ರಾಜ್ಯದ ಬಡವರಿಗೆ ರಾಜಕೀಯ, ಆರ್ಥಿಕ ಶಕ್ತಿ ತುಂಬುವ ಸಲುವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ವೋಟಿಗಾಗಿ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮಾ.03): ರಾಜ್ಯದ ಬಡವರಿಗೆ ರಾಜಕೀಯ, ಆರ್ಥಿಕ ಶಕ್ತಿ ತುಂಬುವ ಸಲುವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ವೋಟಿಗಾಗಿ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಚಿಕ್ಕಮಗಳೂರು ನಗರದ ಶುಭಾಶ್ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದರು. ಬಡತನ ಇರುವವರೆಗೆ ಗ್ಯಾರಂಟಿ ಯೋಜನೆಗಳು ಇದ್ದೇ ಇರುತ್ತದೆ. ಗ್ಯಾರಂಟಿ ವಿಚಾರದಲ್ಲಿ ನಾವು ನುಡಿದಂತೆ ನಡೆದಿದ್ದೇವೆ. ಈ ಅವಧಿಯಲ್ಲದೆ ಮುಂದಿನ 5 ವರ್ಷವೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.
undefined
ಬಿಜೆಪಿ, ಜೆಡಿಎಸ್ ಒಂದೇ ವೇದಿಕೆಯಲ್ಲಿ ಚರ್ಚೆಗೆ ಆಹ್ವಾನ: ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ವಿರೋಧ ಪಕ್ಷಗಳು ಸುಳ್ಳು ಆರೋಪ ಮಾಡುತ್ತಿವೆ. ಗ್ಯಾರಂಟಿ ಯೋಜನೆಗಳನ್ನು ಜನ ಸ್ವೀಕಾರ ಮಾಡಿದ್ದಾರೆ ಆದರೆ ಬಿಜೆಪಿಗೆ ಹೊಟ್ಟೆ ಉರಿ, ಈ ವಿಚಾರದಲ್ಲಿ ಬಿಜೆಪಿ, ಜೆಡಿಎಸ್ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬರಲಿ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದರೆ ಕರ್ನಾಟಕ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ ಸರ್ಕಾರ ಬಂದು 9 ತಿಂಗಳಾಯಿತು. ಎಲ್ಲಾ ಗ್ಯಾರಂಟಿಗಳನ್ನು ಜಾರಿಗೆ ತಂದು ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದೇವೆ ಎಂದರು.
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಅಗತ್ಯ ಬಿದ್ದರೆ ಮಾತ್ರ ಎನ್‌ಐಎ ತನಿಖೆಗೆ: ಸಿಎಂ ಸಿದ್ದರಾಮಯ್ಯ
ನಮಗೆ ಗೃಹ ಲಕ್ಷ್ಮೀ ಹಣವೇ ಬಂದಿಲ್ಲ: ನಮಗೆ ಗೃಹ ಲಕ್ಷ್ಮೀ ಹಣವೇ ಬಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಕೇಳಲು ಬಂದಿದ್ದೇವೆ ಎಂದು ಇಂದು ನಡೆದ ಗ್ಯಾರಂಟಿ ಫಲಾನುಭವಿಗಳ ಸಮಾವೇಶದ ವೇದಿಕೆ ಬಳಿ ನಾಲ್ಕೈದು ಮಹಿಳೆಯರು ಅಳಲು ತೋಡಿಕೊಂಡರು.ಅವರನ್ನು ವೇದಿಕೆ ಸಮೀಪದಲ್ಲೇ ಪೊಲೀಸರು ಮತ್ತಿತರೆ ಅಧಿಕಾರಿಗಳು ತಡೆದಿದ್ದರು. ನಮ್ಮನ್ನು ಸಿಎಂ ಬಳಿ ಕಳಿಸಿ, ನಮಗೂ ಹಣಬೇಕು ಅವರನ್ನೇ ಕೇಳುತ್ತೇವೆ ಎಂದು ಮಹಿಳೆಯರು ಪಟ್ಟು ಹಿಡಿದಿದ್ದರು.ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ವೇಳೆ ಭಾಷಣ ಮಾಡುತ್ತಿದ್ದರು. ನಾವು ಕಡೂರಿನಿಂದ ಬಂದಿದ್ದೇವೆ. ಗೃಹಲಕ್ಷ್ಮಿ ಹಣ ನಮಗೆ ಬರುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಪೆಂಡಿಂಗ್ ಆಗಿದೆ ಎಂದು ಹೇಳುತ್ತಿದ್ದಾರೆ. ಎಂದು ಮಹಿಳೆಯೊಬ್ಬರು ತಿಳಿಸಿದರು. ವಿಷಯ ತಿಳಿದು ಸ್ಥಳಕ್ಕೆ ಇನ್ನೊಂದಿಬ್ಬರು ಅಧಿಕಾರಿಗಳು ಆಗಮಿಸಿ ಮಹಿಳೆಯರನ್ನು ಸಮಾಧಾನ ಪಡಿಸಿ ಅಲ್ಲಿಂದ ಕರೆದೊಯ್ದರು.
ರಾಜ್ಯ ಸರ್ಕಾರಿ ನೌಕರರಿಗೆ ನೀಡಿದ್ದ ಓಪಿಎಸ್ ಜಾರಿಗೆ ಬದ್ಧ: ಸಚಿವ ಸಂತೋಷ್ ಲಾಡ್
ಹಿರಿಯ ನಾಯಕರು ಸಮಾವೇಶದ ಮುಂಭಾಗದಲ್ಲಿ: ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಭಾಪತಿ ಬಿ.ಎಲ್.ಶಂಕರ್ ಅವರು ಭಾನುವಾರ ನಡೆದ ಗ್ಯಾರಂಟಿ ಸಮಾವೇಶದಲ್ಲಿ ಪ್ರೇಕ್ಷರ ನಡುವೆ ಕುಳಿತು ಸಮಾರಂಭ ವೀಕ್ಷಿಸಿದ್ದು ಗಮನ ಸೆಳೆಯಿತು.ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಡಿ.ಎಲ್. ವಿಜಯಕುಮಾರ್ ಇತರರ ಜೊತೆ ಅವರು ಜನರ ಮಧ್ಯೆ ಕುಳಿತಿದ್ದರು. ಅಧಿಕಾರಿಯೊಬ್ಬರು ವೇದಿಕೆಗೆ ಕರೆದರೂ ಶಂಕರ್ ನಿರಾಕರಿಸಿದ್ದು ಕಂಡುಬಂತು.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಶಂಕರ್ ಪ್ರಚಾರ ಮಾಡಿದ್ದರು. ಐದಕ್ಕೆ ಐದೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವುದನ್ನು ಗಮನಿಸಬಹುದು.ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಶಾಸಕರುಗಳಾದ ಎಚ್.ಡಿ.ತಮ್ಮಯ್ಯ, ಜಿ.ಎಚ್.ಶ್ರೀನಿವಾಸ್, ಕೆ.ಎಸ್.ಆನಂದ್, ನಯನ ಮೋಟಮ್ಮ, ಟಿ.ಡಿ.ರಾಜೇಗೌಡ ಸೇರಿದಂತೆ ಅಧಿಕಾರಿಗಳು ವೇದಿಕೆಯಲ್ಲಿದ್ದರು.