ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಇವರೇ ಕಾರಣ: ಜಾರಕಿಹೊಳಿ ವಿರುದ್ಧ ಸಿಎಂಗೆ ದೂರು

By Kannadaprabha NewsFirst Published Jan 29, 2022, 6:39 AM IST
Highlights

*   ಕ್ರಮ ಕೈಗೊಳ್ಳುವಂತೆ ಸಚಿವ ಉಮೇಶ್‌ ಕತ್ತಿ ತಂಡ ಆಗ್ರಹ
*  ಮೇಲ್ಮನೆ ಬಿಜೆಪಿ ಅಭ್ಯರ್ಥಿ ಸೋಲಿಗೆ ಜಾರಕಿಹೊಳಿ ಕಾರಣ
*   ಶಾಸಕ ಕುಮಟಳ್ಳಿ, ಶ್ರೀಮಂತ ಪಾಟೀಲ್‌ ವಿರುದ್ಧವೂ ದೂರು
 

ಬೆಂಗಳೂರು(ಜ.29):  ರಾಜಕೀಯವಾಗಿ ಪ್ರಬಲವಾಗಿರುವ ಬೆಳಗಾವಿ(Belagavi) ಜಿಲ್ಲೆಯ ಆಡಳಿತಾರೂಢ ಬಿಜೆಪಿಯ ಆಂತರಿಕ ತಿಕ್ಕಾಟ ರಾಜಧಾನಿ ಬೆಂಗಳೂರಿಗೆ ತಲುಪಿದ್ದು, ಪಕ್ಷದ ಜಾರಕಿಹೊಳಿ ಸಹೋದರರ(Jarkiholi Brothers) ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷದ ಜಿಲ್ಲಾ ಮುಖಂಡರು ಒಟ್ಟಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರಿಗೆ ದೂರು ನೀಡಿದ್ದಾರೆ.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್‌ ಕತ್ತಿ(Umesh Katti) ನೇತೃತ್ವದಲ್ಲಿ ಸಂಸದರಾದ ಸದಸ್ಯ ಈರಣ್ಣ, ಅಣ್ಣಾ ಸಾಹೇಬ್‌ ಜೊಲ್ಲೆ, ಶಾಸಕರಾದ ಲಕ್ಷ್ಮಣ ಸವದಿ(Laxman Savadi), ಅಭಯ್‌ ಪಾಟೀಲ್‌, ಮಹಂತೇಶ್‌ ಕವಟಗಿಮಠ, ಮಹಾದೇವಪ್ಪ ಯಾದವಾಡ, ಅನಿಲ್‌ ಬೆನಕೆ ಮತ್ತಿತರರು ಶುಕ್ರವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ದೂರು ಸಲ್ಲಿಸಿದರು.

Karnataka Politics: ಡಿಕೆಶಿ ಜೊತೆ ಸೇರಿ ಲಕ್ಷ್ಮಣ ಸವದಿ ಕುತಂತ್ರ: ಲಖನ್‌ ಜಾರಕಿಹೊಳಿ ವಾಗ್ದಾಳಿ

ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಸೋಲಿಗೆ ಸಹೋದರರಾದ ರಮೇಶ್‌ ಜಾರಕಿಹೊಳಿ(Ramesh Jarkiholi) ಮತ್ತು ಬಾಲಚಂದ್ರ ಜಾರಕಿಹೊಳಿ(Balachandra Jarkiholi) ಅವರೇ ಪ್ರಮುಖ ಕಾರಣ. ಅವರು ತಮ್ಮ ಮತ್ತೊಬ್ಬ ಸಹೋದರ ಲಖನ್‌ ಜಾರಕಿಹೊಳಿಯನ್ನು(Lakhan Jarkiholi) ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಗೆಲ್ಲಿಸಿಕೊಂಡಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಬೆಳಗಾವಿಯಲ್ಲಿ ಬಲಿಷ್ಠ ಸಂಘಟನೆ ಹೊಂದಿರುವ ಪಕ್ಷ ದುರ್ಬಲವಾಗಲಿದೆ. ತಕ್ಷಣ ಏನಾದರೂ ಕ್ರಮ ಕೈಗೊಂಡು ಅವರನ್ನು ಮಟ್ಟಹಾಕಬೇಕು ಎಂದು ಅಲವತ್ತುಕೊಂಡಿದ್ದಾರೆ ಎನ್ನಲಾಗಿದೆ.

ಕಳೆದ ವಾರ ಬೆಳಗಾವಿಯಲ್ಲಿ ಇದೇ ಮುಖಂಡರು ಜಾರಕಿಹೊಳಿ ಸಹೋದರರನ್ನು ದೂರವಿಟ್ಟು ಸಭೆ ನಡೆಸಿದ್ದರು. ಆ ಸಭೆಯಲ್ಲಿ ಎಲ್ಲ ಮಾಹಿತಿ ಸಂಗ್ರಹಿಸಿದ್ದ ಅವರು ಇದೀಗ ಬೆಂಗಳೂರಿನಲ್ಲಿ(Bengaluru) ಮುಖ್ಯಮಂತ್ರಿಗಳನ್ನು ಕಂಡು ವಿವರ ಹಂಚಿಕೊಂಡರು. ಜಾರಕಿಹೊಳಿ ಸಹೋದರರ ಜತೆ ಅವರ ಇಬ್ಬರು ಶಾಸಕರಾದ ಮಹೇಶ್‌ ಕುಮಟಳ್ಳಿ ಮತ್ತು ಶ್ರೀಮಂತ್‌ ಪಾಟೀಲ್‌ ಅವರ ಬಗ್ಗೆಯೂ ಪ್ರಸ್ತಾಪಿಸಿದ ಮುಖಂಡರು, ಈ ಇಬ್ಬರು ಶಾಸಕರೂ ಪಕ್ಷದ ವಿರುದ್ಧವಾಗಿಯೇ ಕೆಲಸ ಮಾಡಿದ್ದಾರೆ ಎಂದು ದೂರಿದರು.

ಅಲ್ಲದೆ, ಮುಂಬರುವ ನಿಗಮ ಮಂಡಳಿಗಳ ನೇಮಕದಲ್ಲಿ ಜಾರಕಿಹೊಳಿ ಸಹೋದರರ ಗುಂಪಿಗೆ ಯಾವುದೇ ಪ್ರಾಶಸ್ತ್ಯ ನೀಡಬಾರದು ಎಂಬ ಮನವಿಯನ್ನೂ ಮುಖಂಡರು ಮಾಡಿದರು ಎಂದು ತಿಳಿದು ಬಂದಿದೆ.
ಮುಖಂಡರ ಅಹವಾಲು ಆಲಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಈ ಬಗ್ಗೆ ಪಕ್ಷದ ವರಿಷ್ಠರಿಗೂ ಮಾಹಿತಿ ಇದೆ. ಮತ್ತೊಮ್ಮೆ ಇದರ ಬಗ್ಗೆ ವರಿಷ್ಠರೊಂದಿಗೆ ಚರ್ಚೆ ನಡೆಸಿ ನೀವು ನೀಡಿದ ಎಲ್ಲ ವಿವರಗಳನ್ನು ಹಂಚಿಕೊಳ್ಳುತ್ತೇನೆ. ರಮೇಶ್‌ ಜಾರಕಿಹೊಳಿ ಮತ್ತಿತರರು ಕಾಂಗ್ರೆಸ್‌(Congress) ತೊರೆದು ಬಿಜೆಪಿಗೆ(BJP) ಬಂದಿದ್ದರಿಂದ ಸರ್ಕಾರ ಅಸ್ತಿತ್ವಕ್ಕೆ ತರಲು ಸಾಧ್ಯವಾಗಿದೆ. ಹೀಗಾಗಿ, ಈ ವಿಷಯದಲ್ಲಿ ಆತುರದ ತೀರ್ಮಾನ ಕೈಗೊಳ್ಳದೆ ವರಿಷ್ಠರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು ಎನ್ನಲಾಗಿದೆ.

Karnataka Politics: ಬಿಜೆಪಿಗೆ ಬರುವವರನ್ನು ಡಿಕ್ಕೀಲಿ ಕೂರಿಸ್ತಾರಾ?: ಸತೀಶ್‌ ವ್ಯಂಗ್ಯ

ಕತ್ತಿ ಮನೆಯಲ್ಲಿ ಜಾರಕಿಹೊಳಿ ಬ್ರದರ್ಸ್‌ ಹೊರಗಿಟ್ಟು ಸಭೆ..!

ಬೆಳಗಾವಿ: ಸಚಿವ ಉಮೇಶ ಕತ್ತಿ(Umesh Katti) ಅವರ ಬೆಳಗಾವಿ(Belagavi) ನಿವಾಸದಲ್ಲಿ ಜ.23 ರಂದು ಜಾರಕಿಹೊಳಿ ಸಹೋದರರು ಮತ್ತವರ ಆಪ್ತರನ್ನು ಹೊರತುಪಡಿಸಿ ಜಿಲ್ಲೆಯ ಸಂಸದರು, ಶಾಸಕರು ಸಭೆ ನಡೆಸಿದ್ದು ತೀವ್ರ ಸಂಚಲನ ಮೂಡಿಸಿತ್ತು. ಮುಂಬರಲಿರುವ ಸಂಪುಟ ಸಭೆ ವಿಸ್ತರಣೆ, ನಿಗಮ-ಮಂಡಳಿ ರಚನೆ ಬಗ್ಗೆ ನಿರಂತರ 3 ಗಂಟೆಗಳ ಕಾಲ ಚರ್ಚೆ ನಡೆಸಲಾಗಿದೆ ಎಂದು ಹೇಳಲಾಗಿತ್ತು.

ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಈರಣ್ಣ ಕಡಾಡಿ, ಶಾಸಕರಾದ ಪಿ.ರಾಜೀವ್‌, ಮಹಾಂತೇಶ ದೊಡ್ಡಗೌಡರ, ಮಹಾದೇವಪ್ಪ ಯಾದವಾಡ, ಅಭಯ ಪಾಟೀಲ, ಅನಿಲ ಬೆನಕೆ, ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾತೇಂಶ ಕವಟಗಿಮಟ ಸಭೆಯಲ್ಲಿ ಪಾಲ್ಗೊಂಡಿದ್ದರು. ಬೆಳಗಾವಿ ಸಂಸದೆ ಮಂಗಲ ಅಂಗಡಿ ಅವರಿಗೆ ಆಹ್ವಾನ ನೀಡಿದ್ದರೂ ಬಂದಿರಲಿಲ್ಲ ಎನ್ನಲಾಗಿದೆ.
 

click me!