
ಬೆಂಗಳೂರು (ಸೆ.30): ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಪ್ರಗತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶೀಲಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಇಲಾಖೆಯ ಸಚಿವರುಗಳು ಮತ್ತು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆಯ ಸಭೆ ನಡೆಸಿದ ಸಿಎಂ, ಶುಚಿ ಸಂಭ್ರಮ ಕಿಟ್ ತರಿಸಿ ಅದರಲ್ಲಿದ್ದ ಟೂತ್ ಬ್ರಷ್, ಪೇಸ್ಟ್, ಸೋಪು ಮತ್ತು ಕೊಬ್ಬರಿ ಎಣ್ಣೆಯ ಗುಣ ಮಟ್ಟದ ಬಗ್ಗೆ ಗರಂ ಆದರು.
ಕಿಟ್ ನಲ್ಲಿನ ವಸ್ತುಗಳ ತೂಕದ ಪ್ರಮಾಣ ಮತ್ತು ಗುಣಮಟ್ಟ ಹೆಚ್ಚಿಸಲು ಖಡಕ್ ಸೂಚನೆ ನೀಡಿದರು. ಐಸೆಕ್ ಮತ್ತು ಐಐಎಸ್ಸಿಯಿಂದ ಶಿಕ್ಷಕರ ಮೌಲ್ಯಮಾಪನ ನಡೆಸಲು ತೀರ್ಮಾನ ಮಾಡಿದರು. ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು; ದಡ್ಡರನ್ನು ಜಾಣರನ್ನಾಗಿ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಸಿದ್ದು ಗ್ಯಾರಂಟಿ ಗುಂಗಿನಲ್ಲಿದ್ದಾರೆ, ಡಿಕೆಶಿಗೆ ನೀರಾವರಿ ಜ್ಞಾನವಿಲ್ಲ: ಸಿ.ಪಿ.ಯೋಗೇಶ್ವರ್
ಸಭೆಯ ಮುಖ್ಯಾಂಶಗಳು: ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳ ವಸತಿ ನಿಲಯಗಳ 5,48,000 ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಟೂತ್ ಪೇಸ್ಟ್ , ಬ್ರಶ್, ಕೊಬ್ಬರಿ ಎಣ್ಣೆ, ಮೈ ಸೋಪು, ಬಟ್ಟೆ ಸೋಪು ಒಳಗೊಂಡ 93 ರೂ.ಗಳ ಕಿಟ್ ಗಂಡುಮಕ್ಕಳಿಗೆ ಹಾಗೂ ಹೆಣ್ಣು ಮಕ್ಕಳಿಗೆ 135 ರೂ.ಗಳ ವೆಚ್ಚದಲ್ಲಿ ಶುಚಿ ಸಂಭ್ರಮ ಕಿಟ್ ನೀಡಲು ಟೆಂಡರ್ ಕರೆಯಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಕಿಟ್ ಗಳ ವಿತರಣೆಗೆ ವರ್ಷಕ್ಕೆ 90 ಕೋಟಿ ರೂ.ಗಳ ವೆಚ್ಚವಾಗಲಿದೆ. ಕಿಟ್ ನಲ್ಲಿನ ವಸ್ತುಗಳ ಗುಣಮಟ್ಟ ಹೆಚ್ಚಿಸಲು ಸೂಚನೆ ನೀಡಿದರು.
75 ಗ್ರಾಂಗಳ ಬದಲಿಗೆ 125 ಗ್ರಾಂ ಗಳ ಸೋಪು ಒದಗಿಸುವಂತೆ ಹಾಗೂ ಇದರಲ್ಲಿ ಕೇವಲ ಶೇ 5 ರಷ್ಟು ಮಾತ್ರ ಲಾಭ ಇಟ್ಟುಕೊಳ್ಳಬೇಕೆಂದು ಮೈಸೂರು ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮುಖ್ಯಮಂತ್ರಿಗಳು ಸ್ಪಷ್ಟ ಮಾತುಗಳಲ್ಲಿ ಎಚ್ಚರಿಸಿದರು. ಟೂತ್ ಪೇಸ್ಟ್ ಪ್ರಮಾಣವನ್ನು ಹೆಚ್ಚಿಸುವಂತೆ ಹಾಗೂ ಹಲ್ಲುಜ್ಜುವ ಬ್ರಶ್ ಗಳ ಗುಣಮಟ್ಟ ಸೇರಿದಂತೆ ಇತರೆ ಗುಣಮಟ್ಟದ ವಸ್ತುಗಳನ್ನು ಮಕ್ಕಳಿಗೆ ಒದಗಿಸುವಂತೆ ಸಿಎಂ ಸೂಚನೆ ನೀಡಿದರು.
ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್: ಎಸ್.ಸಿ.ಎಸ್.ಪಿ/ ಟಿ. ಎಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಪಿ.ಜಿ, ಪಿಹೆಚ್ ಡಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಖರೀದಿಸಲು ತೀರ್ಮಾನಿಸಲಾಯಿತು.
ಹೋಬಳಿಗೊಂದರಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಶಾಲೆ ಇರಬೇಕು 178 ಹೋಬಳಿಗಳಲ್ಲಿ ಕ್ರೈಸ್ ಶಾಲೆಗಳಿಲ್ಲ. ಕೆಲವು ಹೋಬಳಿಗಳಲ್ಲಿ 3-4 ಶಾಲೆಗಳಿವೆ... ಕಸಬಾ ಹೋಬಳಿ ತೆಗೆದರೆ 134 ಶಾಲೆಗಳನ್ನು ತೆರೆಯಬೇಕಿದೆ. ಸ್ವಂತ ಕಟ್ಟಡ ಇಲ್ಲದ ಶಾಲೆಗಳಿದ್ದರೆ , ಅದೇ ಕ್ಷೇತ್ರದ ಮತ್ತೊಂದು ಹೋಬಳಿಗೆ ಶಾಲೆಯನ್ನು ಸ್ಥಳಾಂತರ ಮಾಡುವಂತೆ ಸೂಚಿಸಿದರು.
ತಮಿಳುನಾಡಿಗೆ ಕಾವೇರಿ ನೀರು: ಕಾನೂನು ತಜ್ಞರು, ನಿವೃತ್ತ ಜಡ್ಜ್‌ಗಳ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಗುಣಮಟ್ಟದ ಶಿಕ್ಷಣ ಕಡ್ಡಾಯ: ಮೊರಾರ್ಜಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಂತೆ ಸೂಚಿಸಿದ್ದು, ಶಿಕ್ಷಕರ ಗುಣಮಟ್ಟವೂ ಮುಖ್ಯ. ಶಿಕ್ಷಕರಿಗೆ ತರಬೇತಿ (ಓರಿಯೆಂಟೇಷನ್) ಕಾರ್ಯಕ್ರಮ ನೀಡಿ ಗುಣಮಟ್ಟದ ಶಿಕ್ಷಣ ನೀಡುವ ಮಟ್ಟಕ್ಕೆ ತರಬೇಕು ಎಂದು ಸೂಚಿಸಿದ ಸಿಎಂ ಐಸೆಕ್ ಮತ್ತು ಐಐಎಸ್ಸಿ ಸಂಸ್ಥೆಗಳ ಮೂಲಜ ಕ್ರೈಸ್ ಶಾಲೆಗಳ ಶಿಕ್ಷಕರ ಮೌಲ್ಯಮಾಪನ ಮಾಡಿಸುವಂತೆ ಸೂಚಿಸಿದರು. ಶಾಲೆಗೆ ಪ್ರವೇಶ ನೀಡುವ ಸಂದರ್ಭದಲ್ಲಿ ಶೇ 80 ರಷ್ಟು ಅರ್ಹತೆಯಾಧಾರದ ಮೇಲೆ ಹಾಗೂ ಶೇ 20 ರಷ್ಟು ಸ್ಥಳೀಯರಿಗೆ ಮೀಸಲಿಡಬೇಕು. ಈ ನಿಟ್ಟಿನಲ್ಲಿ ಸಾಧಕ ಬಾಧಕಗಳನ್ನು ಪರಿಶೀಲಿಸುವಂತೆ ಸಿಎಂ ಸೂಚನೆ ನೀಡಿ,ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎನ್ನುವುದು ಪ್ರಥಮ ಆಧ್ಯತೆಯಾಗಿರಲಿ ಎಂದು ಸಿಎಂ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.