* ರಂಗೇರಿದ ಸಿಂದಗಿ, ಹಾನಗಲ್ ಉಪಚುನಾವಣೆ
* ಎರಡು ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆ
* ಅಕ್ಟೋಬರ್ 30 ರಂದು ನಡೆಯಲಿರುವ ಮತದಾನ
ಬೆಂಗಳೂರು, (ಅ.04): ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ವಿಧಾಸಭಾ ಕ್ಷೇತ್ರಗಳಿಗೆ ಉಪಚುನಾವಣೆ (By Election) ದಿನಾಂಕ ಘೋಷಣೆಯಾಗಿದೆ. ಇದಕ್ಕೆ ಇದೀಗ ಕಾಂಗ್ರೆಸ್ ತನ್ನ ಅಭ್ಯರ್ಥಿ ಹೆಸರುಗಳನ್ನ ಘೋಷಣೆ ಮಾಡಿದೆ.
ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಎಂ.ಸಿ. ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ಶ್ರೀನಿವಾಸ್ ಮಾನೆ ಅವರನ್ನು ಕಾಂಗ್ರೆಸ್ (Congress) ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.
ಹಾನಗಲ್ ಉಪಸಮರ : ಶಿವಕುಮಾರ್ ಉದಾಸಿ/ಪತ್ನಿಗೆ ಟಿಕೆಟ್ ಕೊಟ್ಟರೆ ಪರಿಣಾಮವೇನು?
ಜೆಡಿಎಸ್ ಶಾಸಕರಾಗಿದ್ದ ಎಂ.ಸಿ. ಮನಗೂಳಿ ಅವರ ನಿಧನದಿಂದ ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದ್ರೆ, ಬಿಜೆಪಿ ಶಾಸಕರಾಗಿದ್ದ ಸಿ.ಎಂ. ಉದಾಸಿ ಅವರ ಅಕಾಲಿಕ ನಿಧನದಿಂದ ಹಾನಗಲ್ ವಿಧಾನಸಭಾ ಕ್ಷೇತ್ರ ಬೈ ಎಲೆಕ್ಷನ್ ಘೋಷಣೆಯಾಗಿದೆ.
ಈಗಾಗಲೇ ಜೆಡಿಎಸ್ (JDS) ಸಿಂಧಗಿಗೆ ನಿಯಾಜ ಶಕೀಲಾ ಅಂಗಡಿ ಹಾಗೂ ಹಾನಗಲ್‌ಗೆ ನಿಯಾಜ್ ಶೇಖ್ ಅವರನ್ನ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.
ಟಿಕೆಟ್ ಹಂಚಿಕೆ ಬಿಜೆಪಿಗೆ ದೊಡ್ಡ ಸವಾಲ್ : ಬಿಜೆಪಿಯಲ್ಲಿ ಭರ್ಜರಿ ಲಾಬಿ
ಇನ್ನು ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು, ಗೆಲ್ಲುವ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ನಾಯಕರು ಚರ್ಚೆ ನಡೆಸಿದ್ದಾರೆ. ನಾಳೆ(ಅ.06) ಸಂಜೆಯೊಳಗೆ ಬಿಜೆಪಿ (BJP) ಎರಡೂ ಕ್ಷೇತ್ರಗಳಿ ತನ್ನ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆಗಳಿವೆ.
ಇನ್ನು ಇದೇ ಅಕ್ಟೋಬರ್ 30 ರಂದು ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ನವೆಂಬರ್ 02ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.