5ರ ಬದಲಿಗೆ 3 ವರ್ಗೀಕರಣ ಮಾಡಿ ಎಸ್ಸಿ ಒಳ ಮೀಸಲು: ಸಿಎಂ ಸಿದ್ದರಾಮಯ್ಯ

Published : Aug 21, 2025, 09:06 AM IST
cm siddaramaiah

ಸಾರಾಂಶ

ಸಂಪುಟ ಮಾಡಿರುವ ಮಾರ್ಪಾಡುಗಳ ಬಗ್ಗೆ ವಿವರಣೆ ನೀಡಿರುವ ಅವರು, ‘ಆಯೋಗವು ಶೇ.17ರಷ್ಟು ಮೀಸಲಾತಿಯನ್ನು ಎ, ಬಿ, ಸಿ, ಡಿ, ಇ ಎಂದು 5 ಪ್ರವರ್ಗಗಳನ್ನಾಗಿ ವಿಭಾಗ ಮಾಡಿ ಹಂಚಲು ಶಿಫಾರಸು ಮಾಡಿತ್ತು.

ವಿಧಾನಸಭೆ (ಆ.21): ‘ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ನ್ಯಾ.ನಾಗಮೋಹನ್‌ದಾಸ್‌ ಆಯೋಗ ಶಿಫಾರಸು ಮಾಡಿದ್ದ 5 ಪ್ರವರ್ಗ ಬದಲು 3 ಪ್ರವರ್ಗಗಳಾಗಿ ಪರಿಷ್ಕರಣೆ ಹಾಗೂ ಕೆಲ ಮಾರ್ಪಾಡುಗಳೊಂದಿಗೆ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿದ್ದೇವೆ. ಎಡಗೈ ಸಂಬಂಧಿತ ಜಾತಿಗಳಿಗೆ ಶೇ.6, ಬಲಗೈ ಜಾತಿಗಳಿಗೆ ಶೇ.6 ಹಾಗೂ ಸ್ಪೃಶ್ಯ ಜಾತಿಗಳು, ಅತಿಸೂಕ್ಷ್ಮ ಜಾತಿಗಳನ್ನು ಸೇರಿಸಿ ಶೇ.5 ಮೀಸಲಾತಿ ನೀಡಲು ತೀರ್ಮಾನಿಸಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉಭಯ ಸದನಗಳಲ್ಲಿ ಹೇಳಿಕೆ ನೀಡಿದ್ದಾರೆ.

ಮೊದಲಿಗೆ ವಿಧಾನಸಭೆಯಲ್ಲಿ ಬಳಿಕ ವಿಧಾನಪರಿಷತ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದು, ಮಂಗಳವಾರ ರಾತ್ರಿಯ ಸಚಿವ ಸಂಪುಟದ ಈ ಮಹತ್ವದ ನಿರ್ಧಾರವನ್ನು ಸದನದಲ್ಲಿ ಪ್ರಕಟಿಸಿದರು. ಸಂಪುಟ ಮಾಡಿರುವ ಮಾರ್ಪಾಡುಗಳ ಬಗ್ಗೆ ವಿವರಣೆ ನೀಡಿರುವ ಅವರು, ‘ಆಯೋಗವು ಶೇ.17ರಷ್ಟು ಮೀಸಲಾತಿಯನ್ನು ಎ, ಬಿ, ಸಿ, ಡಿ, ಇ ಎಂದು 5 ಪ್ರವರ್ಗಗಳನ್ನಾಗಿ ವಿಭಾಗ ಮಾಡಿ ಹಂಚಲು ಶಿಫಾರಸು ಮಾಡಿತ್ತು. ಇದನ್ನು ಸಚಿವ ಸಂಪುಟವು ಎ, ಬಿ, ಸಿ ಎಂದು ಮೂರು ಪ್ರವರ್ಗಗಳನ್ನಾಗಿ ವಿಭಾಗೀಕರಿಸಲು ನಿರ್ಧರಿಸಿದೆ. ಇನ್ನು ನಾಗಮೋಹನ್‌ದಾಸ್‌ ಆಯೋಗವು ಪರಯ, ಮೊಗೇರ ಮುಂತಾದ ಬಲಗೈ ಸಂಬಂಧಿತ ಜಾತಿಗಳನ್ನು ಎಡಗೈ ಜೊತೆ ಸೇರಿಸಿತ್ತು. ಇದನ್ನು ಪರಿಷ್ಕರಿಸಿ ಈ ಜಾತಿಗಳನ್ನು ಬಲಗೈ ಜೊತೆ ಸೇರಿಸಿ ಬಲಗೈ ಜಾತಿಗಳ ಸಮೂಹಕ್ಕೆ ಆಯೋಗ ನೀಡಿದ್ದ ಶೇ.5ರ ಬದಲಿಗೆ ಶೇ.6ರಷ್ಟು ಮೀಸಲಾತಿ ಕಲ್ಪಿಸಲು ನಿರ್ಧರಿಸಿದ್ದೇವೆ’ ಎಂದು ಸಿದ್ದರಾಮಯ್ಯ ಹೇಳಿದರು.

ಎಕೆ, ಎಡಿ, ಎಎ ಜಾತಿಗಳು ಎಡ, ಬಲಗೈಗೆ ಸಮಾನ ಹಂಚಿಕೆ: ಇದರ ಜತೆ ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಗುಂಪುಗಳಲ್ಲಿನ 4.74 ಲಕ್ಷ ಜನಸಂಖ್ಯೆಯನ್ನು ‘ಇ’ ಎಂದು ವರ್ಗೀಕರಣ ಮಾಡಿ ಶೇ.1ರಷ್ಟು ಮೀಸಲಾತಿ ನೀಡಲು ಆಯೋಗ ಶಿಫಾರಸು ಮಾಡಿತ್ತು. ಈ ಗುಂಪುಗಳನ್ನು ಎಡಗೈ ಸಂಬಂಧಿತ ಮತ್ತು ಬಲಗೈ ಸಂಬಂಧಿತ ಜಾತಿಗಳ ಜೊತೆ ಸಮಾನವಾಗಿ ಹಂಚಿಕೆ ಮಾಡಲು ತೀರ್ಮಾನಿಸಿದ್ದೇವೆ. ಸ್ಪೃಶ್ಯ ಜಾತಿಗಳ ಗುಂಪಿಗೆ ನ್ಯಾ.ನಾಗಮೋಹನ್ ದಾಸ್ ಅವರು ಶೇ.4ರಷ್ಟು ಮೀಸಲಾತಿ ಶಿಫಾರಸ್ಸು ಮಾಡಿದ್ದರು. ಹಾಗೆಯೇ 59 ಜಾತಿಗಳ 5.22 ಲಕ್ಷ ಜನಸಂಖ್ಯೆಯನ್ನು ಪ್ರವರ್ಗ-ಎ ಎಂದು ತೀರ್ಮಾನಿಸಿ ಶೇ.1ರಷ್ಟು ಮೀಸಲಾತಿ ಶಿಫಾರಸು ಮಾಡಿದ್ದರು. ಕೆಲ ತಾಂತ್ರಿಕ ಕಾರಣಗಳಿಂದ ಈ ಎರಡೂ ಗುಂಪುಗಳನ್ನು ಒಟ್ಟಿಗೆ ಸೇರಿಸಿ ಶೇ.5 ಷ್ಟು ಮೀಸಲಾತಿ ನೀಡಲು ತೀರ್ಮಾನಿಸಿದ್ದೇವೆ ಎಂದು ಮುಖ್ಯಮಂತ್ರಿಗಳು ಸದನಕ್ಕೆ ತಿಳಿಸಿದರು. ಈ ಮೂಲಕ ಎಸ್ಸಿಯ ಎಲ್ಲಾ 101 ಜಾತಿಗಳಿಗೆ ಶಿಕ್ಷಣ, ಉದ್ಯೋಗಾವಕಾಶ ಹಾಗೂ ಇನ್ನಿತರೆ ವಿಷಯಗಳಲ್ಲಿ ಸಮಾನ ಅವಕಾಶ ಖಚಿತಪಡಿಸಲಾಗಿದೆ ಎಂದರು.

1.05 ಕೋಟಿ ಜನರ ದತ್ತಾಂಶದ ಆಧಾರ: 2024ರ ಆ.1 ರಂದು ಸುಪ್ರೀಂ ಕೋರ್ಟ್‌ ಒಳ ಮೀಸಲಾತಿ ನೀಡುವ ಕುರಿತು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಿತ್ತು. ಇದರಂತೆ 2024ರ ಅ.12 ರಂದು ನಿವೃತ್ತ ನ್ಯಾ.ಎಚ್.ಎನ್‌. ನಾಗಮೋಹನ್‌ದಾಸ್‌ ಅವರ ಏಕಸದಸ್ಯ ಆಯೋಗ ರಚಿಸಿದ್ದೆವು. ಆಯೋಗವು ಪರಿಶಿಷ್ಟ ಜಾತಿಯ ಶೇ.93 ರಷ್ಟು ಜನಸಂಖ್ಯೆ ಅಂದರೆ 1.05 ಕೋಟಿ ಜನರ ದತ್ತಾಂಶ ಸಂಗ್ರಹಿಸಿದೆ. ಈ ಆಧಾರದ ಮೇಲೆ ಆಯೋಗ ಮೀಸಲಾತಿ ಶಿಫಾರಸು ಮಾಡಿದ್ದು, ಕೆಲ ಮಾರ್ಪಾಡುಗಳೊಂದಿಗೆ ಅಂಗೀಕರಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ನಮ್ಮ ಈ ತೀರ್ಮಾನ ಒಳ ಮೀಸಲಾತಿ ಕುರಿತ ದಶಕಗಳ ಹೋರಾಟಕ್ಕೆ ನ್ಯಾಯ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ. ಅಭಿವೃದ್ಧಿಶೀಲ ರಾಜ್ಯವಾದ ಕರ್ನಾಟಕವು ಸಾಮಾಜಿಕ ನ್ಯಾಯದ ವಿಚಾರದಲ್ಲೂ ಮುಂಚೂಣಿಯಲ್ಲಿದೆ. ನಮ್ಮ ಸರ್ಕಾರವು ಇದನ್ನು ಸಾಬೀತು ಮಾಡಿದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌ನ ಲೋಕಾಯುಕ್ತರ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!