್ದು, ಅದಕ್ಕೆಲ್ಲ ಉತ್ತರಿಸುವುದಿಲ್ಲ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ದಾಳಿ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಮುಖಂಡರು ಸಿಬಿಐ ದಾಳಿ ಸಮರ್ಥಿಸಿಕೊಂಡಿದ್ದಾರೆ. ಇಡಿ, ಐಡಿ, ಸಿಬಿಐ ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡಿದೆ. ಬಿಜೆಪಿ ವಿರುದ್ಧ ಮಾತನಾಡಿದರೆ ಸಾಕು ತನಿಖಾ ಸಂಸ್ಥೆಗಳಿಂದ ನೋಟಿಸ್ ಬರುತ್ತದೆ. ಇದು ಖಂಡನೀಯ. ಪ್ರಜಾಪ್ರಭುತ್ವ ವಿರೋಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.