ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಿಂದ ರೈತರು, ಬಡವರು, ಮಹಿಳೆಯರು, ಕಾರ್ಮಿಕರು, ಹಿಂದುಳಿದ ವರ್ಗಗಳಿಗೆ ಸೇರಿದ ಪ್ರತಿಯೊಂದು ಕುಟುಂಬಕ್ಕೆ 5000 ಲಭಿಸುತ್ತಿದೆ. ಇದರಿಂದ ಆರ್ಥಿಕ ಚಟುವಟಿಕೆಗಳು ಗರಿಗೆದರಲಿದ್ದು, ರಾಜ್ಯದ ಜಿಡಿಪಿ ಹೆಚ್ಚಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ (ಆ.12): ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಿಂದ ರೈತರು, ಬಡವರು, ಮಹಿಳೆಯರು, ಕಾರ್ಮಿಕರು, ಹಿಂದುಳಿದ ವರ್ಗಗಳಿಗೆ ಸೇರಿದ ಪ್ರತಿಯೊಂದು ಕುಟುಂಬಕ್ಕೆ 5000 ಲಭಿಸುತ್ತಿದೆ. ಇದರಿಂದ ಆರ್ಥಿಕ ಚಟುವಟಿಕೆಗಳು ಗರಿಗೆದರಲಿದ್ದು, ರಾಜ್ಯದ ಜಿಡಿಪಿ ಹೆಚ್ಚಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರಿನಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ ಲೋಕಾರ್ಪಣೆ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸೇರಿ ಸರ್ಕಾರದ ಸಾಧನೆ ವಿರೋಧ ಪಕ್ಷವನ್ನು ಕಂಗೆಡಿಸಿದೆ. ಹೀಗಾಗಿ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಅದೇನೇ ಆದರೂ ನಾವು ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಲಿದ್ದೇವೆ ಎಂದರು. ಗೃಹಲಕ್ಷ್ಮೀ ಯೋಜನೆ ಈ ತಿಂಗಳೇ ಜಾರಿಗೆ ಬರಲಿದ್ದು, ಐದನೇ ಗ್ಯಾರಂಟಿ ಯುವ ನಿಧಿ ಯೋಜನೆಯನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಜಾರಿಗೊಳಿಸಲಾಗುವುದು. ಪ್ರಮುಖ ಸಮಾಜ ಸುಧಾರಕರ ಪೈಕಿ ಬಸವಣ್ಣ ನನಗೆ ಅತ್ಯಂತ ಇಷ್ಟವಾದ ವ್ಯಕ್ತಿ. ಆದ್ದರಿಂದ ಬಸವ ಜಯಂತಿಯ ದಿನ ಪ್ರಮಾಣವಚನ ಸ್ವೀಕರಿಸಿ ನುಡಿದಂತೆ ನಡೆಯುತ್ತಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಕಾಂಗ್ರೆಸ್ ಸರ್ಕಾರ ಕಮಿಷನ್ ಕೇಳಿದ್ದಕ್ಕೆ ಸಾಕ್ಷ್ಯ ಎಲ್ಲಿದೆ?: ಸಚಿವ ಎಂ.ಬಿ.ಪಾಟೀಲ್
ರಾಜ್ಯದಲ್ಲಿ ಪಶು ಸಂಪತ್ತು ಅಧಿಕವಾಗಿದ್ದು, ಪಶು ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಜಾನುವಾರುಗಳ ಆರೋಗ್ಯ ರಕ್ಷಣೆ ಜತೆಗೆ ಕೃಷಿ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು. ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಅಥಣಿ ಶಾಸಕರ ನೀರಾವರಿ ಯೋಜನೆಗಳ ಕನಸು ದೊಡ್ಡದು. ಇಡೀ ಕ್ಷೇತ್ರದ ಜನರ ಬದುಕು ಹಸನಾಗಿಸಲು ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಅವರು ಬಯಸಿದ್ದಾರೆ. ಈ ಭಾಗದ ಜನ ಮಾತ್ರವಲ್ಲ, ಜಾನುವಾರುಗಳ ಅನುಕೂಲಕ್ಕಾಗಿ ಪಶು ವೈದ್ಯಕೀಯ ಮಹಾವಿದ್ಯಾಲಯವನ್ನು ಶಾಸಕ ಲಕ್ಷ್ಮಣ ಸವದಿ ಸ್ಥಾಪಿಸುವ ಮೂಲಕ ತಮ್ಮ ಕಳಕಳಿ ಪ್ರದರ್ಶಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಾರಾಷ್ಟ್ರಕ್ಕೆ ಮಳೆಗಾಲದಲ್ಲಿ 4 ಟಿಎಂಸಿ ನೀಡಿ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಅವರಿಂದ ರಾಜ್ಯಕ್ಕೆ 4 ಟಿಎಂಸಿ ನೀರು ವಿನಿಮಯ ಮಾಡಿಕೊಳ್ಳುವ ಒಪ್ಪಂದಕ್ಕೆ ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು. ಈ ರೀತಿಯ ಒಪ್ಪಂದದಿಂದ ಸರ್ಕಾರಕ್ಕೆ ಯಾವುದೇ ರೀತಿಯ ಆರ್ಥಿಕ ಹೊರೆಯಾಗುವುದಿಲ್ಲ ಎಂದು ಹೇಳಿದರು. ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ ಮಾತನಾಡಿ, ಈ ಭಾಗದ ವಿದ್ಯಾರ್ಥಿಗಳು ಮತ್ತು ಜಾನುವಾರುಗಳನ್ನು ಸಾಕಿಕೊಂಡಿರುವ ರೈತ ಸಮುದಾಯಕ್ಕೆ ಪಶು ವೈದ್ಯಕೀಯ ಮಹಾವಿದ್ಯಾಲಯವು ಅನುಕೂಲವಾಗಲಿದೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಗುತ್ತಿಗೆದಾರರು ಭ್ರಷ್ಟಾಚಾರ ಆರೋಪ ಮಾಡಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ವೈದ್ಯರು, ಔಷಧಿಗಳ ಕೊರತೆಯ ಮಧ್ಯೆಯೂ ಪಶುಸಂಗೋಪನೆ ಇಲಾಖೆ ಉತ್ತಮ ಸೇವೆ ಒದಗಿಸುತ್ತಿದೆ. ರಾಜ್ಯದಲ್ಲಿಯೇ ಅತೀ ಹೆಚ್ಚು ಜಾನುವಾರುಗಳು ಇರುವ ಬೆಳಗಾವಿ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಕೂಡ ಹೆಚ್ಚಿನ ಪ್ರಮಾಣದಲ್ಲಿದೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೇ ಹೆಬ್ಬಾಳಕರ, ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿದರು.