ನಲವತ್ತು ವರ್ಷಗಳಿಂದ ಕಳಂಕರಹಿತ ರಾಜಕೀಯ ಜೀವನ ನಡೆಸಿದ ನನ್ನ ಮೇಲಿನ ಹೊಟ್ಟೆ ಕಿಚ್ಚಿನಿಂದ ವಿರೋಧ ಪಕ್ಷದವರು ವೈಯಕ್ತಿಕ ದಾಳಿ ಮಾಡಿ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮುಖ್ಯಮ೦ತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ವಿಧಾನಪರಿಷತ್ (ಜು.26): ನಲವತ್ತು ವರ್ಷಗಳಿಂದ ಕಳಂಕರಹಿತ ರಾಜಕೀಯ ಜೀವನ ನಡೆಸಿದ ನನ್ನ ಮೇಲಿನ ಹೊಟ್ಟೆ ಕಿಚ್ಚಿನಿಂದ ವಿರೋಧ ಪಕ್ಷದವರು ವೈಯಕ್ತಿಕ ದಾಳಿ ಮಾಡಿ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮುಖ್ಯಮ೦ತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ, ಮುಡಾ ನಿವೇಶನ ಹಂಚಿಕೆ ಹಗರಣ ಮತ್ತು ವಾಲ್ಮೀಕಿ ನಿಗಮ ಹಗರಣದ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ವಿಪಕ್ಷಗಳು ಘೋಷಣೆಗಳನ್ನು ಕೂಗಿದವು. ಗದ್ದಲದ ನಡುವೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 2016ರಲ್ಲಿ ನಾನು ಆಗಿದ್ದಾಗಲೂ ಸೈಟ್ ಪಡೆದಿರಲಿಲ್ಲ.
2021ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ 50:50 ಹಂಚಿಕೆ ನಿಯಮ ಮಾಡಿ, ಅವರ ಅವಧಿಯಲ್ಲೇ ನಮ್ಮ ಕುಟುಂಬಕ್ಕೆ ಸೈಟ್ ಹಂಚಿಕೆ ಮಾಡಲಾಗಿದೆ. ಇಂತಹ ಜಾಗದಲ್ಲೇ ಸೈಟ್ ಬೇಕು ಎಂದು ನಾನು ಕೇಳಿರಲಿಲ್ಲ. ಹಂಚಿಕೆಯು ಕಾನೂನು ಪ್ರಕಾರವೇ ಆಗಿದ್ದು, ಯಾವುದೇ ಅಕ್ರಮ ನಡೆದಿಲ್ಲ. 40 ವರ್ಷಗಳ ಹಿಂದೆಯೇ ಮಂತ್ರಿಯಾಗಿದ್ದ ನಾನು ರಹಿತನಾಗಿದ್ದೇನೆ. ಅದನ್ನು ಸಹಿಸಲಾಗದೆ ಹೊಟ್ಟೆಕಿಚ್ಚಿನಿಂದ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ವಿಷಯ ಇಲ್ಲದಿದ್ದರೂ ವೈಯಕ್ತಿಕ ದಾಳಿ ನಡೆಸಲಾಗುತ್ತಿದೆ ಎಂದು ಕಿಡಿಕಾರಿದರು.
ಕಳಂಕ ಚರ್ಚೆ ಮನವಿ ತಿರಸ್ಕಾರ: ಮುಡಾ ಹಗರಣದ ಕುರಿತು ವಿಚಾರಣೆಗೆ ಸಮಿತಿ ರಚನೆಯಾಗಿದೆ. ಅದೇ ರೀತಿ ವಾಲ್ಮೀಕಿ ನಿಗಮದ ಹಗರಣ ಕುರಿತು ಈಗಾಗಲೇ ತನಿಖೆ ನಡೆಯುತ್ತಿರುವ ಕಾರಣ ಚರ್ಚೆಗೆ ಅವಕಾಶ ನಿರಾಕರಿಸಲಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಘೋಷಿಸಿದರು. ಇದರಿಂದ ಮತ್ತಷ್ಟು ಕೆರಳಿದ ವಿಪಕಗಳ ಸದಸ್ಯರು, ಸರ್ಕಾರದ ವಿರುದ್ಧ ನಿರಂತರವಾಗಿ ಘೋಷಣೆಗಳನ್ನು ಕೂಗಿದರು.
ಗಣಿ ತೆರಿಗೆ ಸಂಗ್ರಹ ಅಧಿಕಾರ ಕೇಂದ್ರ ಸರ್ಕಾರಕ್ಕಿಲ್ಲ, ರಾಜ್ಯಕ್ಕೆ ಮಾತ್ರ: ಸುಪ್ರೀಂಕೋರ್ಟ್ ತೀರ್ಪು
ಸರ್ಕಾರದ ವಿರುದ್ಧ ಘೋಷಣೆಗಳು: ಭ್ರಷ್ಟಾಚಾರದ ಮೂಲ ಸಿದ್ದರಾಮಯ್ಯನವರೇ ಆಗಿದ್ದಾರೆ. 'ದಲಿತರ ಅಭಿವೃದ್ಧಿ ಅಂತಾರೆ, ದಲಿತರ ಹಣ- ಸೈಟ್ ನುಂಗ್ತಾರೆ', 'ಸಮಾಜವಾದಿ ಅಂತಾರೆ, ಮಜಾ ಒಂದೇ ಮಾಡ್ತಾರೆ', 'ಸಂವಿಧಾನ ರಕ್ಷಣೆ ಅಂತಾರೆ, ದಲಿತರ ಸೈಟುಗಳನ್ನು ನುಂಗ್ತಾರೆ', 'ಮುಡಾ ಸೈಟ್ ಗೋವಿಂದಾ, ವಾಲ್ಮೀಕಿ ನಿಗಮದ 187 ಕೋಟಿ ರು. ಗೋವಿಂದಾ', 'ತೆಲಂಗಾಣ ಎಲೆಕ್ಷನ್‌ಗೆ ರಾಜ್ಯದ ಹಣ ಹೋಯ್ತು.. ಗೋವಿಂದಾ' ಎಂದು ವಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ರಾಗವಾಗಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.