ತಮಿಳುನಾಡಿಗೆ ಕಾವೇರಿ ನೀರು: ಕಾನೂನು ತಜ್ಞರು, ನಿವೃತ್ತ ಜಡ್ಜ್‌ಗಳ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

Published : Sep 30, 2023, 03:20 AM IST
ತಮಿಳುನಾಡಿಗೆ ಕಾವೇರಿ ನೀರು: ಕಾನೂನು ತಜ್ಞರು, ನಿವೃತ್ತ ಜಡ್ಜ್‌ಗಳ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಸಾರಾಂಶ

ಕಾನೂನು ಪರಿಣತರ ಸಲಹೆಯಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟ್‌ ಮುಂದೆ ನಿತ್ಯ 3000 ಕ್ಯುಸೆಕ್‌ ನೀರು ಹರಿಸಬೇಕೆಂಬ ಆದೇಶ ಪುನರ್‌ ಪರಿಶೀಲಿಸುವಂತೆ ಶನಿವಾರವೇ ಅರ್ಜಿ ಹಾಕಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.  

ಬೆಂಗಳೂರು (ಸೆ.30): ಕಾವೇರಿ ಜಲಾನಯನದ ನಮ್ಮ ಜಲಾಶಯಗಳಲ್ಲೇ ಸಾಕಷ್ಟು ನೀರಿಲ್ಲದ ಕಾರಣ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ಹಾಗಾಗಿ ಕಾನೂನು ಪರಿಣತರ ಸಲಹೆಯಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟ್‌ ಮುಂದೆ ನಿತ್ಯ 3000 ಕ್ಯುಸೆಕ್‌ ನೀರು ಹರಿಸಬೇಕೆಂಬ ಆದೇಶ ಪುನರ್‌ ಪರಿಶೀಲಿಸುವಂತೆ ಶನಿವಾರವೇ ಅರ್ಜಿ ಹಾಕಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 

ಮಳೆ ಕೊರತೆಯಿಂದ ಜಲಾಶಯಗಳಲ್ಲಿ ನೀರಿಲ್ಲದೆ ಎದುರಾಗಿರುವ ಸಂಕಷ್ಟ ಪರಿಸ್ಥಿತಿಯನ್ನು ಕಾನೂನಾತ್ಮಕವಾಗಿ ಸಮರ್ಥವಾಗಿ ನಿಭಾಯಿಸುವುದು ಹೇಗೆ ಎಂಬ ಬಗ್ಗೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು, ಮಾಜಿ ಹಾಲಿ ಅಡ್ವೊಕೇಟ್‌ ಜನರಲ್‌ಗಳು, ಸುಪ್ರಿಂಕೋರ್ಟ್‌ನ ಕೆಲ ಹಿರಿಯ ವಕೀಲರೊಂದಿಗೆ ಸಭೆ ನಡೆಸಿದ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿಗೆ 3000 ಕ್ಯುಸೆಕ್‌ ನೀರು ಬಿಡುವ ಬಗ್ಗೆ ಎರಡೂ ಸಮಿತಿಗಳ ಮುಂದೆ ನಮ್ಮಲ್ಲಿ ನೀರು ಇಲ್ಲ ಹಾಗಾಗಿ ನೀರು ಬಿಡಲು ಸಾಧ್ಯವಿಲ್ಲ ಎಂದು ನಮ್ಮ ಸರ್ಕಾರದ ಪರ ನ್ಯಾಯವಾದಿಗಳು ಹಾಗೂ ಅಧಿಕಾರಿಗಳು ವಾದ ಮಂಡಿಸಿದ್ದಾರೆ.

ಅಧಿಕಾರದಲ್ಲಿದ್ದಾಗ ಕಾವೇರಿ ನೀರು ಬಿಟ್ಟು ಇಂದು ವಿರೋಧಿಸೋದು ತಪ್ಪು: ಸಚಿವ ಮಧು ಬಂಗಾರಪ್ಪ

ಆದರೆ, ಸಮಿತಿಯವರು ನೀವು ಹಿಂದಿನ ಆದೇಶವನ್ನು ಪೂರ್ಣವಾಗಿ ಪಾಲಿಸಿಲ್ಲ, ಹಾಗಾಗಿ ನೀರಿನ ಬಾಕಿ ಸರಿದೂಗಿಸಬೇಕು ಎಂದು 3000 ಕ್ಯುಸೆಕ್‌ ನೀರು ನೀಡಲು ಸೂಚಿಸಿದ್ದಾರೆ. ಇದನ್ನು ಪ್ರಶ್ನಿಸಿ ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂಕೋರ್ಟ್ ಮುಂದೆ ಮರುಪರಿಶೀಲನಾ ಅರ್ಜಿ ಹಾಕುವಂತೆ ನಿವೃತ್ತ ನ್ಯಾಯಮೂರ್ತಿಗಳು, ಹಲವು ಕಾನೂನು ಪರಿಣಿತರು ಅವರ ಅನುಭದ ಆಧಾರದ ಮೇಲಹೆ ನೀಡಿದ್ದಾರೆ. ಅದರಂತೆ ಶನಿವಾರವೇ ಅರ್ಜಿ ಸಲ್ಲಿಸಲು ಕ್ರಮ ವಹಿಸಲಾಗುವುದು ಎಂದರು.

ಅಲ್ಲದೆ, ಪ್ರಮುಖವಾಗಿ ಕಾವೇರಿ, ಕೃಷ್ಣಾ ಮೇಲ್ದಂಡೆ, ಮಹದಾಯಿ ಸೇರಿದಂತೆ ಅಂತಾರಾಜ್ಯ ಜಲವಿವಾದಗಳಿಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಕಾನೂನು ತಂಡಕ್ಕೆ ಸಲಹೆ ನೀಡಲು ಪರಿಣಿತರನ್ನೊಳಗೊಂಡ ಸಲಹಾ ಸಮಿತಿ ರಚಿಸಲು ಹೇಳಿದ್ದಾರೆ. ಈ ಸಮಿತಿ ನಿತ್ಯ ಡಾಟಾ ಸಂಗ್ರಹಿಸಿ ಸರ್ಕಾರಕ್ಕೆ ನಿರಂತರ ಮಾಹಿತಿ, ಸಲಹೆ ನೀಡುವುದು ಒಳ್ಳೆಯದು ಎಂದು ಹೇಳಿದ್ದಾರೆ. ಅದರಂತೆ ಕ್ರಮ ವಹಿಸಲಾಗುವುದು ಎಂದು ವಿವರಿಸಿದರು.

ಮೇಕೆದಾಟು ಯೋಜನೆಗೆ ಪ್ರಬಲ ವಾದ: ರಾಜ್ಯದ ಉದ್ದೇಶಿತ ಮೇಕೆದಾಟು ಯೋಜನೆಯ ಅಗತ್ಯತೆಯ ಬಗ್ಗೆ ಸುಪ್ರೀಂಕೋರ್ಟ್‌ ಮುಂದೆ ಪ್ರಬಲವಾಗಿ ವಾದ ಮಂಡಿಸಬೇಕು ಎಂದು ಪರಿಣತರು ಸಲಹೆ ನೀಡಿದ್ದಾರೆ. ಅದರಂತೆ ಕ್ರಮ ವಹಿಸಲಾಗುವುದು ಎಂದು ಇದೇ ವೇಳೆ ಮುಖ್ಯಮಂತ್ರಿ ಅವರು ಹೇಳಿದರು. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆ ಇಲ್ಲ. ರಾಜಕೀಯ ಕಾರಣಕ್ಕೆ ವಿರೋಧಿಸುತ್ತಿದ್ದಾರೆ. ಹಾಗಾಗಿ ತೀವ್ರವಾಗಿ ಇದರ ಬಗ್ಗೆ ವಾದ ಮಂಡಿಸಬೇಕು ಎಂದು ಸಲಹೆ ನೀಡಿದ್ದಾರೆ. 

ಮೇಕೆದಾಟು ಬ್ಯಾಲೆನ್ಸಿಂಗ್ ಜಲಾಶಯವಾಗಿರುವುದರಿಂದ 67 ಟಿಎಂಸಿ ನೀರು ಸಂಗ್ರಹ ಮಾಡುವ ಸಾಮರ್ಥ್ಯವಿರುತ್ತದೆ.  ಈ ಜಲಾಶಯದ ನೀರನ್ನು ನಾವು ವಿದ್ಯುತ್ ಹಾಗೂ ಕುಡಿಯುವ ನೀರಿಗೆ ಅಷ್ಟೇ ಬಳಸಲು ಸಾಧ್ಯ. ಕೃಷಿ, ನೀರಾವರಿಗೆ ಬಳಸಲಾಗುವುದಿಲ್ಲ. ಕಳೆದ ವರ್ಷ 650 ಟಿಎಂಸಿಯಷ್ಟು ನೀರು ತಮಿಳುನಾಡಿಗೆ ಹರಿದುಹೋಗಿದೆ. ಎಷ್ಟೋ ನೀರು ಸಮುದ್ರ ಸೇರಿದೆ. ಈ ರೀತಿ ಹೆಚ್ಚು ಮಳೆಯಾದಾಗ ಮೇಕೆದಾಟು ಜಲಾಶಯದಲ್ಲಿ ಸಂಗ್ರಹಿಸಿದ ನೀರನ್ನು ಸಂಕಷ್ಟ ಬಂದಾಗ ತಮಿಳುನಾಡಿಗೆ ಬಿಡಬಹುದು. 

ಇದರಿಂದ ಕಾವೇರಿ ಜಲಾನಯನದ ಇತರೆ ಜಲಾಶಯಗಳ ನೀರನ್ನು ನಾವು ಬಳಸಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ. ಅವರ ಸಲಹೆಯಂತೆ ಸುಪ್ರೀಂಕೋರ್ಟ್‌ ಮುಂದೆ ಮೇಕೆದಾಟು ಯೋಜನೆಗಾಗಿ ತೀವ್ರವಾದ ಪ್ರಸ್ತಾವನೆ ಮಾಡುತ್ತೇವೆ. ಹೇಗಿದ್ದರೂ ಕಾವೇರಿ ನೀರು ಹಂಚಿಕೆ ಸಂಬಂಧ ನಮ್ಮ ವಕೀಲರು ವಾದ ಮಾಡುವಾಗ ಮೇಕೆದಾಟು ವಿಚಾರ ಪ್ರಸ್ತಾಪಿಸಿದ್ದಾರೆ. ಆಗ ಸುಪ್ರೀಂ ಕೋರ್ಟ್‌ನವರು ಎರಡು ವಾರದ ನಂತರ ಈ ವಿಷಯ ಲಿಸ್ಟ್‌ ಮಾಡುತ್ತೇವೆ. ಆಗ ವಾದ ಮಾಡಿ ಎಂದು ಹೇಳಿದ್ದಾರೆ. ಆ ಸಂದರ್ಭದಲ್ಲಿ ಪ್ರಬಲ ವಾದ ಮಂಡಿಸಲಾಗುವುದು ಎಂದು ಹೇಳಿದರು.

ಸಂದರ್ಭ ಬಂದರೆ ಅಧಿವೇಶನ: ಕಾವೇರಿ ಸಂಕಷ್ಟ ವಿಚಾರ ಚರ್ಚೆಗೆ ಕೂಡಲೇ ವಿಶೇಷ ಅಧಿವೇಶನ ಕರೆಯಲು ಪ್ರತಿಪಕ್ಷಗಳು ಆಗ್ರಹಿಸಿವೆಯಲ್ಲಾ ಎಂಬ ಪ್ರಶ್ನೆಗೆ, ಸಂದರ್ಭ ಬಂದರೆ ವಿಶೇಷ ಅಧಿವೇಶನ ಕರೆಯಲಾಗುವುದು. ಉದ್ದೇಶಪೂರ್ವಕವಾಗಿ ಆದೇಶ ಪಾಲನೆಯಾಗದಿದ್ದಾಗ ಮಾತ್ರ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಉತ್ತರಿಸಿದರು.

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕಾನೂನು ಸಚಿವ ಎಚ್‌.ಕೆ.ಪಾಟೀಲ್‌, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ, ನ್ಯಾಯಮೂರ್ತಿಗಳಾದ ಶಿವರಾಜ್‌ ಪಾಟೀಲ್‌, ರವೀಂದ್ರ, ಗೋಪಾಲಗೌಡ, ಸುಪ್ರೀಂ ಕೋರ್ಟ್‌ ಹಾಲಿ ವಕೀಲರಾದ ವಿಶ್ವನಾಥ್‌ ಶೆಟ್ಟಿ, ವೇಣುಗೋಪಾಲ್‌ಗೌಡ, ಹಾಲಿ ಅಡ್ವೊಕೇಟ್‌ ಜನಲರ್‌ ಕೆ.ಶಶಿಕಿರಣ್‌ ಶೆಟ್ಟಿ, ಮಾಜಿ ಅಡ್ವೊಕೇಟ್‌ ಜನರಲ್‌ಗಳಾದ ಬಿ.ವಿ.ಆಚಾರ್ಯ, ಉದಯ್‌ ಹೊಳ್ಳ, ಪ್ರೊ.ರವಿವರ್ಮಕುಮಾರ್‌, ಪ್ರಭುಲಿಂಗ ನಾವದಗಿ, ರಾಜೇಂದ್ರ ಬಾಬು ಇನ್ನಿತರೆ ಹಿರಿಯ ವಕೀಲರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಎನ್ಇಪಿ ಕಿತ್ತೆಸೆಯುವುದಾಗಿ ಮಧು ಬಂಗಾರಪ್ಪ ಹೇಳಿಕೆ ಸರಿಯಲ್ಲ: ಕೋಟ ಶ್ರೀನಿವಾಸ ಪೂಜಾರಿ

ರಾಜ್ಯದಲ್ಲಿ ಶಾಂತಿಯುತವಾಗಿ ಬಂದ್‌ ಆಗಿದೆ. ಶಾಂತಿಯುತ ಬಂದ್‌ಗೆ ಸಹಕರಿಸಿದ ಎಲ್ಲ ಸಂಘ ಸಂಸ್ಥೆಗಳು, ಸಾರ್ವಜನಿಕರನ್ನು ಅಭಿನಂದಿಸುತ್ತೇನೆ. ನಮ್ಮ ಅಧಿಕಾರಿಗಳು ಕೂಡ ಬಹಳ ಜವಾಬ್ದಾರಿಯುತವಾಗಿ ಕೆಲಸ ಮಾಡಿದ್ದಾರೆ. ಎಲ್ಲೂ ಕೂಡ ಅಹಿತಕರ ಘಟನೆಗಳು ನಡೆದಿಲ್ಲ. ಅವರಿಗೂ ಅಭಿನಂದನೆ ತಿಳಿಸುತ್ತೇನೆ.
- ಮುಖ್ಯಮಂತ್ರಿ ಸಿದ್ದರಾಮಯ್ಯ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ