ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುವ ನಿರ್ಧಾರ ಮಾಡಿದ್ದ ಮುಖಂಡರೋರ್ವರು ಇದೀಗ ತಮ್ಮ ನಿರ್ಧಾರ ಬದಲಿಸಿದಂತಿದೆ. ಮತ್ತೆ ಕೈನಲ್ಲೇ ಉಳಿಯುವ ಸಾಧ್ಯತೆ ಹೆಚ್ಚಾಗಿದೆ.
ಬೆಂಗಳೂರು (ಮಾ.03): ಜೆಡಿಎಸ್‌ನತ್ತ ಮುಖ ಮಾಡಿದ್ದ ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ ತಮ್ಮ ಹಳೆಯ ಗೆಳೆಯ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮನವೊಲಿಕೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲೇ ಉಳಿಯುವ ಸಾಧ್ಯತೆ ಹೆಚ್ಚಿದೆ.
ಕಾಂಗ್ರೆಸ್‌ನ ಮುಸ್ಲಿಂ ನಾಯಕರ ಆಗ್ರಹದ ಹಿನ್ನೆಲೆಯಲ್ಲಿ ಸೋಮವಾರವಷ್ಟೇ ಸಿ.ಎಂ.ಇಬ್ರಾಹಿಂ ಜತೆ ಸಿದ್ದರಾಮಯ್ಯ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದರು. ಈ ವೇಳೆ ತಮ್ಮ ನಿವಾಸಕ್ಕೆ ಊಟಕ್ಕೆ ಬರುವಂತೆ ಆಹ್ವಾನಿಸಿದ್ದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಸಿದ್ದರಾಮಯ್ಯ ಅವರು ಇಬ್ರಾಹಿಂ ನಿವಾಸಕ್ಕೆ ತೆರಳಿದರು.
ಕಾಂಗ್ರೆಸ್‌ನಲ್ಲಿ ಮುಸ್ಲಿಮರು ಮೂಲೆಗುಂಪು ಎಂದ 'ಕೈ' ನಾಯಕ ...
ಈ ವೇಳೆ ಇಬ್ಬರು ನಾಯಕರು ಸುದೀರ್ಘ ಚರ್ಚೆ ನಡೆಸಿದರು. ಇದರ ಪರಿಣಾಮ ಇಬ್ರಾಹಿಂ ಜೆಡಿಎಸ್‌ಗೆ ತೆರಳುವ ತಮ್ಮ ನಿರ್ಧಾರವನ್ನು ಕೈಬಿಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ಹಾಗೂ ಸಿ.ಎಂ.ಇಬ್ರಾಹಿಂ ಬಹುಕಾಲದ ಗೆಳೆಯರು. ಜೆಡಿಎಸ್‌ನಲ್ಲಿಯೂ ಒಟ್ಟಿಗೆ ಇದ್ದರು. ಸಿದ್ದರಾಮಯ್ಯ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಸಿ.ಎಂ.ಇಬ್ರಾಹಿಂ ಅವರು ಸಹ ಕಾಂಗ್ರೆಸ್‌ಗೆ ಬಂದಿದ್ದರು. ಹಾಲಿ ವಿಧಾನಪರಿಷತ್ ಸದಸ್ಯರಾಗಿರುವ ಇಬ್ರಾಹಿಂ ಅವರು ಇತ್ತೀಚೆಗೆ ಸಿದ್ದರಾಮಯ್ಯ ಅವರ ವಿರುದ್ಧ ಮುನಿಸಿಕೊಂಡಿದ್ದರು.
ಈ ನಡುವೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್‌ಗೆ ಬರುವಂತೆ ಆಹ್ವಾನ ನೀಡಿದ್ದರು. ಈ ಬೆಳವಣಿಗಳಿಂದ ಇಬ್ರಾಹಿಂ ಜೆಡಿಎಸ್ ಸೇರಲಿದ್ದಾರೆ ಎನ್ನಲಾಗಿತ್ತು. ಇದೀಗ ಸಿದ್ದರಾಮಯ್ಯ ಅವರ ಭೇಟಿಯಿಂದ ಇಬ್ರಾಹಿಂ ಅವರು ಜೆಡಿಎಸ್ ಸೇರುವ ನಿರ್ಧಾರ ಕೈಬಿಟ್ಟಿದ್ದಾರೆ ಎನ್ನಲಾಗಿದೆ.