Karnataka Politics: ಯುಟರ್ನ್ ಹೊಡೆದ ಸಿಎಂ ಇಬ್ರಾಹಿಂ, ಸಿದ್ದರಾಮಯ್ಯ ಮುಂದೆ ಮಹತ್ವದ ಬೇಡಿಕೆ

By Suvarna NewsFirst Published Dec 12, 2021, 4:06 PM IST
Highlights

* ಕಾಂಗ್ರೆಸ್​ನಲ್ಲಿ ವಿಪಕ್ಷ ನಾಯಕನ ಸ್ಥಾನಕ್ಕಾಗಿ ಜೋರಾದ ಪೈಪೋಟಿ
* ಸಿದ್ದರಾಮಯ್ಯರನ್ನು ಭೇಟಿಯಾದ ಆಕಾಂಕ್ಷಿಗಳು
* ಕುತೂಹಲ ಮೂಡಿಸಿದ ಸಿಎಂ ಇಬ್ರಾಹಿಂ ನಡೆ
 

ಬೆಂಗಳೂರು, (ಡಿ.12):   ಒಂದು ಕಡೆ ಕಾಂಗ್ರೆಸ್ (Congress) ಪಕ್ಷದ ಕಾರ್ಯವೈಖರಿಯನ್ನು ಟೀಕಿಸುತ್ತಾ, ಇನ್ನೊಂದು ಕಡೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರನ್ನು (HD Devegowda) ಹೊಗಳಲು ಆರಂಭಿಸಿದ್ದ ಸಿ.ಎಂ. ಇಬ್ರಾಹಿಂ(CM Ibrahim), ಬಹುತೇಕ ಜೆಡಿಎಸ್ ಸೇರಲಿದ್ದಾರೆ ಎನ್ನುವ ಸುದ್ದಿ ಜೋರಾಗಿತ್ತು. ಈ ನಡುವೆ, ಅವರು ಕಾಂಗ್ರೆಸ್ ಬಿಟ್ಟು ಹೋಗದಂತೆ ವಿದ್ಯಮಾನಗಳು ನಡೆದಿವೆ.

ಹೌದು...ಸಿಎಂ ಇಬ್ರಾಹಿಂ ಅವರು ಇಂದು (ಡಿ.12) ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನ ಭೇಟಿ ಮಹತ್ವದ ಮಾತುಕತೆ ನಡೆಸಿದರು. ಈ ಮೂಲಕ ಕಾಂಗ್ರೆಸ್ ಬಿಡುವುದಿಲ್ಲ ಎನ್ನುವ ಸಂದೇಶ ಕೊಟ್ಟರು.

ಜೆಡಿಎಸ್‌ ಸೇರುವ ಒಲವು ತೋರಿದ್ರಾ ಕಾಂಗ್ರೆಸ್ ಹಿರಿಯ ನಾಯಕ? ತೋಟದ ಮನೆಯಲ್ಲಿ ಮಹತ್ವದ ಚರ್ಚೆ

ಜೆಡಿಎಸ್‌ನ (JDS) ಹಲವು ಶಾಸಕರು ಪಕ್ಷ ತೊರೆದು ಬಿಜೆಪಿ ಇಲ್ಲವೇ ಕಾಂಗ್ರೆಸ್‌ಗೆ ವಲಸೆ ಹೋಗಲು ಮಾನಸಿಕವಾಗಿ ಸಿದ್ದವಾಗಿರುವಾಗ ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗ, ಕೇಂದ್ರದ ಮಾಜಿ ಸಚಿವ ಸಿ. ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲು ತೀರ್ಮಾನಿಸಿದ್ದರು. ಆದ್ರೆ, ಇದೀಗ ಅದೇನಾಯ್ತೋ ಏನೋ ದಿಢೀರ್ ಯುಟರ್ನ್ ಹೊಡೆದಿದ್ದಾರೆ.

ಸಿದ್ದರಾಮಯ್ಯರನ್ನ ಟೀಕಿಸುತ್ತಿದ್ದ ಇಬ್ರಾಹಿಂ ಇದಿಗ ಅವರ ನಿವಾಸಕ್ಕೆ ಹೋಗಿ ಮಹತ್ವದ ಚರ್ಚೆ ನಡೆಸಿದರು. ಈ ವೇಳೆ ಮೇಲ್ಮನೆ ಪ್ರತಿಪಕ್ಷ ನಾಯಕ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಭರವಸೆ ನೀಡಿದ ಸಿದ್ದು
ಇಬ್ರಾಹಿಂ ಬೇಡಿಕೆಗೆ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದು, ಈ ಬಗ್ಗೆ ಹೈಕಮಾಂಡ್ ಗಮನಕ್ಕೆ ತರುತ್ತೇನೆ ಎಂದು ಅಭಯ ನೀಡಿದ್ದಾರೆ ಎನ್ನಲಾಗಿದ್ದು, ನಾನು ಹೈಕಮಾಂಡ್ ಜೊತೆ ಮಾತನಾಡುತ್ತೇನೆ. ಹೈಕಮಾಂಡ್ ಒಪ್ಪಿದರೆ ನನ್ನದೇನು ಅಭ್ಯಂತರವಿಲ್ಲ. ಅವರ ಜೊತೆ ಮಾತನಾಡಿ ನಿನಗೆ ಹೇಳ್ತೇನೆ. ನೀನೇ ಪಕ್ಷ ಬಿಡ್ತೀಯಾ ಅಂತ ಸುದ್ದಿಯಿತ್ತಲ್ಲಪ್ಪ. ಜೆಡಿಎಸ್ ನಾಯಕರ ಜೊತೆ ಮಾತುಕತೆ ನಡೆಸಿದ್ದೆ. ಅದಕ್ಕೆ ನಾವು ಸುಮ್ಮನಾಗಿದ್ದೆವು. ಈಗ ಇಲ್ಲೇ ಇರುತ್ತೇನೆ, ಎಲ್ಲೂ ಹೋಗಲ್ಲ ಅಂತಿದ್ದೀಯಾ. ಹಾಗಾಗಿ, ಹಾಗಾದರೇ ನಾನು ಹೈಕಮಾಂಡ್ ಮಾತನಾಡ್ತೇನೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಟಿಪ್ಪು ಜಯಂತಿ ಅಂದೇ ವಿರೋಧಿಸಿದ್ದೆ, ಸಿದ್ದುಗ್ಗೆ ಗುದ್ದಿದ ಸಿಎಂ ಇಬ್ರಾಹಿಂ!

ಈ ಹಿಂದೆಯೇ ಬೇಡಿಕೆ ಇಟ್ಟಿದ್ದ ಇಬ್ರಾಹಿಂ
ಈ ಹಿಂದೆಯೇ ಸಿ.ಎಂ ಇಬ್ರಾಹಿಂ  ವಿಪಕ್ಷ ನಾಯಕನ ಸ್ಥಾನ ನೀಡುವಂತೆ  ಸಿದ್ದರಾಮಯ್ಯ ಬಳಿ ಬೇಡಿಕೆ ಇಟ್ಟಿದ್ದರು. ಇನ್ನೊಂದೆಡೆ ಇಬ್ರಾಹಿಂಗೆ ವಿಪಕ್ಷ ಸ್ಥಾನ ನೀಡಲು ಮೂಲ ಕಾಂಗ್ರೆಸ್ಸಿಗರ ಆಕ್ಷೇಪವಿತ್ತು. ವಿಧಾನ ಸಭೆ ಮತ್ತು ವಿಧಾನ ಪರಿಷತ್ ಎರಡೂ ಸ್ಥಾನ ಜನತಾ ಪರಿವಾರದ ಮೂಲದವರಿಗೆ ನೀಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಈ ಹಿನ್ನಲೆಯಲ್ಲಿ ಇಬ್ರಾಹಿಂಗೆ ಪರಿಷತ್ ವಿಪಕ್ಷ ನಾಯಕನ ಸ್ಥಾನ ನೀಡಬೇಡಿ ಎಂದು ಮೂಲ ಕಾಂಗ್ರೆಸ್ಸಿಗರಿಂದ ಆಕ್ಷೇಪ ವ್ಯಕ್ತವಾಗುವ ಸಾಧ್ಯತೆಗಳಿದ್ದವು. ಇದರಿಂದ ಇಬ್ರಾಹಿಂಗೆ ಪರಿಷತ್  ವಿಪಕ್ಷ ಸ್ಥಾನ ಸಿಕ್ಕಿರಲಿಲ್ಲ.

ಸಲೀಂ ಅಹ್ಮದ್, ವೀರಭದ್ರಪ್ಪ ಭೇಟಿ

ಸಿಎಂ ಇಬ್ರಾಹಿಂ ಭೇಟಿ ಮಾಡಿದ ಬಳಿಕ ಸಿದ್ದರಾಮಯ್ಯ ನಿವಾಸಕ್ಕೆ ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್, ಪರಿಷತ್​ನ ಹಿರಿಯ ಸದಸ್ಯ ಅಲ್ಲಂ ವೀರಭದ್ರಪ್ಪ ಕೂಡ ಭೇಟಿ ನೀಡಿದರು. 

ಇನ್ನು ವಿಧಾನ ಪರಿಷತ್​ನ ವಿರೋಧ ಪಕ್ಷ ನಾಯಕನ ಸ್ಥಾನ ವಿಚಾರಕ್ಕೆ ಸಂಬಂಧಿಸಿ CLP ನಾಯಕ ಸಿದ್ದರಾಮಯ್ಯರನ್ನು ಆಕಾಂಕ್ಷಿಗಳು ಭೇಟಿ ಮಾಡುತ್ತಿದ್ದಾರೆ. ಇಬ್ರಾಹಿಂ ಭೇಟಿ ಬೆನ್ನಲ್ಲೇ ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್, ಪರಿಷತ್​ನ ಹಿರಿಯ ಸದಸ್ಯ ಅಲ್ಲಂ ವೀರಭದ್ರಪ್ಪ ಕೂಡ ಭೇಟಿ ನೀಡಿದ್ದಾರೆ. ಸಲೀಂ ಅಹ್ಮದ್ ವಿಧಾನ ಪರಿಷತ್ ಪ್ರವೇಶಿಸುವ ವಿಶ್ವಾಸದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಷತ್ ವಿಪಕ್ಷ ನಾಯಕ ಸ್ಥಾನ ತಮಗೆ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಇಬ್ರಾಹಿಂ

ಕಳೆದ ಆರೇಳು ತಿಂಗಳಲ್ಲಿ ಎರಡ್ಮೂರು ಬಾರಿ ದೇವೇಗೌಡ್ರು ಮತ್ತು ಕುಮಾರಸ್ವಾಮಿಯವರನ್ನು ಭೇಟಿಯಾಗಿರುವ ಇಬ್ರಾಹಿಂ, ಜೆಡಿಎಸ್ ಪಕ್ಷಕ್ಕೆ ಹತ್ತಿರವಾಗುತ್ತಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಯನ್ನು ತಮಗೆ ನೀಡಬೇಕು ಎನ್ನುವ ಡಿಮಾಂಡ್ ಅನ್ನು ಇಬ್ರಾಹಿಂ ಅವರು ಗೌಡ್ರ ಮುಂದಿಟ್ಟಿದ್ದರು ಎನ್ನುವ ಸುದ್ದಿಗಳು ಹರಿದಾಡುತ್ತಿದ್ದವು.  ಅಲ್ಲದೇ ಕಾಂಗ್ರೆಸ್‌ ಕಾರ್ಯಚಟಿವಟಿಕೆಗಳಿಂದ ದೂರ ಉಳಿದಿದ್ದ ಇಬ್ರಾಹಿಂ, ಪಕ್ಷದಿಂದ ಒಂದು ಕಾಲು ಆಚೆ ಇಟ್ಟಿದ್ದು, ಜೆಡಿಎಸ್ ಸೇರ್ಪಡೆ ಫಿಕ್ಸ್ ಎನ್ನಲಾಗಿತ್ತು. ಇದರಿಂದ ಇಬ್ರಾಹಿಂ ಅವರು ಕಾಂಗ್ರೆಸ್ಸಿನಲ್ಲಿದ್ದಾರೋ ಅಥವಾ ಜೆಡಿಎಸ್ ನಲ್ಲಿದ್ದಾರೋ ಎನ್ನುವ ಗೊಂದಲ ಮುಂದುವರಿದಿತ್ತು. ಇದೀಗ ಅಂತಿಮವಾಗಿ ಇಬ್ರಾಹಿಂ ವಿಪಕ್ಷ ನಾಯಕನ ಸ್ಥಾನ ನೀಡಿದರೆ ಪಕ್ಷದಲ್ಲೇ ಮುಂದುವರೆಯುವ ಚಿಂತನೆ ನಡೆಸಿದ್ದಾರೆ.

ಒಟ್ಟಿನಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಪರಿಷತ್ ವಿಪಕ್ಷ ನಾಯಕನ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿದ್ದು, ಅಂತಿಮವಾಗಿ ಯಾರಿಗೆ ಸಿಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

click me!