
ಬೆಂಗಳೂರು (ಡಿ.15): ‘ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ರೌಡಿ ಶೀಟರ್ ಆಗಿದ್ದವರು, ಈಗಲೂ ಅವರ ಮೇಲೆ 4 ಕ್ರಿಮಿನಲ್ ಕೇಸ್ ಇವೆ. ಹೀಗಾಗಿ ಅವರನ್ನು ಇನ್ನು ಮುಂದೆ ‘ಕ್ರಿಮಿನಲ್ 420 ರವಿ’ ಎಂದೇ ಕರೆಯುತ್ತೇವೆ. ಜತೆಗೆ 3 ಸಾವಿರ ಕೋಟಿ ರು.ಗಳಷ್ಟುಬೇನಾಮಿ ಆಸ್ತಿ ಹೊಂದಿರುವ ಸಿ.ಟಿ. ರವಿ ವಿರುದ್ಧ ಬೇನಾಮಿ ಕಾಯ್ದೆ ಅಡಿ ಐಟಿ ಹಾಗೂ ಜಾರಿ ನಿರ್ದೇಶನಾಲಯಕ್ಕೆ (ಇಡಿ) ದೂರು ನೀಡುತ್ತೇವೆ’ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮಣ್ ಹಾಗೂ ಕೆಪಿಸಿಸಿ ವಕ್ತಾರ ರಮೇಶ್‌ಬಾಬು ಸಿ.ಟಿ. ರವಿ ವಿರುದ್ಧ ಕಿಡಿ ಕಾರಿದರು.
ಲಕ್ಷ್ಮಣ್ ಮಾತನಾಡಿ, ಸಿ.ಟಿ ರವಿ ಅವರ ಬಳಿ 1996ರಿಂದ 1999ರವರೆಗೆ ಏನೂ ಇರಲಿಲ್ಲ. ಚಿಕ್ಕಮಗಳೂರು ನಗರ ಹಾಗೂ ಗ್ರಾಮಾಂತರ ಠಾಣೆಗಳಲ್ಲಿ ಇತ್ತೀಚಿನವರೆಗೂ ಅವರ ಮೇಲೆ ರೌಡಿ ಶೀಟರ್ ತ್ತು. ಈಗಲೂ ಅವರದ್ದೇ ಚುನಾವಣಾ ಪ್ರಮಾಣಪತ್ರದ ಪ್ರಕಾರ ಅವರ ಮೇಲೆ 4 ಕ್ರಿಮಿನಲ್ ಪ್ರಕರಣ ಇವೆ. ಹೀಗಾಗಿ ಇನ್ನು ಮುಂದೆ ಅವರನ್ನು ‘ಕ್ರಿಮಿನಲ್ 420 ರವಿ’ ಎಂದು ಕರೆಯುತ್ತೇವೆ ಎಂದು ಹೇಳಿದ್ದಾರೆ.
ಜಿಪಂ, ತಾಪಂ ಚುನಾವಣೆ ವಿಳಂಬ: ಸರ್ಕಾರಕ್ಕೆ ದಂಡ ವಿಧಿಸಿದ ಹೈಕೋರ್ಟ್
ಅತಿ ಭ್ರಷ್ಟರಾಗಿರುವ ಅವರು ಚಿಕ್ಕಮಗಳೂರಿನ ಶೇ.95 ರಷ್ಟು ಕಾಮಗಾರಿಗಳನ್ನು ಅವರ ಭಾವ ಎಚ್.ಪಿ. ಸುದರ್ಶನ್ ಮೂಲಕ ಮಾಡಿಸುತ್ತಿದ್ದಾರೆ. ಸುದರ್ಶನ್ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಮನೆಗೆ ಕರೆಸಿ ಅನಧಿಕೃತವಾಗಿ ಸಭೆ ನಡೆಸುತ್ತಾರೆ. ನಮಗಿರುವ ಮಾಹಿತಿ ಪ್ರಕಾರ ಸಿ.ಟಿ. ರವಿ ಅವರು ದುಬೈನಲ್ಲಿ ಎರಡು ಹೋಟೆಲ್, ದೇವನಹಳ್ಳಿಯಲ್ಲಿ 2-3 ಅಪಾರ್ಚ್‌ಮೆಂಟ್, ಎಚ್‌ಎಎಲ್ ರಸ್ತೆ ಬಳಿ 10 ಮನೆಗಳಿವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಇದೆಲ್ಲವನ್ನೂ ತನಿಖೆ ಮಾಡುತ್ತೇವೆ ಎಂದರು. ಈಗಲೂ ಅವರ ಮೇಲೆ ಬೇನಾಮಿ ಕಾಯಿದೆ ಅಡಿ ದೂರು ದಾಖಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಬಹಿರಂಗ ಚರ್ಚೆಗೆ ಬನ್ನಿ: ‘ನಿಮ್ಮ ಮೇಲಿನ ನನ್ನ ಆರೋಪಗಳಿಗೆ ನಾನು ಬದ್ಧನಾಗಿದ್ದೇನೆ. ಬೇಕಾದರೆ ನಿಮ್ಮ ಕಚೇರಿಗೆ ಒಬ್ಬನೇ ಬರುತ್ತೇನೆ. ಮಾಧ್ಯಮಗಳ ಮುಂದೆ ಚರ್ಚೆ ಮಾಡೋಣ. ನಿಮ್ಮ ಇತಿಹಾಸವೇನು? 20 ವರ್ಷಗಳ ಹಿಂದೆ ನೀವು ಏನಾಗಿದ್ದಿರಿ? ನಿಮ್ಮ ವಿರುದ್ಧ ಯಾವ ಕಾರಣಕ್ಕೆ ಕ್ರಿಮಿನಲ್ ಪ್ರಕರಣಗಳಿವೆ? ಯಾವ ಕಾರಣಕ್ಕೆ ನೀವು ರೌಡಿ ಶೀಟರ್ ಆಗಿದ್ದೀರಿ? ರೌಡಿಶೀಟರ್ ಯಾಕೆ ಸಮರ್ಥಿಸಿಕೊಂಡಿದ್ದೀರಿ?’ ಎಂದು ಚರ್ಚೆ ಆಗಲಿ ಎಂದು ಲಕ್ಷ್ಮಣ್ ಸವಾಲು ಹಾಕಿದರು.
ನನ್ನ ಅಭಿವೃದ್ಧಿ ಕಾರ್ಯ ಕಣ್ಣಿದ್ದವರು ನೋಡುತ್ತಾರೆ: ಸಿ.ಟಿ.ರವಿ
ಸಂಚಿಕೆವಾರು ಹೊರ ತರುತ್ತೇವೆ: ವಕ್ತಾರ ರಮೇಶ್‌ಬಾಬು ಮಾತನಾಡಿ, ‘ಸಿ.ಟಿ. ರವಿ 3 ಸಾವಿರ ಕೋಟಿಗೂ ಹೆಚ್ಚು ಬೇನಾಮಿ ಆಸ್ತಿ ಹೊಂದಿದ್ದಾರೆ. 1996 ರಿಂದ ಈವರೆಗೂ ದತ್ತ ಜಯಂತಿ ಹೆಸರಿನಲ್ಲಿ ವಸೂಲಿ ಮಾಡುತ್ತಿದ್ದಾರೆ. ಮಾತೆತ್ತಿದರೆ ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡುವ ನೀವು ಸತ್ಯವಂತರಾಗಿದ್ದರೆ ನಿಮ್ಮ ಆದಾಯ, ಆಸ್ತಿ ಎಲ್ಲಿಂದ ಬಂತು? ಹೇಗೆ ಬಂತು ಎಂಬುದನ್ನು ತನಿಖೆ ಮಾಡಿಸಿ’ ಎಂದು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.