ನಾನು ನಿಮಿತ್ತ ಮಾತ್ರ, ಎಲ್ಲವೂ ಯಡಿ​ಯೂ​ರ​ಪ್ಪ​ನ​ವ​ರೇ: ಸಿಎಂ ಬೊಮ್ಮಾ​ಯಿ

By Kannadaprabha News  |  First Published Mar 18, 2023, 1:00 AM IST

ತಾಲೂಕಿನ ಅಲ್ಲಮಪ್ರಭು ಜನ್ಮಸ್ಥಳದ ಅಭಿವೃದ್ಧಿಗೆ 5 ಕೋಟಿ, ಸುಕ್ಷೇತ್ರ ಶಿವನಪಾದ ಅಭಿವೃದ್ಧಿಗೆ 10 ಕೋಟಿ, ಅಕ್ಕ ಮಹಾದೇವಿ ಉನ್ನತ ವ್ಯಾಸಂಗ ವಿದ್ಯಾ ಕೇಂದ್ರಕ್ಕೆ 10 ಕೋಟಿ ಅನುದಾನ ಬಿಡುಗಡೆಗೊಳಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿ​ದರು. 


ಶಿಕಾ​ರಿ​ಪುರ (ಮಾ.18): ತಾಲೂಕಿನ ಅಲ್ಲಮಪ್ರಭು ಜನ್ಮಸ್ಥಳದ ಅಭಿವೃದ್ಧಿಗೆ 5 ಕೋಟಿ, ಸುಕ್ಷೇತ್ರ ಶಿವನಪಾದ ಅಭಿವೃದ್ಧಿಗೆ 10 ಕೋಟಿ, ಅಕ್ಕ ಮಹಾದೇವಿ ಉನ್ನತ ವ್ಯಾಸಂಗ ವಿದ್ಯಾ ಕೇಂದ್ರಕ್ಕೆ 10 ಕೋಟಿ ಅನುದಾನ ಬಿಡುಗಡೆಗೊಳಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿ​ದರು. ಶುಕ್ರವಾರ ಅಕ್ಕ ಮಹಾದೇವಿ ಜನ್ಮಸ್ಥಳ ತಾಲೂಕಿನ ಉಡುತಡಿಯಲ್ಲಿ ನಿರ್ಮಿಸಲಾದ 62 ಅಡಿ ಎತ್ತರದ ಅಕ್ಕ ಮಹಾದೇವಿ ಬೃಹತ್‌ ಪ್ರತಿಮೆ ಲೋಕಾರ್ಪಣೆಗೊಳಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಶಿಕಾರಿಪುರ ಶರಣರ ನಾಡು, ದೇವರನಾಡು, ಮಾದರಿ ತಾಲೂಕು ಎಂಬ ಹೆಗ್ಗಳಿಕೆ ಹೊಂದಿದೆ. ಅಡಕೆ, ಭತ್ತ ಬೆಳೆಯುವ ಮೂಲಕ ಮಾದರಿ ಕೃಷಿ, ಅಧ್ಯಾತ್ಮ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಯಡಿಯೂರಪ್ಪ ಅವರು ಹಾಗೂ ನನ್ನದು ತಂದೆ ಮಕ್ಕಳ ಸಂಬಂಧವಾಗಿ ರಾಜಕೀಯ ಮೀರಿದ ಸಂಬಂಧವಾಗಿದೆ. ನಾವು ಅವರ ನೆರಳಿನಲ್ಲಿ ಬೆಳೆದವರು. ಅವರ ಮಾರ್ಗದರ್ಶನದಲ್ಲಿ ಮುಂದುವರಿಯುತ್ತೇವೆ. ನಾನು ಏನು ಅಲ್ಲ, ನಿಮಿತ್ತ ಮಾತ್ರ. ಎಲ್ಲವೂ ಯಡಿಯೂರಪ್ಪನವರೇ ಎಂದರು.

Tap to resize

Latest Videos

ನಾರಾಯಣಗೌಡ ನಮ್ಮ ಪಕ್ಷದ ಸೂಪರ್‌ ಸ್ಟಾರ್‌, ಅವರು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ: ಸಚಿವ ಅಶ್ವತ್ಥ ನಾರಾಯಣ

ಬಿಎ​ಸ್‌ವೈ ಕೆಲಸ ಮುಂದು​ವ​ರಿ​ಸು​ತ್ತೇ​ನೆ: ಜನರ ಮತ್ತು ಯಡಿಯೂರಪ್ಪನವರ ಮಧ್ಯೆ ಯಾರಿಗೂ ಬರಲು ಸಾಧ್ಯವಿಲ್ಲ. ಅವರಿಗೆ ನಿವೃತ್ತಿ ಎಂಬುದೇ ಇಲ್ಲ. ಮಂತ್ರಿಗಳು ಆಗಬಹುದು, ಮುಖ್ಯಮಂತ್ರಿಗಳು ಆಗಬಹುದು. ಆದರೆ ಜನರ ಹೃದಯದ ಗೆದ್ದ ಜನನಾಯಕ ಆಗುವುದು ಕೆಲವರು ಮಾತ್ರ. ಅದು ಒಂದು ರಾಮಕೃಷ್ಣ ಹೆಗಡೆ, ಇಂದು ಬಿ.ಎಸ್‌. ಯಡಿಯೂರಪ್ಪನವರು. ರಾಜ್ಯದ ಎಲ್ಲ ಹಿಂದುಳಿದ ವರ್ಗಗಳ ಮಠಕ್ಕೆ ಅನುದಾನವನ್ನು ನೀಡಿ ಶೋಚನೀಯ ಸ್ಥಿತಿಯಲ್ಲಿದ್ದ ಮಠಗಳನ್ನು ಮೇಲಕ್ಕೆ ಎತ್ತುವ ಕೆಲಸವನ್ನು ಯಡಿಯೂರಪ್ಪನವರು ಮಾಡಿದರು. ಅವರ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದರು.

ವಿಜೇಂದ್ರಗೂ ಆಶೀ​ರ್ವ​ದಿ​ಸಿ: 900 ವರ್ಷಗಳ ನಂತರ ಅಕ್ಕ ಮಹಾದೇವಿ ಅವರ ಜನ್ಮಸ್ಥಳ ಹಾಗೂ ಬಸವಕಲ್ಯಾಣ ಅಭಿವೃದ್ಧಿ ಆಗುತ್ತಿದೆ. ಅದು ಈ ಯಡಿಯೂರಪ್ಪ ಅವರಿಂದ ಮಾತ್ರ ಸಾಧ್ಯವಾಗಿದೆ. ಶಿವಶರಣರ ಆದರ್ಶ ನಮಗೆಲ್ಲ ಮಾದರಿ ಆಗಿರಬೇಕು. ಅವರ ಪುಣ್ಯಭೂಮಿ ನಡೆದಾಡಿದ ಈ ಭೂಮಿಯಲ್ಲಿ ನಾವು ಇಂದು ನಡೆದಾಡುತ್ತಿರುವವರು ಪುಣ್ಯವಂತರಾಗಿದ್ದೇವೆ. ಯಡಿಯೂರಪ್ಪ ಅವರಿಗೆ ಪ್ರೀತಿಸಿ, ಆಶೀರ್ವದಿಸಿದ್ದೀರಿ. ಹಾಗೆಯೇ ಬಿ.ವೈ.ರಾಘವೇಂದ್ರ ಅವರನ್ನು ಪ್ರೀತಿಸಿದ್ದೀರಿ, ಆಶೀರ್ವದಿಸಿದ್ದೀರಿ. ಅದೇ ರೀತಿ ವಿಜಯೇಂದ್ರ ಅವರಿಗೂ ಪ್ರೀತಿಸಿ, ಆಶೀರ್ವದಿಸಿ ಎಂದರು.

ಬಿಜೆಪಿ ಅಧಿ​ಕಾ​ರಕ್ಕೆ ತರುವುದೇ ಸಂಕ​ಲ್ಪ: ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮಾತನಾಡುತ್ತ, ನನಗೆ ಈಗ 80 ವರ್ಷಗಳು ತುಂಬಿವೆ. ನಾನು ನಿವೃತ್ತಿ ಆಗಿಲ್ಲ, ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದೆ. ರಾಜಕಾರಣದಿಂದ ದೂರ ಇರುತ್ತೇನೆ ಎಂದಿಲ್ಲ. ಇದಕ್ಕೂ ಕೆಲವು ವಿರೋಧ ಪಕ್ಷ ನಾಯಕರು ಟೀಕೆ ಟಿಪ್ಪಣಿ ಮಾಡಿದರು. ಕರ್ನಾಟಕದ ಉದ್ದಗಲಕ್ಕೂ ಪ್ರವಾಸ ಮಾಡಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನನ್ನ ಸಂಕಲ್ಪ. ನನ್ನ ಅಧಿಕಾರ ಅವಧಿಯಲ್ಲಿ ಯಾವ ಜಾತಿ ಮತ ಎಣಿಸದೇ ಎಲ್ಲ ವರ್ಗಗಳ ದೇವಾಲಯಗಳಿಗೆ, ಮಠಗಳಿಗೆ ಹಿಂದೆಂದೂ ಕಾಣದಂಥ ಅನುದಾನವನ್ನು ನೀಡಿ, ಅವುಗಳನ್ನು ಮುಖ್ಯವಾಹಿನಿಗೆ ತರುವಂತಹ ಪುಣ್ಯದ ಕೆಲಸವನ್ನು ಮಾಡಿದ್ದೇನೆ. ಅದರಂತೆ ಈಗ ಬಸವರಾಜ ಬೊಮ್ಮಾಯಿ ಅವರು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಉಡುಗಣಿ ಒಂದು ಪುಣ್ಯ ಕ್ಷೇತ್ರವಾಗಿ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳುತ್ತಿದೆ. ಇಲ್ಲಿಗೆ ಬರುವ ಪ್ರವಾಸಿಗರು ಅಕ್ಕ ಮಹಾದೇವಿಯನ್ನು ನೆನೆದು ಒಂದೆರಡು ನಿಮಿಷ ಧ್ಯಾನ ಮಗ್ನರಾಗುವಂತಾಗಬೇಕು ಎಂದರು.

ಸರ್ಕಾರ ಪ್ರಶಸ್ತಿ ಘೋಷಿ​ಸ​ಲಿ: ಬೆಕ್ಕಿನ ಕಲ್ಮಠದ ಡಾ.ಮುರುಘ ರಾಜೇಂದ್ರ ಸ್ವಾಮೀಜಿಗಳು ಆಶೀರ್ವಚನ ನೀಡು​ತ್ತ 12ನೇ ಶತಮಾನದಲ್ಲಿ ಸಾಮಾನ್ಯ ಹೆಣ್ಣು ಆಧ್ಯಾತ್ಮಿಕ ತುತ್ತತುದಿಗೆ ತಲುಪಬಹುದು ಎಂದು ತೋರಿಸಿಕೊಟ್ಟವಳು ಅಕ್ಕ ಮಹಾದೇವಿ. ಪ್ರಪಂಚದಲ್ಲಿಯೇ ಸ್ತ್ರೀ ಸಮಾನತೆಗಾಗಿ ಮೊದಲ ಹೋರಾಟಗಾರ್ತಿ ಅಕ್ಕ ಮಹಾದೇವಿ ಹೆಸರಿನಲ್ಲಿ ರಾಜ್ಯಮಟ್ಟದ ಮಹಿಳೆಯರಿಗಾಗಿಯೇ ಕೊಡಮಾಡುವ ಒಂದು ಪ್ರಶಸ್ತಿಯನ್ನು ಸರ್ಕಾರ ಘೋಷಿಸಿ ಅದನ್ನು ಪ್ರತಿವರ್ಷ ಉಡುತಡಿಯ ಈ ಸ್ಥಳದಲ್ಲಿಯೇ ಕೊಡುವ ಕಾರ್ಯವಾಗಬೇಕು ಎಂದರು.

ಮಂಡ್ಯ ಜಿಲ್ಲೆ ಜವಾಬ್ದಾರಿ ನನ್ನದೇ, ಪ್ರಚಾರದ ಉಸ್ತುವಾರಿ ನಾನೇ ವಹಿಸುವೆ: ಎಚ್‌.ಡಿ.ದೇವೆಗೌಡ

ಕಾರ್ಯಕ್ರಮದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಭೈರತಿ ಬಸವರಾಜ್‌, ಸಂಸದ ರಾಘವೇಂದ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವೆ ಹಾಗೂ ಅಕ್ಕ ಮಹಾದೇವಿ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ಲೀಲಾ ದೇವಿಪ್ರಸಾದ್‌, ಶಾಸಕ ಕುಮಾರ್‌ ಬಂಗಾರಪ,್ಪ ವಿಪ ಸದಸ್ಯ ರುದ್ರೇಗೌಡ, ಭಾರತಿ ಶೆಟ್ಟಿ, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಉಗ್ರಾಣ ನಿಗಮದ ಅಧ್ಯಕ್ಷ ಎಚ್‌.ಟಿ. ಬಳಿಗಾರ್‌, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ರೇವಣಪ್ಪ, ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಷಡಕ್ಷರಿ, ಜಿಲ್ಲಾಧಿಕಾರಿ ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥನ್‌ ಕುಮಾರ್‌ ಸಿಇಒ ಪ್ರಕಾಶ್‌ ಮತ್ತಿತರರು ಉಪಸ್ಥಿತರಿದ್ದರು.

click me!