ಸೋನಿಯಾ ಮನೆ ಬಳಿ ಕಾದು ನಿಲ್ಲುತ್ತಿದ್ದ ಸಿದ್ದರಾಮಯ್ಯ: ಸಿಎಂ ಬೊಮ್ಮಾಯಿ

By Govindaraj SFirst Published Jan 7, 2023, 12:34 PM IST
Highlights

ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದಾಗ ಸೋನಿಯಾ ಗಾಂಧಿ ಮನೆಯ ಬಳಿ ಕಾದು ನಿಂತು, ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ರಾಜ್ಯಕ್ಕೆ ತರದೆ ವಾಪಸ್‌ ಆಗುತ್ತಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ. 

ಶಿರಾ (ಜ.07): ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದಾಗ ಸೋನಿಯಾ ಗಾಂಧಿ ಮನೆಯ ಬಳಿ ಕಾದು ನಿಂತು, ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ರಾಜ್ಯಕ್ಕೆ ತರದೆ ವಾಪಸ್‌ ಆಗುತ್ತಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ. ತುಮಕೂರು ಜಿಲ್ಲೆ ಶಿರಾದಲ್ಲಿ ಶುಕ್ರವಾರ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಅವರು ಮಾತನಾಡಿದರು. ರಾಹುಲ್‌ ಗಾಂಧಿ ಎದುರು ನೀವು ಕೈಕಟ್ಟಿನಿಲ್ಲುತ್ತೀರಿ. ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ಪ್ರಧಾನಿ ನರೇಂದ್ರ ಮೋದಿಯವರು ಅಪ್ಪಟ ಪ್ರಜಾಪ್ರಭುತ್ವವಾದಿಯಾಗಿದ್ದಾರೆ. ಪ್ರತಿಯೊಂದು ರಾಜ್ಯದ ಸ್ವಾಯತ್ತತೆಯನ್ನು ಎತ್ತಿ ಹಿಡಿದಿದ್ದಾರೆ. ಕೇಳದೆಯೇ ಕೊಡುವ ಕಾಮಧೇನು ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ. ರಾಜ್ಯಕ್ಕೆ 6,500 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿ ಕೊಟ್ಟಿದ್ದಾರೆ. 1,000 ಕೋಟಿ ರು. ವೆಚ್ಚದ ರೈಲ್ವೆ ಯೋಜನೆಗೆ ಚಾಲನೆ ಕೊಟ್ಟಿದ್ದಾರೆ. ಸ್ಮಾರ್ಟ್‌ ಸಿಟಿ ಕೊಟ್ಟಿದ್ದಾರೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ರಾಜ್ಯಕ್ಕೆ 6,000 ಕಿ.ಮೀ. ರಸ್ತೆ ಬಂದಿರಲಿಲ್ಲ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನವು ಸಾಹಿತ್ಯ ಲೋಕಕ್ಕೆ ಉತ್ಕೃಷ್ಟ ಮುನ್ನುಡಿ ಬರೆಯಲಿದೆ: ಸಿಎಂ ಬೊಮ್ಮಾಯಿ

ತವರು ಜಿಲ್ಲೆಯ ಸಮ್ಮೇಳನದ ಬಗ್ಗೆ ಸಂತಸ: ನನ್ನ ತವರು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಬಹಳ ಸಂತೋಷ ತಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿ ಜ್ಞಾನದ ನಾಡು, ಸಾಹಿತ್ಯದ ಬೀಡು. ಇಂಥ ನಾಡಿನಲ್ಲಿ ಸಾಹಿತ್ಯ ಸಮ್ಮೇಳನ ಮಾಡುವ ಮೂಲಕ ಕನ್ನಡ , ಕನ್ನಡ ಅಸ್ಮಿತೆಯನ್ನು ಎತ್ತಿಹಿಡಿದಂತಾಗುತ್ತದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಸಮ್ಮೇಳನ ಉದ್ಘಾಟನೆಗೆ ಕೊಳ್ಳಿ ಕಾಲೇಜ್‌ ಹೆಲಿಪ್ಯಾಡ್‌ಗೆ ಆಗಮಿಸಿದ ವೇಳೆ ಶುಕ್ರವಾರ ಸುದ್ದಿಗಾರರೊಂದಿಗೆ ಅವರು, ಪ್ರಚಲಿತ ವಿಷಯಗಳ ಬಗ್ಗೆ ಚರ್ಚೆ ಮಾಡುವುದು, ಪರಿಹಾರ ನೀಡುವುದು, ಭವಿಷ್ಯದಲ್ಲಿ ಕನ್ನಡ ಹಾಗೂ ಕನ್ನಡ ಸಾಹಿತ್ಯ ಯಾವ ಮಟ್ಟಕ್ಕೆ ಹೋಗಬೇಕು ಎನ್ನುವ ಬಗ್ಗೆ ಚರ್ಚೆ ಮಾಡುವ ಮೂಲಕ ಉತ್ಕೃಷ್ಟ ಸಾಹಿತ್ಯ ರಚನೆಗೆ ಈ ಸಮ್ಮೇಳನ ಮುನ್ನಡಿಯಾಗಲಿ ಎಂದು ಹಾರೈಸಿದರು.

ಪರ್ಯಾಯ ಸಮ್ಮೇಳನ ಯಾವಾಗಲೂ ಇರುತ್ತದೆ: ಪರ್ಯಾಯ ಸಾಹಿತ್ಯ ಸಮ್ಮೇಳನ ಪ್ರತಿ ಸಾಹಿತ್ಯ ಸಮ್ಮೇಳನವಾದಾಗಲೂ ಇರುತ್ತದೆ. ಅದನ್ನು ನಾವು ಕ್ರೀಡಾಮನೋಭಾವದಿಂದ ತೆಗೆದುಕೊಂಡು, ಅಲ್ಲಿ ಚರ್ಚೆಯಾಗುವ ವಿಷಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು. ಸರ್ಕಾರ ಈಗಾಗಲೇ ಗಡಿನಾಡು ಕನ್ನಡಿಗರ ಅಭಿವೃದ್ಧಿಗೆ ಪ್ಯಾಕೇಜ್‌ ಘೋಷಣೆ ಮಾಡಿದೆ. ಚರ್ಚೆಗಳ ಆಧಾರದ ಮೇಲೆ ಸಮಾರೋಪ ಸಮಾರಂಭದಲ್ಲಿ ತೀರ್ಮಾನಿಸಿ ಭರವಸೆ ನೀಡಲಾಗುವುದು ಎಂದರು.

ನಾರಾಯಣಗುರು ನಿಗಮ ಸ್ಥಾಪನೆಗೆ ಸಿಎಂ ಬೊಮ್ಮಾಯಿ ತಾತ್ವಿಕ ಒಪ್ಪಿಗೆ

ಸಿದ್ದೇಶ್ವರ ಸ್ವಾಮೀಜಿ ಪಠ್ಯ ಸೇರ್ಪಡೆ ಬಗ್ಗೆ: ಸಿದ್ದೇಶ್ವರ ಸ್ವಾಮೀಜಿಗಳ ಕುರಿತು ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿ, ಸ್ವಾಮೀಜಿಗಳ ವಿಲ್ಲಿನ ಚೌಕಟ್ಟಿನಲ್ಲಿ ಎಲ್ಲವನ್ನೂ ಮಾಡಬೇಕು. ಅದನ್ನು ಮೀರಿ ಏನೂ ಮಾಡಲು ಸಾಧ್ಯವಿಲ್ಲ. ಕಣ್ಣೇರಿ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಟ್ರಸ್ಟಿನ ಸದಸ್ಯರೆಲ್ಲರೂ ತೀರ್ಮಾನಿಸಿದಂತೆ ಕ್ರಮ ವಹಿಸಲಾಗುವುದು ಎಂದರು. ಪಂಚಮಸಾಲಿ 2ಎ ಮೀಸಲಾತಿ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈಗಾಗಲೇ ಸರ್ಕಾರ ಸರಿಯಾದ ಹೆಜ್ಜೆಯಿಟ್ಟಿದ್ದು, ಕಾನೂನು ಹಾಗೂ ಸಂವಿಧಾನಾತ್ಮಕವಾಗಿ ಕ್ರಮ ವಹಿಸಬೇಕು. ಅಂತಿಮ ವರದಿ ಬಂದ ಕೂಡಲೇ ಸ್ಪಷ್ಟವಾಗುತ್ತದೆ ಎಂದರು.

click me!