ಬಿಜೆಪಿ ಮುಖಂಡ ಎಚ್ ವಿಶ್ವನಾಥ್‌ಗೆ ಭಾರೀ ನಿರಾಸೆಯುಂಟಾಗಿದೆ. ಭಾರೀ ನಿರೀಕ್ಷೆಯಲ್ಲಿದ್ದ ಅವರಿಗೆ ಇದೀಗ ಅಸಮಾಧಾನ ತಲೆ ದೋರಿದೆ.
ಬೆಂಗಳೂರು (ಮಾ.03): ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ತುಳಸಿ ಮುನಿರಾಜು ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಅದರೊಂದಿಗೆ, ಈ ಹುದ್ದೆಗೆ ಆಯ್ಕೆಯಾಗಿ ಸರ್ಕಾರದಲ್ಲಿ ಸಚಿವರಾಗುವ ಆಸೆ ಹೊಂದಿದ್ದ ಇನ್ನೊಬ್ಬ ಬಿಜೆಪಿ ನಾಯಕ ಎಚ್.ವಿಶ್ವನಾಥ್ ಅವರಿಗೆ ನಿರಾಸೆಯಾಗಿದೆ.
ಎಸ್.ಎಲ್.ಧರ್ಮೇಗೌಡ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ತುಳಸಿ ಮುನಿರಾಜು ಅವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಪಕ್ಷದ ವತಿಯಿಂದ ಬುಧವಾರ ಬಿ ಫಾರಂ ನೀಡುವ ನಿರೀಕ್ಷೆ ಇದೆ. ಶುಕ್ರವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.
undefined
ಐದೂವರೆ ವರ್ಷ ಬಿಟ್ಟು ಮೂರುವರೆ ವರ್ಷ ಅಧಿಕಾರವಧಿಯ ಸ್ಥಾನದ ಮೇಲೆ ಕಣ್ಣಿಟ್ಟ ವಿಶ್ವನಾಥ್ ..
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮುಖಂಡರಾಗಿರುವ ತುಳಸಿ ಮುನಿರಾಜು ಕಳೆದ ಉಪ ಚುನಾವಣೆಯಲ್ಲಿ ಶಾಸಕ ಮುನಿರತ್ನ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಹೀಗಾಗಿ ಅವರಿಗೆ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸುವ ಅದೃಷ್ಟಒಲಿದು ಬಂದಿದೆ. ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದು, ಸುಲಭವಾಗಿ ಜಯಗಳಿಸಿ ಮೇಲ್ಮನೆ ಪ್ರವೇಶಿಸಲಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ತುಳಸಿ ಮುನಿರಾಜು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಮುನಿರತ್ನ ವಿರುದ್ಧ ಸೋಲನ್ನು ಅನುಭವಿಸಿದ್ದರು.
ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದ ತುಳಸಿ ಮುನಿರಾಜು ಅವರು ಆರ್.ಆರ್.ನಗರದಲ್ಲಿ ಮುನಿರತ್ನ ಅವರಿಗೆ ಪ್ರಬಲ ಸ್ಪರ್ಧಿಯಾಗಿದ್ದರು. ಮುನಿರತ್ನ ವಿರುದ್ಧ ನಕಲಿ ಮತದಾರರ ಚೀಟಿ ಆರೋಪ ಹೊರಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪಕ್ಷದ ಹಿರಿಯರು ಮನವೊಲಿಕೆ ಮಾಡಿ ಕಳೆದ ಉಪ ಚುನಾವಣೆಯಲ್ಲಿ ಮುನಿರತ್ನ ಅವರಿಗೆ ಕ್ಷೇತ್ರ ಬಿಟ್ಟುಕೊಡುವಂತೆ ಮಾಡಿದ್ದರು. ಇದರ ಪರಿಣಾಮವಾಗಿ ಈಗ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನೀಡಲಾಗಿದೆ.