ಬೇಲ್ ಮೇಲೆ ಹೊರಗಿರುವ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಭ್ರಷ್ಟಾಚಾರ ಇದೆ ಎಂದು ಮಾತನಾಡುತ್ತಿರುವದು ಹಾಸ್ಯಾಸ್ಪದ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.
ಹುಮನಾಬಾದ್ (ಅ.19): ಬೇಲ್ ಮೇಲೆ ಹೊರಗಿರುವ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಭ್ರಷ್ಟಾಚಾರ ಇದೆ ಎಂದು ಮಾತನಾಡುತ್ತಿರುವದು ಹಾಸ್ಯಾಸ್ಪದ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು. ಪಟ್ಟಣದ ತೇರು ಮೈದಾನದಲ್ಲಿ ಮಂಗಳವಾರ ಬಿಜೆಪಿ ಆಯೋಜಿಸಿದ್ದ ಜನ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಲವರನ್ನು ಓಟ್ ಬ್ಯಾಂಕ್‌ನಂತೆ ಮಾಡಿಕೊಂಡಿದ್ದಲ್ಲದೆ ಕರ್ನಾಟಕವು ಕಾಂಗ್ರೆಸ್‌ಗೆ ಎಟಿಎಂ ಇದ್ದಂತೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಕ್ಕರೆ ಕಾರ್ಖಾನೆ, ಮನೆ ಹಂಚಿಕೆ, ರಸ್ತೆ ನಿರ್ಮಾಣ, ದುರಸ್ತಿ, ವಸತಿ ಶಾಲೆಗಳ ಹಾಸಿಗೆ, ದಿಂಬು ಪೂರೈಕೆಯಲ್ಲಿ, ನೇಮಕಾತಿಗಳಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ.
ಅವರ ಕಾಲದಲ್ಲಿ ಅರ್ಜಿ ಹಾಕದೇ ಶಿಕ್ಷಕರ ನೇಮಕ ಮಾಡುವ ಮೂಲಕ ಇಪ್ಪತ್ತಕ್ಕೂ ಹೆಚ್ಚಿನ ಶಿಕ್ಷಕರು ಇಂದು ಜೈಲು ಪಾಲಾಗಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಕೇವಲ ಮಾತಿನಲ್ಲಿ ಸಾಮಾಜಿಕ ನ್ಯಾಯ ಎಂದೆನ್ನುತ್ತದೆ ಆದರೆ ಕೆಲಸಕ್ಕೆ ಬಂದಾಗ ಮೋಸದ ನ್ಯಾಯ ಮಾಡುತ್ತಾರೆ. 50 ವರ್ಷದ ಮೀಸಲಾತಿ ಬೇಡಿಕೆ ಯಾಕೆ ಈಡೆರಿಸಲಿಲ್ಲ ಎಂದು ಪ್ರಶ್ನಿಸಿ, ದೀನ ದಲಿತರನ್ನು ಸರಾಗವಾಗಿ ಮತ ಹಾಕುವ ಯಂತ್ರದಂತೆ ಮಾಡಿಕೊಂಡಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕೆಲಸ ಮಾಡಿಲ್ಲ. ಪುಸ್ತಕದಲ್ಲಿ ಮಾತ್ರ ಹಣ ಇಡುವ ಕೆಲಸ ಮಾಡುವ ಮೂಲಕ ಕಲ್ಯಾಣ ಕರ್ನಾಟಕದ ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ ಎಂದರು.
ವರಿಷ್ಠರ ಜತೆ ಈ ವಾರವೇ ಸಿಎಂ ಬೊಮ್ಮಾಯಿ ಸಂಪುಟ ಚರ್ಚೆ?
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕು ತಿಂಗಳಲ್ಲಿ ರೈತರ ಹಾಗೂ ಅವರ ಮಕ್ಕಳ ಅಭಿವೃದ್ಧಿ ಗೆ ವಿದ್ಯಾಶ್ರೀ ವಿದ್ಯಾರ್ಥಿ ವೇತನ ನೀಡಲಾಗಿದೆ. ದೀನ ದಲಿತರ ವಿದ್ಯಾರ್ಥಿ ವೇತನ ಹೆಚ್ಚಳ ಹಾಗೂ 6 ಲಕ್ಷ ಕೂಲಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಅಲ್ಲದೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ನೂತನವಾಗಿ 1200 ಅಂಗನವಾಡಿಗಳನ್ನು ತೆರೆಯಲು ಅನುಮೋದನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸ್ವಾಭಿಮಾನ, ಸ್ವಾವಲಂಬಿ ಬದುಕಿಗಾಗಿ ದುಡಿಯುವ ವರ್ಗಕ್ಕೆ ನಾವು ಸಹಾಯ ಸಹಕಾರ ನೀಡಿದಾಗ ಮಾತ್ರ ಅದು ನನಗೆ ದೇವರ ಸಮಾನ ಎಂದ ಅವರು ಬಡವರ ಕಲ್ಯಾಣ ಈ ಭೂಮಿಯಿಂದ ಪ್ರಾರಂಭ ಮಾಡಿದ್ದೇವೆ. ನಿಮ್ಮ ಸಂಕಲ್ಪಕ್ಕಾಗಿ ನಾವು ಬಂದಿದ್ದೇವೆ ನಿಮಗಾಗಿ ಹಗಲಿರಳು ದುಡಿಯುತ್ತೇವೆ ನಿಮ್ಮ ಸಹಾಯ ಸಹಕಾರ ಮತ್ತೊಮ್ಮೆ ಕರ್ನಾಟಕ ರಾಮ ರಾಜ್ಯಕ್ಕೆ ಸಹಕರಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿಸಿದರು.
ರಾಜ್ಯಕ್ಕೆ 1 ಟ್ರಿಲಿಯನ್ ಆರ್ಥಿಕತೆ ಗುರಿ: ಸಿಎಂ ಬೊಮ್ಮಾಯಿ
ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ ಹಾಗೂ ಬಿ. ಶ್ರೀರಾಮಲು ಕೇಂದ್ರ ಸಚಿವ ಭಗವಂತ ಖೂಬಾ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ, ಸಚಿವ ಶಂಕರ ಪಾಟೀಲ್ ಮುನಿಕೋಪ್ಪನ್, ಸಚಿವ ಬೈರತಿ ಬಸವರಾಜ, ಎನ್. ರವಿಕುಮಾರ, ಶಾಸಕ ಶರಣು ಸಲಗರ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಡಾ. ಸಿದ್ದು ಪಾಟೀಲ್, ಈಶ್ವರಸಿಂಗ ಠಾಕೂರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯಾ ಗುತ್ತೆದಾರ, ಹಿರಿಯ ಮುಖಂಡ ಸುಭಾಷ ಕಲ್ಲೂರ, ಎಂ.ಜಿ. ಮುಳೆ, ಶೈಲೇಂದ್ರ ಬೆಲ್ದಾಳೆ, ವಿಜಯಕುಮಾರ ಪಾಟೀಲ್ ಗಾದಗಿ, ಬಸವರಾಜ ಆರ್ಯ, ಪದ್ಮಾಕರ್ ಪಾಟೀಲ್, ಸೋಮನಾಥ ಪಾಟೀಲ್ ಮಂಡಲ್ ಅಧ್ಯಕ್ಷ ಪ್ರಭಾಕರ ನಾಗರಾಳೆ, ಗುಂಡು ರೆಡ್ಡಿ, ರಾಜು ಭಂಡಾರಿ, ಅನಿಲ್ ಪಸಾರ್ಗಿ ಮತ್ತಿತರರು ಇದ್ದರು.