
ಬೆಂಗಳೂರು (ಫೆ.10): ಅನುದಾನ ಹಂಚಿಕೆಯಲ್ಲಿನ ತಾರತಮ್ಯ ವಿರೋಧಿಸಿ ರಾಜ್ಯ ಸರ್ಕಾರ ನಡೆಸಿದ ಪ್ರತಿಭಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನರೇಂದ್ರ ಮೋದಿ ಅವರು ಗುಜರಾತ್ ಸಿಎಂ ಆಗಿದ್ದಾಗ ಅನುದಾನ ಹಂಚಿಕೆ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. ಈಗ ನಮ್ಮ ಪ್ರತಿಭಟನೆ ವಿರೋಧಿಸುತ್ತಾ ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆ ವಾಗ್ದಾಳಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕರ್ನಾಟಕಕ್ಕೆ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗಿದೆ. ರಾಜ್ಯಕ್ಕಾಗಿರುವ ನಷ್ಟವನ್ನು ಬಿಜೆಪಿಯವರು ಸರಿ ಎಂದು ಹೇಳುತ್ತಾರೆಯೇ. ಅಲ್ಲದೆ, ರಾಜ್ಯ ತನ್ನ ಹಕ್ಕಿನ ಬಗ್ಗೆ ಪ್ರಶ್ನಿಸುವುದನ್ನು ದೇಶ ವಿಭಜನೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಾಖ್ಯಾನಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನರೇಂದ್ರ ಮೋದಿ ಅವರು ಗುಜರಾತ್ ಸಿಎಂ ಆಗಿದ್ದಾಗ ಅನುದಾನ ಹಂಚಿಕೆ ವಿಚಾರದಲ್ಲಿ ಅಂದಿನ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದರು.
ಅಧಿಕಾರಿಗಳು ಲಂಚ ಕೇಳಿದ್ದರೆ ದೂರು ನೀಡಲಿ: ಸಿಎಂ ಸಿದ್ದರಾಮಯ್ಯ
ಒಂದು ಹಂತದಲ್ಲಿ ಗುಜರಾತ್ ಭಿಕ್ಷೆ ಬೇಡುವ ರಾಜ್ಯವೇ? ಅಥವಾ ನಾವು ಭಿಕ್ಷುಕರೇ, ನಾವು ದೆಹಲಿಯಲ್ಲಿರುವವರ ಕರುಣೆಯಲ್ಲಿ ಬದುಕಬೇಕೆ? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು. ಆಗ ಆ ರೀತಿ ಮಾತನಾಡಿದ್ದ ಮೋದಿ ಅವರು, ನಾವು ಪ್ರತಿಭಟಿಸಿದರೆ ಭಾರತ ಒಡೆಯಲಾಗುತ್ತಿದೆ ಎಂದು ಟೀಕಿಸುತ್ತಿದ್ದಾರೆ ಎಂದು ಹೇಳಿದರು. ಕಳೆದ 10 ವರ್ಷಗಳ ಅವಧಿಯಲ್ಲಿ ಕೇಂದ್ರದ ಬಜೆಟ್ ಗಾತ್ರ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ರಾಜ್ಯಕ್ಕೆ ನೀಡುವ ಅನುದಾನ ಗಾತ್ರವೂ ಹೆಚ್ಚಾಗಬೇಕಾಗಿತ್ತು. ಇದು ರಾಜ್ಯಕ್ಕೆ ಆಗಿರುವ ಅನ್ಯಾಯ. ಅದನ್ನು ವಿರೋಧಿಸದ ಬಿಜೆಪಿ ಸಂಸದರು, ರಾಜ್ಯದ ಹಿತ ಕಾಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ತಿಳಿಸಿದರು.
ನಮಗೆ ಬರಬೇಕಾದ ತೆರಿಗೆ ಹಣ ಕೇಳಬಾರದೆ?: ದೆಹಲಿಯಲ್ಲಿ ನಿಂತು ಘರ್ಜಿಸುವ ಧೈರ್ಯ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಿಟ್ಟು ಯಾರಿಗೂ ಇಲ್ಲ ಎಂದು ಕರಕುಶಲ ಅಭಿವೃದ್ಧಿ ಕೈಗಾರಿಕೆ ನಿಗಮ ಅಧ್ಯಕ್ಷೆ ಹಾಗೂ ಶಾಸಕಿ ರೂಪಕಲಾ ಶಶಿಧರ್ ಹೇಳಿದರು. ಕೇಂದ್ರ ಸರಸ್ಕಾರ ರಾಜ್ಯದ ಪಾಲಿನ ತೆರಿಗೆಯನ್ನು ಬಿಡುಗಡೆ ಮಾಡದೆ ತಾರತಮ್ಯ ಮಾಡುತ್ತಿದೆ. ೧೫ನೇ ಹಣಕಾಸು ಆಯೋಗದಿಂದಾಗಿ ತೆರಿಗೆಯೊಂದರಿಂದಲ್ಲೇ ರಾಜ್ಯಕ್ಕೆ ೬೨.೦೯೮ ಕೋಟಿ ರು.ಗಳ ಪಾಲು ಕೊಡಬೇಕಿತ್ತು, ಇದನ್ನು ನಮ್ಮ ಮುಖ್ಯ ಮಂತ್ರಿ ಪ್ರಶ್ನಿಸಬಾರದೇ, ಬಿಜೆಪಿಯವರು ನಿರಂತರ ಸುಳ್ಳುಗಳ ಮೂಲಕ ತಮ್ಮ ದ್ರೋಹ ಮರೆಮಾಚಲು ನೋಡುತ್ತಿದ್ದಾರೆ.
ಆಡಳಿತ ಯಂತ್ರ ಕುಸಿದಿರುವುದಕ್ಕೆ ಸಿದ್ದು ಜನಸ್ಪಂದನ ಕಾರ್ಯಕ್ರಮ ಸಾಕ್ಷಿ: ಆರ್.ಅಶೋಕ್ ಕಿಡಿ
ಕೇಂದ್ರದ ನಿರಂತರ ದ್ರೋಹ ಹಾಗೂ ವಂಚನೆಯಿಂದ ರಾಜ್ಯದ ತೆರಿಗೆ ಸಂಗ್ರಹ ಪ್ರಮಾಣ ಶೇ.೧೫ ರಿಂದ ಕೆಳಗೆ ಜಾರಿ ಶೇ.೯ಕ್ಕೆ ಕುಸಿದಿದೆ, ಈ ದೊಟ್ಟ ಕುಸಿತಕ್ಕೆ ಕೇಂದ್ರದ ಮಲತಾಯಿ ಧೋರಣೆ ಮತ್ತು ವಂಚನೆಯೇ ಕಾರಣ ಎಂದರು. ದೆಹಲಿಯ ಜಂತರ್ ಮಂತರ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಕ್ಷೇತ್ರದಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ಭಾಗವಹಿಸಲು ಆಗುತ್ತಿಲ್ಲವೆಂದು ಮುಖ್ಯಮಂತ್ರಿ ಗಮನಕ್ಕೆ ತಂದು ಅನುಮತಿ ಪಡೆದಿದ್ದೇ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.