ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ಮುಂದಾಗಿರುವ ಗೃಹಲಕ್ಷ್ಮಿ ಯೋಜನೆಯಲ್ಲಿ 2 ಸಾವಿರ ರುಪಾಯಿ ಪಡೆಯುವ ಯಜಮಾನಿ ಯಾರೆಂಬುದರ ಬಗ್ಗೆ ಮನೆ ಮನೆಗಳಲ್ಲಿ ಚರ್ಚೆ ನಡೆಯುತ್ತಿದ್ದು, ರೇಷನ್ ಕಾರ್ಡ್‌ಗಾಗಿ ಒಂದಾಗಿರುವ ಕುಟುಂಬಗಳು ಬೇರೆ ಬೇರೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಎಂ.ಅಫ್ರೋಜ್ ಖಾನ್
ರಾಮನಗರ (ಜೂ.04): ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ಮುಂದಾಗಿರುವ ಗೃಹಲಕ್ಷ್ಮಿ ಯೋಜನೆಯಲ್ಲಿ 2 ಸಾವಿರ ರುಪಾಯಿ ಪಡೆಯುವ ಯಜಮಾನಿ ಯಾರೆಂಬುದರ ಬಗ್ಗೆ ಮನೆ ಮನೆಗಳಲ್ಲಿ ಚರ್ಚೆ ನಡೆಯುತ್ತಿದ್ದು, ರೇಷನ್ ಕಾರ್ಡ್‌ಗಾಗಿ ಒಂದಾಗಿರುವ ಕುಟುಂಬಗಳು ಬೇರೆ ಬೇರೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿಗೆ ಮಾಸಿಕ 2 ಸಾವಿರ ರುಪಾಯಿ ನೀಡುವ ಗ್ಯಾರಂಟಿಯನ್ನು ನೀಡಿದೆ. ಮನೆ ಒಡತಿಯಾದರೆ ಮನೆಯಲ್ಲಿ ಒಬ್ಬ ಮಹಿಳೆಗೆ ಮಾತ್ರ 2 ಸಾವಿರ ದೊರೆಯುತ್ತದೆ. ಹಾಗಾಗಿ ಈಗಿರುವ ರೇಷನ್ ಕಾರ್ಡ್‌ನಿಂದ ಹೆಸರು ಡಿಲೀಟ್ ಮಾಡಿಸಿ ಹೊಸ ರೇಷನ್ ಕಾರ್ಡ್ ಮಾಡಿಸುವ ಪ್ಲಾನ್‌ಗಳನ್ನು ಜನರು ಹಾಕಿಕೊಳ್ಳುತ್ತಿದ್ದಾರೆ.
ಹೊಸ ರೇಷನ್ ಕಾರ್ಡ್ ಮಾಡಿಸಲು ಹಾಗೂ ಹೆಸರು ಡಿಲೀಟ್ ಮಾಡಿಸಲು ಜಿಲ್ಲೆಯ ಆನ್‌ಲೈನ್ ಕೇಂದ್ರಗಳು ಹಾಗೂ ಸೇವಾ ಕೇಂದ್ರಗಳಿಗೆ ಜನರು ಅಲೆದಾಡುತ್ತಿದ್ದಾರೆ. ಆಹಾರ ಇಲಾಖೆ ರೇಷನ್ ಕಾರ್ಡ್‌ಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಿಲ್ಲ. ಒಂದೇ ಕಾರ್ಡಿನಲ್ಲಿ ತಂದೆ - ತಾಯಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಇದ್ದಾರೆ. ಭಾವನಾತ್ಮಕವಾಗಿಯೂ ಕುಟುಂಬಗಳು ಒಂದೇ ಎಂಬ ಕಾರಣಕ್ಕೆ ರೇಷನ್ ಕಾರ್ಡ್ ನಲ್ಲಿ ಎಲ್ಲರ ಹೆಸರು ನಮೂದಾಗಿವೆ. ಆದರೆ, ಈಗ ಬೆಂಗಳೂರು ಸೇರಿದಂತೆ ವಿವಿಧೆಡೆ ಕೆಲಸಕ್ಕೆ ಹೋಗಿರುವ ಮಕ್ಕಳು ಕೂಡ ಹೊಸಕಾರ್ಡ್ ಮಾಡಿಸಲು ಮುಂದಾಗಿದ್ದಾರೆ.
ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ: ಶಾಸಕ ಬಾಲಕೃಷ್ಣ ಜೊತೆ ಸಂಸದ ಸುರೇಶ್ ಚರ್ಚೆ
ಅತ್ತೆ-ಸೊಸೆಯಲ್ಲಿ ಮನಸ್ತಾಪ: ಈ ಯೋಜನೆಯ ಫಲಾನುಭವಿ ಅತ್ತೆ ಅಥವಾ ಸೊಸೆ ಪೈಕಿ ಯಾರು ಫಲಾನುಭವಿ ಎಂಬ ಗೊಂದಲವೂ ಇತ್ತು. ಆದರೆ, ಸರ್ಕಾರ ಕುಟುಂಬದ ಸದಸ್ಯರು ಮನೆ ಯಜಮಾನಿ ಯಾರೆಂಬುದನ್ನು ನಿರ್ಧರಿಸಬೇಕೆಂದು ಸೂಚಿಸಿದೆ. ಇದು ಅತ್ತೆ ಮತ್ತು ಸೊಸೆ ನಡುವೆ ಮನಸ್ತಾಪ ಮೂಡಿಸುತ್ತಿದೆ. ಅನ್ನ ಭಾಗ್ಯಕ್ಕೆ ಇಲ್ಲದ ಗೊಂದಲ ಈಗ ಗೃಹ ಲಕ್ಷ್ಮಿಗೆ ಹುಟ್ಟಿಕೊಂಡಿದೆ. ಈ ಯೋಜನೆಗೆ ರೇಷನ್ ಕಾರ್ಡ್ ಅನ್ನೇ ಮಾನದಂಡವಾಗಿ ಪರಿಗಣಿಸಲಾಗುತ್ತದೆ ಎಂಬ ಲೆಕ್ಕಾಚಾರ ಹಾಕಿಕೊಂಡಿರುವ ಜನರು ಆನ್‌ಲೈನ್ ಕೇಂದ್ರ, ಕಂಪ್ಯೂಟರ್ ಸೆಂಟರ್, ಸೇವಾ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ.
ಸರ್ಕಾರದ 5 ಗ್ಯಾರಂಟಿಗಳ ಬಗ್ಗೆಯೇ ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಅಧಿಕಾರಿಗಳು ಯಾವಾಗ ಬಂದು ಸರ್ವೆ ಮಾಡುತ್ತಾರೊ ಎಂದು ಜನರಲ್ಲು ಆತಂಕವಿದೆ. ಹಾಗಾಗಿ ಬೆಂಗಳೂರು ಸೇರಿದಂತೆ ಬೇರೆ ಕಡೆ ವಲಸೆ ಹೋದವರು ಕೂಡ ಊರುಗಳಿಗೆ ವಾಪಸ್ಸಾಗಿ ದಾಖಲೆಗಳನ್ನು ಜೋಡಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.
ಆರೋಗ್ಯ, ಶಿಕ್ಷಣದ ವಲಸೆ ತಪ್ಪಿಸುವುದು ನನ್ನ ಗುರಿ: ಡಿ.ಕೆ.ಶಿವಕುಮಾರ್
3.05 ಲಕ್ಷ ಪಡಿತರ ಚೀಟಿಗಳು: ಜಿಲ್ಲೆಯಲ್ಲಿ ಅಂತ್ಯೋದಯ - 18,972, ಪ್ರಿಯಾರಿಟಿ ಹೌಸ್ ಹೋಲ್ಡ್ (ಪಿಎಚ್ಎಚ್ )- 2,78,107 ಹಾಗೂ ನಾನ್ ಪ್ರಿಯಾರಿಟಿ ಹೌಸ್ ಹೋಲ್ಡ್ (ಎನ್ ಪಿಎಚ್ ಎಚ್ )- 8,406 ಸೇರಿದಂತೆ ಒಟ್ಟು 3,05485 ಪಡಿತರ ಚೀಟಿಗಳಿವೆ. ಈಗ ಹೊಸದಾಗಿ ಆದ್ಯತಾ ಕುಟುಂಬ ಚೀಟಿ ಕೋರಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ. ಅಂತ್ಯೋದಯ ಚೀಟಿ ಪಡೆದವರಲ್ಲಿ ಚನ್ನಪಟ್ಟಣ - 4,742, ಕನಕಪುರ - 4955, ಮಾಗಡಿ - 5199, ರಾಮನಗರ 4076 ಕುಟುಂಬಗಳಿದ್ದರೆ, ಆದ್ಯತಾ ಕುಟುಂಬ ಚೀಟಿಗಳನ್ನು ಚನ್ನಪಟ್ಟಣ - 65,234, ಕನಕಪುರ - 93,524, ಮಾಗಡಿ - 52,240 , ರಾಮನಗರ - 67,109 ಕುಟುಂಬಗಳು ಹೊಂದಿವೆ. ಆದ್ಯತೇತರ ಕುಟುಂಬ ಚೀಟಿಗಳನ್ನು ಚನ್ನಪಟ್ಟಣ - 3222, ಕನಕಪುರ - 1445, ಮಾಗಡಿ - 1678, ರಾಮನಗರ - 2061 ಕುಟುಂಬಗಳು ಪಡೆದುಕೊಂಡಿವೆ.