BBMP Elections : ಪಾಲಿಕೆ ಚುನಾವಣೆಯಲ್ಲಿ ಜಯ ನಿಶ್ಚಿತ ಎಂದ ಸಿಎಂ

By Kannadaprabha NewsFirst Published Jan 29, 2022, 4:45 AM IST
Highlights

- ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟುಸತ್ಯವೋ, ಬಿಬಿಎಂಪಿಯಲ್ಲಿ ಬಿಜೆಪಿ ಬಾವುಟ ರಾರಾಜಿಸುವುದು ಅಷ್ಟೇ ಸತ್ಯ 
- ಮುಖ್ಯಮಂತ್ರಿಯಾಗಿ ಆರು ತಿಂಗಳ ಅವಧಿ ಪೂರ್ಣಗೊಳಿಸಿದ ಬಸವರಾಜ ಬೊಮ್ಮಾಯಿ 
- ಹುಟ್ಟುಹಬ್ಬದ ಪ್ರಯುಕ್ತ ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಸಿಎಂಗೆ ಅಭಿನಂದನಾ ಸಮಾರಂಭ

ಬೆಂಗಳೂರು (ಜ. 29) :ಬಿಬಿಎಂಪಿ ಚುನಾವಣೆಯಲ್ಲಿ (BBMP Election) ಬಿಜೆಪಿ ಜಯಗಳಿಸುವುದು (BJP Win) ನಿಶ್ಚಿತವಾಗಿದೆ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟುಸತ್ಯವೋ, ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಬಾವುಟ ರಾರಾಜಿಸುವುದು ಅಷ್ಟೇ ಸತ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai ) ಹೇಳಿದ್ದಾರೆ.

ಮುಖ್ಯಮಂತ್ರಿಯಾಗಿ ಆರು ತಿಂಗಳ ಪೂರ್ಣಗೊಳಿಸಿದ ಹಿನ್ನೆಲೆ ಮತ್ತು ಹುಟ್ಟುಹಬ್ಬದ ಪ್ರಯುಕ್ತ ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು ಸಮಗ್ರ ಅಭಿವೃದ್ಧಿಯನ್ನು ಗಮನಿಸಿ ಬೆಂಗಳೂರಿನ ಜನರು ನಮ್ಮನ್ನು ಬೆಂಬಲಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಸರ್ಕಾರ ಮಾಡಿರುವ ಜನೋಪಯೋಗಿ ಕೆಲಸಗಳ ಬಗ್ಗೆ ಜನರಿಗೆ ತಿಳಿಹೇಳಬೇಕು. ನುಡಿದಂತೆ ನಡೆಯುವ ಸರ್ಕಾರ ನಮ್ಮದಾಗಿದ್ದು, ಆತ್ಮವಿಶ್ವಾಸದಿಂದ ಬೆಂಗಳೂರಲ್ಲಿ ಪ್ರಚಾರ ಕೈಗೊಳ್ಳಬೇಕು ಎಂದು ಕರೆ ನೀಡಿದರು.

ಅಭಿವೃದ್ಧಿ ಭದ್ರ ಬುನಾದಿ: ನಗರ-ಗ್ರಾಮೀಣ ಎಂಬ ಭೇದ ಇಲ್ಲದೆ ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪಂದಿಸಲಾಗಿದೆ. 750 ಅಂಗನವಾಡಿಗೆ ತಲಾ ಒಂದು ಲಕ್ಷ ರು., ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸರ್ವಸ್ಪರ್ಶಿ ಸರ್ವವ್ಯಾಪಿಯಾಗಿ ಕೆಲಸ ಮಾಡಲಾಗಿದೆ. ಬೆಂಗಳೂರು ಸಮಗ್ರ ಅಭಿವೃದ್ಧಿಗೆ 7,500 ಕೋಟಿ ರು. ನೀಡಲಾಗಿದೆ. 75 ಕೆರೆ, 75 ಕೊಳಗೇರಿಗಳ ಅಭಿವೃದ್ಧಿ ನಡೆಯುತ್ತಿದೆ. ಎಂತಹ ಸವಾಲಾದರೂ ಎದುರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ. ಆರು ತಿಂಗಳ ಆಡಳಿತದಲ್ಲಿ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಲಾಗಿದೆ ಎಂದರು.
ರಾಜಕೀಯ ಪಕ್ಷಗಳು ದೇಶಕ್ಕಾಗಿ ದುಡಿಯಬೇಕು. ಅದು ಪ್ರಜಾಪ್ರಭುತ್ವವನ್ನು ಉಳಿಸಬಲ್ಲದು. ಜನಸಂಘದ ದಿನಗಳಿಂದ ರಾಜಕೀಯ ಪ್ರಜ್ಞೆ ಬೆಳೆಸಲು ಪಕ್ಷ ಶ್ರಮಿಸಿದೆ. ರಾಷ್ಟ್ರೀಯತೆ, ಪ್ರಜಾಪ್ರಭುತ್ವದ ಉಳಿವಿಗೆ ನಮ್ಮ ಪಕ್ಷ ಶ್ರಮಿಸುತ್ತ ಬಂದಿದೆ. ಸೇವಾ ಮನೋಭಾವದಿಂದ ನಮ್ಮ ಪಕ್ಷ ಕೆಲಸ ನಿರ್ವಹಿಸುತ್ತಿದೆ. ಬೇರೆ ಪಕ್ಷಗಳಲ್ಲಿ ಎಲ್ಲವೂ ವ್ಯಾವಹಾರಿಕವಾಗಿರುತ್ತದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಸಂಸದರಾದ ಡಿ.ವಿ.ಸದಾನಂದಗೌಡ, ಪಿ.ಸಿ.ಮೋಹನ್‌, ಸಚಿವರಾದ ಎಸ್‌.ಟಿ.ಸೋಮಶೇಖರ್‌, ಆನಂದ್‌ ಸಿಂಗ್‌, ಮುನಿರತ್ನ ಇತರರು ಭಾಗವಹಿಸಿದ್ದರು.

Assets Of Political Parties : 7 ರಾಷ್ಟ್ರೀಯ ಪಕ್ಷಗಳ ಪೈಕಿ ಬಿಜೆಪಿ ಪಕ್ಷದ ಆಸ್ತಿಯೇ ಗರಿಷ್ಠ!
ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ: ಮೂಲಗಳ ಪ್ರಕಾರ ಬಿಬಿಎಂಪಿ ಚುನಾವಣೆ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ. ಬಿಬಿಎಂಪಿಯ 243 ವಾರ್ಡ್ ಗಳಿಗೆ (Ward) ಕಾರ್ಯಯೋಜನೆಗಳನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಈಗಾಗಲೇ ಮೂರು ದಿನಗಳ ಕಾರ್ಯಾಗಾರವನ್ನು ಆರಂಭಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ (Union Home Minister Amit Shah) ಇಡೀ ಕಾರ್ಯಾಗಾರದ ನೇತೃತ್ವ ವಹಿಸಿಕೊಂಡಿದ್ದಾರೆ. ಬಿಜೆಪಿ ಕೂಡ ಈ ಬಾರಿ ಅಧಿಕಾರಕ್ಕೆ ಏರುವ ವಿಶ್ವಾಸದಲ್ಲಿದ್ದು, ಕನಿಷ್ಠ 150 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಗುರಿಯಲ್ಲಿದೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬಿಜೆಪಿ ಪದಾಧಿಕಾರಿಗಳು, ಶಾಸಕರು ಹಾಗೂ ಬೆಂಗಳೂರು ಉತ್ತರ ವಿಭಾಗದ ಮಾಜಿ ಕಾರ್ಪೋರೇಟರ್ ಗಳ ಸಭೆಯನ್ನೂ ನಡೆಸಿದ್ದಾರೆ.

News Hour : ಬಿಎಸ್‌ವೈ ಮೊಮ್ಮಗಳ ಸುಸೈಡ್‌ಗೆ ಕಾರಣ? ಕರ್ನಾಟಕದಲ್ಲಿ ಬಿಸಿಯೇರಿದ ರಾಜಕಾರಣ
ಯಡಿಯೂರಪ್ಪ ಮತ್ತವರ ಕುಟುಂಬಕ್ಕೆ ಸಿಎಂ ಸಾಂತ್ವನ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮೊಮ್ಮಗಳಾದ ಡಾ. ಸೌಂದರ್ಯ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಮುಖ್ಯಮಂತ್ರಿ ಬೊಮ್ಮಾಯಿ ಅವರು ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಯಡಿಯೂರಪ್ಪ ಮತ್ತವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಸೌಂದರ್ಯ ಅವರ ನಿಧನದ ಸುದ್ದಿ ಆಘಾತ ತಂದಿದೆ ಎಂದು ಮುಖ್ಯಮಂತ್ರಿಗಳು ಕಂಬನಿ ಮಿಡಿದರು. ಡಾ.ಸೌಂದರ್ಯ ಅವರ ನಿಧನದ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬ ಸದಸ್ಯರಿಗೆ ನೀಡಲಿ ಎಂದು ಕೋರಿದರು.

click me!