
ಬಾಗಲಕೋಟೆ/ಬಾದಾಮಿ (ಜ.07): ಅಭಿಮಾನಿಗಳಿಂದ ಒತ್ತಡ ಹೆಚ್ಚಾಗಿದ್ದರಿಂದ ಮುಂಬರುವ ಚುನಾವಣೆಯಲ್ಲಿ ಸ್ಪರ್ಧೆಗಾಗಿ ನಾನು ಬಾದಾಮಿ, ವರುಣಾ ಹಾಗೂ ಕೋಲಾರ ಸೇರಿದಂತೆ ಮೂರು ಕ್ಷೇತ್ರಗಳಲ್ಲಿ ಚುನಾವಣಾ ಸ್ಪರ್ಧೆಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು. ಬಾದಾಮಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಕ್ಷೇತ್ರಗಳಲ್ಲಿಯೂ ನನ್ನ ಸ್ಪರ್ಧೆಗಾಗಿ ಜನರ ಮತ್ತು ಅಭಿಮಾನಿಗಳ ಒತ್ತಡ ಹೆಚ್ಚಾಗಿದ್ದರಿಂದ ನಾನು ಮೂರು ಕ್ಷೇತ್ರಗಳಲ್ಲಿ ಅರ್ಜಿ ಸಲ್ಲಿಸಿದ್ದೇನೆ.
ಮುಂದಿನ ನಿರ್ಧಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ನಿರ್ಧರಿಸಲಿದ್ದು, ಅವರ ಆದೇಶದಂತೆ ನಾನು ಸ್ಪರ್ಧೆಗೆ ಸಿದ್ದನಿದ್ದೇನೆ ಎಂದು ತಿಳಿಸಿದರು. ರಾಜ್ಯದಲ್ಲಿ ಚುನಾವಣೆಗೆ ಮೂರು ತಿಂಗಳು ಬಾಕಿ ಇದೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬರುತ್ತೆ. ಆಗ ಬಡವರಿಗೆಲ್ಲ ಮನೆ ಕೊಡುತ್ತೇವೆ ಎಂದು ಹೇಳಿದರು.
ನನಗೆ ಲಂಚ ಕೊಡಲು ವಿಧಾನಸೌಧಕ್ಕೆ ಬರಬೇಕಿತ್ತೇ: ಸಿದ್ದು ಆರೋಪಕ್ಕೆ ತಿರುಗೇಟು ನೀಡಿದ ಸಿ.ಸಿ.ಪಾಟೀಲ್
ವಿಧಾನಸೌಧದಲ್ಲಿ ಸಿಕ್ಕ ಹಣ ಸಿದ್ದುಗೆ ಸೇರಿದ್ದು ಎಂದ ಸಚಿವ ಸಿ.ಸಿ.ಪಾಟೀಲ್‌ಗೆ ಉತ್ತರಿಸಿದ ಸಿದ್ದರಾಮಯ್ಯ, ವಿಧಾನಸೌಧದಲ್ಲಿ ಸಿಕ್ಕ ಹಣ ನನ್ನದು ಎನ್ನುವುದಕ್ಕೆ ನಾವು ಸರ್ಕಾರದಲ್ಲಿ ಇದ್ದೇವಾ? ಇಂಜಿನಿಯರ್‌ಗಳು ನನಗೆ ಹಣ ತಂದುಕೊಟ್ಟಿದ್ದಾರಾ? ಹಣ ತಂದು ಕೊಡುವುದು ಸಾಮಾನ್ಯವಾಗಿ ಸರ್ಕಾರದಲ್ಲಿ ಇರುವವರಿಗೆ ಅಲ್ಲವೇ ಎಂದು ತಿರುಗೇಟು ನೀಡಿದರು. ನಮ್ಮ ಕ್ಲಿನಿಕ್ ಅಲ್ಲ, ನಮ್ಮ ಆಸ್ಪತ್ರೆ ಅದು. ಕ್ಲಿನಿಕ್ ಇಂಗ್ಲಿಷ್ ಪದ. ಆಸ್ಪತ್ರೆ ಕನ್ನಡ ಪದ. ಚುನಾವಣೆ ಗಿಮಿಕ್‌ಗಾಗಿ ನಮ್ಮ ಕ್ಲಿನಿಕ್ ಮಾಡಿದ್ದಾರೆ ಎಂದರು.
ಅರ್ಚಕ ಮನವಿ: ಬನಶಂಕರಿ ಜಾತ್ರೆಯ ಮಹಾರಥೋತ್ಸವ ನಿಮಿತ್ಯ ಬಾದಾಮಿಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರಿಗೆ ದೇವಿಯ ಅರ್ಚಕ ವಿಶೇಷ ಪೂಜೆ ನೆರವೇರಿಸಿದ ನಂತರ ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ಅರ್ಚಕರು ಮನವಿ ಮಾಡಿದ ಪ್ರಸಂಗ ನಡೆಯಿತು. ಬಾದಾಮಿಯಿಂದ ಸ್ಪರ್ಧೆ ಮಾಡಿದರೆ ಸಿದ್ದರಾಮಯ್ಯಗೆ ಒಳ್ಳೆಯದಾಗುತ್ತದೆ ಎಂದು ಅರ್ಚಕರು ಹೇಳಿದರು.
ಆಗ ಅವರ ಮಾತಿಗೆ ಎಲ್ಲರಿಗೂ ಒಳ್ಳೆಯದಾಗಲಿ ಎಂದ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಯಾಗಿ ಹೇಳಿದರು. ಪುನಃ ಬಾದಾಮಿಯಿಂದಲೇ ನಿಲ್ಲುವಂತೆ ಅಭಿಮಾನಿಗಳು ಕೂಗಲು ಆರಂಭಿಸಿದರು. ಆದರೆ, ಸಿದ್ದರಾಮಯ್ಯ ಅವರು ಮಾತ್ರ, ‘ನಿಮ್ಮೆಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು’ ಎಂದು ಹೊರ ನಡೆದರು. ಚುನಾವಣೆ ಇನ್ನೂ ಮೂರು ತಿಂಗಳಿದೆ. ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದ ಅವರು, ಬರುತ್ತೇವೆಯೋ ಇಲ್ವೋ ಅಂತಾ ಅಲ್ಲಿದ್ದ ಜನರನ್ನೇ ಪ್ರಶ್ನಿಸಿದರು.
ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿದರೆ ಸ್ವಾಗತ: ಕೆ.ಎಚ್.ಮುನಿಯಪ್ಪ
ಹೆಚ್ಚಿನ ಸೇವೆ ಮಾಡಲು ನಿಮ್ಮ, ದೇವಿಯ ಆಶೀರ್ವಾದವಿರಲಿ: ತಾಯಿ ಬನಶಂಕರಿದೇವಿ ಎಲ್ಲರಿಗೂ ಸುಖ, ಶಾಂತಿ, ಆಯುರ್‌ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಕರ್ನಾಟಕದ ಸಮಸ್ಥ ಜನತೆ ಪರವಾಗಿ ದೇವಿಯಲ್ಲಿ ಕೇಳಿಕೊಳ್ಳುತ್ತೇನೆ. ಜಾತ್ರೆ ಆಗಮಿಸಿದ ಜನಸಾಗರಕ್ಕೆ ಕೈ ಮುಗಿದು ಸದಾ ನಿಮ್ಮ ಆಶೀರ್ವಾದ ನನ್ನ ಮೇಲೆ ಇರಲಿ. ಕ್ಷೇತ್ರದ ಅಭಿವೃದ್ಧಿಗೋಸ್ಕರ ಇನ್ನೂ ಹೆಚ್ಚಿನ ಸೇವೆಯನ್ನು ಮಾಡಲು ನಿಮ್ಮ ಮತ್ತು ಬನಶಂಕರಿ ದೇವಿಯ ಆಶೀರ್ವಾದ ಇರಲಿ ಎಂದು ಕೋರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.