ನಾನು ಬಾದಾಮಿ ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ ಎನ್ನುವಂತಿಲ್ಲ. ಶೇ.100ರಷ್ಟು ಗೆದ್ದೇ ಗೆಲ್ಲುತ್ತೇನೆ. ಬಾದಾಮಿ ಜನರಿಂದಾಗಿಯೇ ನಾನು 5 ವರ್ಷ ಶಾಸಕನಾಗಿ ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ: ಸಿದ್ದರಾಮಯ್ಯ
ವಿಜಯಪುರ(ಫೆ.24): ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧಿಸಬೇಕು ಎಂಬುವುದರ ಬಗ್ಗೆ ನಾನು ತೀರ್ಮಾನಿಸುತ್ತೇನೆ. ಇದನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುತ್ತದೆ. ಈ ಬಗ್ಗೆ ಹೇಳಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿಧಾನಸಭೆ ಅಧಿವೇಶನದಲ್ಲಿ ಸಿದ್ದರಾಮಯ್ಯನವರು ಬಾದಾಮಿ ಕ್ಷೇತ್ರ ಬದಲಿಸುವುದರಿಂದ ಅಲ್ಲಿನ ಮತದಾರಿರಗೆ ದ್ರೋಹ ಬಗೆದಂತಾಗುತ್ತದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ವಿಜಯಪುರದಲ್ಲಿ ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ ಈ ರೀತಿ ಪ್ರತಿಕ್ರಿಯೆ ನೀಡಿದರು.
ವಿಜಯಪುರ: ಮತ್ತೆ ಬಬಲಾದಿ ಮುತ್ಯಾನ ಸ್ಫೋಟಕ ಭವಿಷ್ಯ, ರಾಜ್ಯ ರಾಜಕಾರಣದಲ್ಲಿ ತಿರುವು..!
ನಾನು ಎಲ್ಲಿಂದ ಸ್ಪರ್ಧಿಸಬೇಕು ಎಂದು ನಾನು ತೀರ್ಮಾನ ಮಾಡುತ್ತೇನೆ. ಬಿ.ಎಸ್.ಯಡಿಯೂರಪ್ಪ ತೀರ್ಮಾನ ಮಾಡುವುದಲ್ಲ. ನಾನು ಬಾದಾಮಿ ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ ಎನ್ನುವಂತಿಲ್ಲ. ಶೇ.100ರಷ್ಟು ಗೆದ್ದೇ ಗೆಲ್ಲುತ್ತೇನೆ. ಬಾದಾಮಿ ಜನರಿಂದಾಗಿಯೇ ನಾನು 5 ವರ್ಷ ಶಾಸಕನಾಗಿ ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ. ಹೀಗಾಗಿ ಬರುವ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರ ಬದಲಿಸಿ ಬೇರೆ ಕ್ಷೇತ್ರದಿಂದ ಸ್ಪರ್ಧಿಸುವುದರಿಂದ ಬಾದಾಮಿ ಜನತೆಗೆ ನಾನು ದ್ರೋಹ ಮಾಡಿದಂತಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ವಿಧಾನ ಪರಿಷತ್ ಪ್ರತಿ ಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ ಮತ್ತಿತರ ನಾಯಕರು ಇದ್ದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ ಮೇಲೆ ಸ್ವಲ್ಪ ಡಿಸ್ಟರ್ಬ್ ಆಗಿದ್ದಾರೆ. ಪಾಪ ನನ್ನ ಮೇಲೆ ಬಹಳ ಪ್ರೀತಿಯಿಂದ ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಹೇಳಿರಬಹುದು. ಯಡಿಯೂರಪ್ಪನವರಿಗೆ ಆ ದೇವರು ಆಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.