ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸಚಿವ ಚಲುವರಾಯಸ್ವಾಮಿ ಮೇಲೆ ಎಲ್ಲಿ ಆರೋಪ ಬಂದಿದೆ? ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಯಾವುದೇ ಭ್ರಷ್ಟಾಚಾರ ಆರೋಪ ಮಾಡಿಲ್ಲ. ಇದು ಬಿಜೆಪಿಯವರ ಕುತಂತ್ರ. ಮೂರು ವರ್ಷ ಬಿಜೆಪಿಯವರು ಅಧಿಕಾರದಲ್ಲಿದ್ದರು. ಆಗ ಗುತ್ತಿಗೆದಾರರಿಗೆ ಬಿಲ್ ಕೊಡದವರು, ಈಗ ಅವರೊಂದಿಗೆ ಸೇರಿ ಏಕೆ ಹೋರಾಟ ಮಾಡುತ್ತಾರೆ. ಅವರಿಗೆ ಏನು ನೈತಿಕತೆ ಇದೆ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಳಗಾವಿ(ಆ.12): ಬಿಜೆಪಿಯವರಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯ ಹುಟ್ಟಿಕೊಂಡಿದೆ. ನಮ್ಮ ಗ್ಯಾರಂಟಿ ಯೋಜನೆ ಜಾರಿಯಾದ ಮೇಲೆ ವಿನಾಕಾರಣ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಯಾವ ವಿಷಯವೂ ಇಲ್ಲ. ವಿನಾಕಾರಣ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸಚಿವ ಚಲುವರಾಯಸ್ವಾಮಿ ಮೇಲೆ ಎಲ್ಲಿ ಆರೋಪ ಬಂದಿದೆ? ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಯಾವುದೇ ಭ್ರಷ್ಟಾಚಾರ ಆರೋಪ ಮಾಡಿಲ್ಲ. ಇದು ಬಿಜೆಪಿಯವರ ಕುತಂತ್ರ. ಮೂರು ವರ್ಷ ಬಿಜೆಪಿಯವರು ಅಧಿಕಾರದಲ್ಲಿದ್ದರು. ಆಗ ಗುತ್ತಿಗೆದಾರರಿಗೆ ಬಿಲ್ ಕೊಡದವರು, ಈಗ ಅವರೊಂದಿಗೆ ಸೇರಿ ಏಕೆ ಹೋರಾಟ ಮಾಡುತ್ತಾರೆ. ಅವರಿಗೆ ಏನು ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಗ್ಯಾರಂಟಿಗಳಿಂದ ಪ್ರತಿ ಬಡ ಕುಟುಂಬಕ್ಕೂ ಸಿಗ್ತಿದೆ ₹5000: ಸಿದ್ದರಾಮಯ್ಯ
ಗುತ್ತಿಗೆದಾರರು ಒಳ್ಳೆಯ ಕೆಲಸ ಮಾಡಿದ್ದಾರೋ ಇಲ್ಲವೋ ಎಂಬುದರ ಕುರಿತು ಬೆಂಗಳೂರಿನಲ್ಲಿ ಸರ್ಕಾರ ನಾಲ್ಕು ತಂಡಗಳ ರಚನೆ ಮಾಡಿ ತನಿಖೆ ನಡೆಸುತ್ತಿದೆ. ಅದರ ವರದಿ ಬಂದ ಮೇಲೆ ತಪ್ಪು ಮಾಡಿಲ್ಲ ಎಂದರೆ ಗುತ್ತಿಗೆದಾರರ ಬಿಲ್ ಕೊಡುತ್ತೇವೆ. ತಪ್ಪು ಮಾಡಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದ ಅವರು, ಬಿಜೆಪಿ ಸರ್ಕಾರದಲ್ಲಿ ಎರಡ್ಮೂರು ವರ್ಷಗಳ ಕಾಲದ ಕಾಮಗಾರಿಯ ಬಾಕಿ ಹಣ ನೀಡಬೇಕು. ಅವರು ಹಣ ಕೊಡದೆ ಬಿಟ್ಟು ಹೋಗಿದ್ದಾರೆ. ನಾವು ಹಣ ಕೊಡಬೇಕು. ಅದರ ಬಗ್ಗೆ ಎರಡು ಮಾತಿಲ್ಲ. ಹಿಂದೆ ಶೇ.40 ಪರ್ಸೆಂಟ್ ಭ್ರಷ್ಟಾಚಾರ ಇರುವುದು ಮುಖ್ಯ ಚರ್ಚೆಯಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಿದ್ದಾರೆಯೋ ಇಲ್ಲವೋ ತಿಳಿಯುವುದು ಯಾವಾಗ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ರಾಜ್ಯವನ್ನು ಆರ್ಥಿಕವಾಗಿ ಹಾಳು ಮಾಡಿ ಹೋಗಿದ್ದಾರೆ. ಭ್ರಷ್ಟಾಚಾರ, ಬೆಲೆ ಏರಿಕೆ, ಧರ್ಮ ರಾಜಕಾರಣ ಮಾಡಿದ್ದಾರೆ. ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನ ಗೆದ್ದ ಮೇಲೆ ಅವರಿಗೆ ಭಯ ಹುಟ್ಟಿಕೊಂಡಿದೆ ಎಂದು ಜರಿದ ಅವರು, ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನವನ್ನು ರಾಜ್ಯದಲ್ಲಿ ಗೆಲುವು ಸಾಧಿಸುತ್ತೇವೆ ಎಂದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಜನರು ಸಂತೋಷವಾಗಿದ್ದಾರೆ. ಗೃಹಲಕ್ಷ್ಮೇ ಯೋಜನೆಯನ್ನು ಬೆಳಗಾವಿಯಲ್ಲಿಯೇ ಈ ತಿಂಗಳು ಜಾರಿಗೆ ತರಲಿದ್ದೇವೆ. 1.22 ಕೋಟಿ ಕುಟುಂಬದ ಯಜಮಾನಿಯರಿಗೆ ಎರಡು ಸಾವಿರ ರುಪಾಯಿ ಕೊಡುವುದು ಬಹುದೊಡ್ಡ ಯೋಜನೆ. ಇದನ್ನು ಬಿಡುಗಡೆ ಮಾಡಲು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೂ ಆಹ್ವಾನಿಸಲಾಗಿದೆ ಎಂದರು.
ರಾಹುಲ್ ಗಾಂಧಿ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಮತ್ತಿತರು ಸೇರಿ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ವಿಷಯ ಲೋಕಸಭಾಧ್ಯಕ್ಷರ ಮುಂದಿದೆ. ರಾಹುಲ… ಗಾಂಧಿಯವರು ಅಧಿವೇಶನದಲ್ಲಿ ಅವಿಶ್ವಾಸ ಮಂಡನೆ ಸಂದರ್ಭದಲ್ಲಿ ಕೇಂದ್ರದ ವಿರುದ್ಧ ಕಟು ಟೀಕೆ ಮಾಡಿರುವುದರಿಂದ ದೂರು ನೀಡಿದ್ದಾರೆ ಎಂದರು.
ಕೆಲಸ ಆಗಿದ್ರೆ ಬಿಲ್, ತಪ್ಪು ಮಾಡಿದ್ರೆ ಶಿಕ್ಷೆ: ಸಿಎಂ ಖಡಕ್ ನುಡಿ
ಮಾಜಿ ಸಚಿವ ಆರ್.ಅಶೋಕ ಬಿನ್ ಲಾಡೆನ್ ಸರ್ಕಾರ ಎಂದು ಟೀಕಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭಯ ಶುರುವಾಗಿದೆ. ಹಾಗಾಗಿ ಹತಾಶರಾಗಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳು ಜಾರಿಯಾಗುತ್ತಿದ್ದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಬೆಳಗಾವಿ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ನಮಗೆ ನ್ಯಾಯ ಸಿಕ್ಕಿಲ್ಲ. ಮರು ತನಿಖೆ ಮಾಡುವಂತೆ ಅವರ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಅದನ್ನು ಕಾನೂನು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇನೆ ಎಂದರು.