ಕಾಂಗ್ರೆಸ್‌ ಸರ್ಕಾರ ಕಮಿಷನ್‌ ಕೇಳಿದ್ದಕ್ಕೆ ಸಾಕ್ಷ್ಯ ಎಲ್ಲಿದೆ?: ಸಚಿವ ಎಂ.ಬಿ.ಪಾಟೀಲ್‌

Published : Aug 12, 2023, 07:44 PM IST
ಕಾಂಗ್ರೆಸ್‌ ಸರ್ಕಾರ ಕಮಿಷನ್‌ ಕೇಳಿದ್ದಕ್ಕೆ ಸಾಕ್ಷ್ಯ ಎಲ್ಲಿದೆ?: ಸಚಿವ ಎಂ.ಬಿ.ಪಾಟೀಲ್‌

ಸಾರಾಂಶ

‘ಕಾಂಗ್ರೆಸ್‌ ಸರ್ಕಾರ ಗುತ್ತಿಗೆದಾರರಿಗೆ ಬಿಲ್‌ ಪಾವತಿ ಮಾಡದೇ ಕಮಿಷನ್‌ಗಾಗಿ ಬೇಡಿಕೆ ಇಟ್ಟಿರುವ ಕುರಿತು ಬಿಜೆಪಿಯವರ ಬಳಿ ಸಾಕ್ಷಿ ಎಲ್ಲಿದೆ?’ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಅವರು ಪ್ರಶ್ನಿಸಿದರು.

ಬೆಂಗಳೂರು (ಆ.12): ‘ಕಾಂಗ್ರೆಸ್‌ ಸರ್ಕಾರ ಗುತ್ತಿಗೆದಾರರಿಗೆ ಬಿಲ್‌ ಪಾವತಿ ಮಾಡದೇ ಕಮಿಷನ್‌ಗಾಗಿ ಬೇಡಿಕೆ ಇಟ್ಟಿರುವ ಕುರಿತು ಬಿಜೆಪಿಯವರ ಬಳಿ ಸಾಕ್ಷಿ ಎಲ್ಲಿದೆ?’ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಅವರು ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಅಶ್ವತ್ಥನಾರಾಯಣ ಅವರು ಮಾಡಿದ ಭ್ರಷ್ಟಾಚಾರದ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ 40 ಪರ್ಸೆಂಟ್‌ ಸರ್ಕಾರದ ಕುರಿತು ಹೇಳಿಕೆ ನೀಡಿದ್ದಾಗ ಸಾಕ್ಷಿ ಕೇಳಿದ್ರಿ. ಈಗ ನಿಮ್ಮ ಬಳಿ ಸಾಕ್ಷಿ ಎಲ್ಲಿದೆ? ಈ ಕುರಿತು ದಾಖಲೆಗಳು ಇದ್ದರೆ ತೋರಿಸಲಿ’ ಎಂದರು. 

‘ವಿಪಕ್ಷ ನಾಯಕನ ಆಯ್ಕೆ ಮಾಡಲು ಬಿಜೆಪಿಗೆ ಆಗುತ್ತಿಲ್ಲ. ಆದರೆ, ಯಾವುದೇ ಸಾಕ್ಷಿ, ಆಧಾರವಿಲ್ಲದೆ ಸುಳ್ಳು ಆರೋಪ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದೀರಿ. ಮೊದಲು ವಿಪಕ್ಷ ನಾಯಕ ಆಯ್ಕೆ ಮಾಡಿ. ಈಗಾಗಲೇ ಸಚಿವ ಚಲುವರಾಯ ಸ್ವಾಮಿ ವಿಚಾರ ಸುಳ್ಳು ಎಂದು ಗೊತ್ತಾಗಿದೆ. ಮತ್ತೆ ಅದನ್ನೇ ಪ್ರಸ್ತಾಪಿಸುತ್ತಿರುವುದೇಕೆ?’ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಗುತ್ತಿಗೆದಾರರು ಭ್ರಷ್ಟಾಚಾರ ಆರೋಪ ಮಾಡಿಲ್ಲ: ಸಚಿವ ಪ್ರಿಯಾಂಕ್‌ ಖರ್ಗೆ

ಗುತ್ತಿಗೆದಾರರ ‘ಬಿಲ್‌’ ಕಮಿಷನ್‌ ಆರೋಪಕ್ಕೆ ಸಚಿವರ ಆಕ್ರೋಶ: ಗುತ್ತಿಗೆದಾರರ ಬಿಲ್‌ ಪಾವತಿಗೆ ಕಮಿಷನ್‌ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸಚಿವರು, ‘ಬಿಜೆಪಿ ನಾಯಕರು ಸೋಲಿನ ಹತಾಶೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ. ಗುತ್ತಿಗೆದಾರರೊಂದಿಗೆ ಅವರಿಗೆ ಸಹಭಾಗಿತ್ವ ಇದೆಯೇ’ ಎಂದು ಪ್ರಶ್ನಿಸಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಲೋಕೋಪಯೋಗಿ ಸಚಿವ ಡಾ. ಎಚ್‌.ಸಿ.ಮಹದೇವಪ್ಪ, ‘ಗುತ್ತಿಗೆದಾರರ ಬಿಲ್‌ ಪಾವತಿಗೆ ಕಮಿಷನ್‌ ಕೇಳಿದ ಕುರಿತು ಬಿಜೆಪಿ ನಾಕರು ಮಾಡುತ್ತಿರುವ ಆರೋಪ ಸುಳ್ಳು. ಸೋಲಿನ ಹತಾಶೆಯಿಂದಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಜನರ ಗಮನ ಸೆಳೆಯಲು ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಅಧಿಕಾರದಲ್ಲಿದ್ದಾಗ ಸರಿಯಾಗಿ ಕೆಲಸ ಮಾಡಲಿಲ್ಲ. ತಮ್ಮ ಆಡಳಿತದ ಕುರಿತು ಜನರ ಬಳಿ ಹೇಳಿಕೊಳ್ಳುವುದು ಏನೂ ಇಲ್ಲ. ಹೀಗಾಗಿ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ಬಿಲ್‌ ಪಾವತಿ ಸಂಬಂಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸರ್ಕಾರಕ್ಕೆ ಡೆಡ್‌ಲೈನ್‌ ಕೊಡಲು ಅವರೇನು ಸಾಂವಿಧಾನಿಕ ಹುದ್ದೆಯಲ್ಲಿಲ್ಲ. ಬಿಲ್‌ ಪಾವತಿಗೆ ಮನವಿ ಮಾಡಿಕೊಳ್ಳಲಿ. ಸಮಸ್ಯೆ ಇರುವುದನ್ನು ಬಗೆಹರಿಸಿ ಬಿಲ್‌ ಪಾವತಿಸುತ್ತೇವೆ. ಇನ್ನು, ಬಿಬಿಎಂಪಿ ಗುತ್ತಿಗೆದಾರರು ‘ಕಮಿಷನ್‌ ಕೇಳಿಲ್ಲ ಎಂದರೆ ಅಜ್ಜಯ್ಯ ಮಠದಲ್ಲಿ ಬಂದು ಆಣೆ ಮಾಡಿ’ ಎಂದು ಹೇಳುತ್ತಾರೆ. ಅಲ್ಲಿಗೆ ಬಂದರೆ ಸತ್ಯ ಹೊರಗೆ ಬರುತ್ತದೆಯೇ? ಅದೆಲ್ಲ ಮೂಢನಂಬಿಕೆಯಷ್ಟೇ. ಸಂವಿಧಾನದ ಮೇಲೆ ನಂಬಿಕೆ ಇಡಬೇಕು. ಕೆಲಸ ಮಾಡಿರುವುದನ್ನು ಪರೀಕ್ಷಿಸುವುದು ತಪ್ಪಾ? ಎಂದು ಪ್ರಶ್ನಿಸಿದರು.

ಮಣಿಪುರದಲ್ಲಿ ಶಾಂತಿ ಸ್ಥಾಪಿಸಲು ಏಕೆ ಆಗುತ್ತಿಲ್ಲ: ದಿಗ್ವಿಜಯ್‌ ಸಿಂಗ್‌ ಪ್ರಶ್ನೆ

ಇನ್ನೊಬ್ಬ ಸಚಿವ ಶಿವರಾಜ ತಂಗಡಗಿ ಮಾತನಾಡಿ, ‘ಗುತ್ತಿಗೆದಾರರ ಬಿಲ್‌ ಪಾವತಿಗೂ ಮುನ್ನ ಕಾಮಗಾರಿ ಪರಿಶೀಲಿಸಲು ನಾಲ್ಕು ಸಮಿತಿ ರಚಿಸಲಾಗಿದೆ. ಸಮಿತಿ ಕಾಮಗಾರಿಗಳನ್ನು ಪರೀಕ್ಷಿಸಿ ವರದಿ ನೀಡಲಿದೆ. ಅದನ್ನಾಧರಿಸಿ ಬಿಲ್‌ ಪಾವತಿಸುತ್ತೇವೆ. ಬಸವರಾಜ ಬೊಮ್ಮಾಯಿ ಹಾಗೂ ಅಶ್ವತ್ಥನಾರಾಯಣ ಅವರಿಗೆ ಆತುರವೇಕೆ? ಸಮಿತಿಗಳ ವರದಿ ಬರುವವರೆಗೂ ತಾಳ್ಮೆಯಿಂದಿರಲಿ. ಬಿಜೆಪಿಯವರು ಗುತ್ತಿಗೆದಾರರ ಸಹಭಾಗಿಗಳಂತೆ ಮಾತನಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಕೆದಾಟು, ಭದ್ರಾ, ಕೃಷ್ಣಾ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ವಿಳಂಬ: ಡಿ.ಕೆ.ಶಿವಕುಮಾರ್ ಆಕ್ರೋಶ
ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್