ದಿಲ್ಲಿಯಿಂದಲೇ ಬ್ರೇಕಿಂಗ್ ನ್ಯೂಸ್ ಕೊಟ್ಟ ಬಿಎಸ್‌ವೈ, ಬಿಜೆಪಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

By Suvarna NewsFirst Published Sep 19, 2020, 2:55 PM IST
Highlights

ಸೆ.21ರಿಂದ ಆರಂಭವಾಗಲಿರುವ ಅಧಿವೇಶನಕ್ಕೂ ಮುನ್ನವೇ ಸಚಿವ ಸಂಪುಟ ವಿಸ್ತರಣೆ ಮಾಡಲು ಬಿಎಸ್‌ ಯಡಿಯೂರಪ್ಪ ಇಚ್ಛಿಸಿದ್ದಾರೆ. ಇದರ ಮಧ್ಯೆ ಬಿಗ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

ನವದೆಹಲಿ, (ಸೆ.19): ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ದಿನದಿಂದ ದಿನಕ್ಕೆ ಭಾರೀ ಕುತೂಹಲ ಮೂಡಿಸುತ್ತಿದೆ. ಮತ್ತೊಂದೆಡೆ ಆಕಾಂಕ್ಷಿಗಳಂತೂ ತುದಿಗಾಲಲ್ಲಿ ನಿಂತಿದ್ದು, ಸಂಪುಟ ಸೇರ್ಪಡೆಯ ಅದೃಷ್ಟ ಯಾರಿಗೆ ಒಲಿಯುವುದೋ ಎಂಬ ತವಕದಲ್ಲಿದ್ದಾರೆ. 

"

ಈ ನಡುವೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನವದೆಹಲಿಗೆ ತೆರಳಿ ವರಿಷ್ಠರ ಜತೆ ಸಂಪುಟ ವಿಸ್ತರಣೆ ಕುರಿತ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಇಂದು (ಶನಿವಾರ) ಸಂಜೆ ಬಿಗ್ ಬ್ರೇಕಿಂಗ್ ನ್ಯೂಸ್ ಕೊಡುವ ಸುಳಿವು ಸಹ ಕೊಟ್ಟಿದ್ದು, ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.

ಸಂಪುಟ ವಿಸ್ತರಣೆ: ನಡ್ಡಾ-ಬಿಎಸ್‌ವೈ ಭೇಟಿ ಅಂತ್ಯ, ಸಿಎಂ ಫಸ್ಟ್ ರಿಯಾಕ್ಷನ್

ನವದೆಹಲಿಯ ಕರ್ನಾಟಕ ಭವನ-1 ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ವಿಧಾನ ಮಂಡಲದ ಅಧಿವೇಶನದ ಪ್ರಾರಂಭವಾಗುವ ಮುನ್ನವೇ ಸಂಪುಟ ವಿಸ್ತರಣೆ ಮಾಡಬೇಕೆಂಬುದು ತಮ್ಮ ಅಪೇಕ್ಷೆಯಾಗಿದೆ. ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರ ಜತೆಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಂತೆ, ಶುಕ್ರವಾರ ಸಮಾಲೋಚನೆ ನಡೆಸಲಾಗಿದೆ. ಪಕ್ಷದ ರಾಷ್ಟ್ರಾಧ್ಯಕ್ಷರು ಪ್ರಧಾನಿ ಜೊತೆಗೆ ಚರ್ಚಿಸಿ ಸಂಜೆ ವೇಳೆಗೆ ಸೂಚನೆ ನೀಡುವ ಸಾಧ್ಯತೆ ಇದೆ. ಅಲ್ಲಿಂದ ಗ್ರೀನ್​ ಸಿಗ್ನಲ್ ಸಿಕ್ಕ ಕೂಡಲೇ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ವರಿಷ್ಠರು ಒಪ್ಪಿದರೆ ಸಿಎಂ ಯಡಿಯೂರಪ್ಪ ಅವರು ನಾಳೆಯೇ ಅಂದ್ರೆ ಭಾನುವಾರವೇ ಸಂಪುಟ ವಿಸ್ತರಿಸುವ ಇಂಗಿತದಲ್ಲಿದ್ದು, ವಿಸ್ತರಣೆ ವೇಳೆ ಮತ್ತೊಮ್ಮೆ ಎಚ್. ವಿಶ್ವನಾಥ್ ಗೆ ಅದೃಷ್ಟ ಖುಲಾಯಿಸುವ ಸಾಧ್ಯತೆ ಇದೆ. ಇನ್ನು ಸರ್ಕಾರ ರಚನೆಗೆ ಕಾರಣಿಕರ್ತರಾದವರು ಅನ್ನೋ ಮಾನದಂಡದಡಿ ವಿಶ್ವನಾಥ್ ಸಚಿವರಾಗುವ ಸಂಭವ ಇದೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಸೆ.21ರಿಂದ ಆರಂಭವಾಗಲಿರುವ ಅಧಿವೇಶನಕ್ಕೂ ಮುನ್ನವೇ ಸಚಿವ ಸಂಪುಟ ವಿಸ್ತರಣೆ ಮಾಡಲು ಬಿಎಸ್‌ ಯಡಿಯೂರಪ್ಪ ಇಚ್ಛಿಸಿದ್ದು, ಇದಕ್ಕೆ ಸಂಜೆ ವೇಳೆ ಹೈಕಮಾಂಡ್ ಏನು ಹೇಳುತ್ತದೆ ಎನ್ನುವುದು ಕಾದು ನೋಡಬೇಕಿದೆ.

click me!