ಬಿಜೆಪಿ ನಾಯ​ಕರ ಆಸ್ತಿ ವಿರುದ್ಧ ‘ಕೈ’ ಹೋರಾ​ಟ

By Kannadaprabha News  |  First Published Oct 7, 2020, 8:18 AM IST

ಬಿಜೆಪಿ ನಾಯಕರ ಆದಾಯ ಹೆಚ್ಚಳದ ಆಸ್ತಿ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವ ಮೂಲಕ ತಿರುಗೇಟು ನೀಡಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ.
 


 ಬೆಂಗಳೂರು (ಅ.07):  ಕಾಂಗ್ರೆಸ್‌ ನಾಯಕರ ವಿರುದ್ಧ ಸಿಬಿಐ ದಾಳಿ ನಡೆಸಿದ ಬೆನ್ನಲ್ಲೇ ಬಿಜೆಪಿ ನಾಯಕರ ಆದಾಯ ಹೆಚ್ಚಳದ ಆಸ್ತಿ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವ ಮೂಲಕ ತಿರುಗೇಟು ನೀಡಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ.

ಮಂಗಳವಾರ ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿದ ಕೆಪಿಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥ ಪ್ರಿಯಾಂಕ ಖರ್ಗೆ ಅವರೊಂದಿಗೆ ಮಾತುಕತೆ ನಡೆಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು, ಚುನಾವಣೆ ಅಫಿಡವಿಟ್‌ ಆಧಾರವಾಗಿಟ್ಟುಕೊಂಡು ಬಿಜೆಪಿ ನಾಯಕರ ಆದಾಯ ಹೆಚ್ಚಳದ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಬಿಜೆಪಿಯವರ ಆದಾಯ ದುಪ್ಪಟ್ಟಾಗಿರುವ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಬಿಜೆಪಿ ನಾಯಕರು ಯಾರಿಗೇನು ಕಡಿಮೆಯಿಲ್ಲ ಎಂಬ ಭಾವನೆ ಬರುವಂತೆ ಸತ್ಯಾಂಶಗಳನ್ನು ಪ್ರಚಾರ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Tap to resize

Latest Videos

ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಡಿ.ಕೆ.ಶಿವಕುಮಾರ್ ...

ಸಿಬಿಐ ದಾಳಿಯಿಂದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಬಾರದು. ಈ ನಿಟ್ಟಿನಲ್ಲಿ ಬಿಜೆಪಿಯವರ ಭ್ರಷ್ಟಾಚಾರ, ಅಕ್ರಮ ಆಸ್ತಿ ಸಂಗ್ರಹ ಇತ್ಯಾದಿ ಮಾಹಿತಿ ಕಲೆ ಹಾಕಿ ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಹಾಕುವ ಮೂಲಕ ನಾಡಿನ ಜನರ ಗಮನ ಸೆಳೆಯುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ಡಿ.ಕೆ.ಶಿವಕುಮಾರ್‌ ಅವರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ ಖರ್ಗೆ, ‘ಶಿವಕುಮಾರ್‌ ವಿರುದ್ಧ ನಡೆದ ಸಿಬಿಐ ದಾಳಿ ರಾಜಕೀಯ ಪ್ರೇರಿತವಾಗಿದೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತವನ್ನು ಬಿಂಬಿಸಿದ್ದಕ್ಕೆ ಬಿಜೆಪಿ ಸಿಬಿಐ ಬಳಕೆ ಮಾಡಿಕೊಂಡು ಕಾಂಗ್ರೆಸ್‌ ಮುಖಂಡರ ಮೇಲೆ ದಾಳಿ ನಡೆಯುತ್ತಿದ್ದು, ಬಿಜೆಪಿ ನಾಯಕ ಅಕ್ರಮ ಅಸ್ತಿ ಬಗ್ಗೆಯೂ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಪೊಲೀಸರು ವಾಟ್ಸ್‌ ಆ್ಯಪ್‌ ಸಂದೇಶಗಳನ್ನು ಆಧಾರವಾಗಿಟ್ಟುಕೊಂಡು ಡ್ರಗ್ಸ್‌ ದಂಧೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅದೇ ರೀತಿ ಬಿಡಿಎ ಅವ್ಯವಹಾರದ ಪ್ರಕರಣದಲ್ಲಿ ಬಿಎಸ್‌ವೈ ಮೊಮ್ಮಗ ಬ್ಯಾಂಕ್‌ ಖಾತೆಗೆ ಆರ್‌ಟಿಜಿಎಸ್‌ ಆಗಿರುವ ಬಗ್ಗೆ ವಾಟ್ಸ್‌ಆ್ಯಪ್‌ ಸಂದೇಶಗಳಿವೆ. ಈ ಬಗ್ಗೆಯೂ ತನಿಖಾ ಸಂಸ್ಥೆಗಳು ತನಿಖೆ ನಡೆಸಲಿ. ಅದನ್ನು ಬಿಟ್ಟು ಕಾಂಗ್ರೆಸ್‌ನವರನ್ನೇ ಗುರಿ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು.

ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಎಲ್ಲಿ ಹೋರಾಟ ನಡೆಸುತ್ತವೆಯೋ ಅಲ್ಲಿ ಇಂತಹ ದಾಳಿ ನಡೆಯುತ್ತವೆ. ಡಿ.ಕೆ. ಶಿವಕುಮಾರ್‌ ವಿರುದ್ಧ ನಡೆದ ಸಿಬಿಐ ದಾಳಿ ರಾಜಕೀಯ ದ್ವೇಷದ ಮತ್ತು ಹೋರಾಟದ ಧ್ವನಿ ಕುಗ್ಗಿಸುವ ಕುತಂತ್ರವಾಗಿದೆ. ಕೇಂದ್ರ ಸರ್ಕಾರ ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡುವ ಪ್ರವೃತ್ತಿಯನ್ನು ಬೆಳೆಸಿದೆ. ಸರ್ಕಾರದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿದ್ದಕ್ಕೆ ಅದರ ಪರಿಣಾಮವನ್ನು ಕಾಂಗ್ರೆಸ್‌ ಮುಖಂಡರು ಎದುರಿಸಬೇಕಾಗಿದೆ ಎಂದು ಕಿಡಿಕಾರಿದರು.

click me!