ರಾಹುಲ್‌ಗೊಂದು, ಇನ್ನೊಬ್ಬರಿಗೊಂದು ಕಾನೂನಿಲ್ಲ: ಸಿಎಂ ಬೊಮ್ಮಾಯಿ

By Govindaraj SFirst Published Mar 26, 2023, 7:22 AM IST
Highlights

ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು. ರಾಹುಲ್‌ ಗಾಂಧಿಗೆ ಒಂದು, ಉಳಿದವರಿಗೆ ಇನ್ನೊಂದು ಇಲ್ಲ. ದೇಶದಲ್ಲಿ ಕಾನೂನು ವ್ಯವಸ್ಥೆಯಿದ್ದು, ಕಾನೂನಿನ ಪ್ರಕಾರ ಎಲ್ಲವೂ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಬೆಂಗಳೂರು (ಮಾ.26): ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು. ರಾಹುಲ್‌ ಗಾಂಧಿಗೆ ಒಂದು, ಉಳಿದವರಿಗೆ ಇನ್ನೊಂದು ಇಲ್ಲ. ದೇಶದಲ್ಲಿ ಕಾನೂನು ವ್ಯವಸ್ಥೆಯಿದ್ದು, ಕಾನೂನಿನ ಪ್ರಕಾರ ಎಲ್ಲವೂ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ರಾಹುಲ್‌ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಏನು ಮಾತನಾಡಿದರೂ ನಡೆಯುತ್ತದೆ ಎನ್ನುವ ಭಾವನೆ ಇದೆ. ಅವರಿಗೆ ಸರಿಪಡಿಸಿಕೊಳ್ಳಲು ಅವಕಾಶವಿತ್ತು. 

ಆದರೆ ಅವರು ಸರಿಪಡಿಸಿಕೊಳ್ಳಲಿಲ್ಲ. ವಿರೋಧ ಪಕ್ಷದವರನ್ನು ಚುನಾವಣೆಯಲ್ಲಿ ಸೋಲಿಸಬೇಕು ಅಥವಾ ಸಂಸತ್ತಿನಲ್ಲಿ ಚರ್ಚೆ ಮಾಡಬೇಕು. ಅದು ಬಿಟ್ಟು ಹಾದಿಬೀದಿಯಲ್ಲಿ ವೈಯಕ್ತಿಕ ನಿಂದನೆ ಮಾಡಿ ಮಾತನಾಡಿದರೆ ಖಂಡಿತವಾಗಿಯೂ ಅದಕ್ಕೆ ಕಾನೂನು ಇದೆ’ ಎಂದರು. ‘ರಾಹುಲ್‌ ಗಾಂಧಿ ಕೇವಲ ವ್ಯಕ್ತಿಯ ವಿರುದ್ಧ ಅಲ್ಲ, ಒಂದು ವರ್ಗದ ವಿರುದ್ಧ ಮಾತನಾಡಿದ್ದಾರೆ. ಬಹಳ ಜನರಿಗೆ ಇದರಿಂದ ನೋವಾಗಿದೆ. ಅವರೆಲ್ಲರೂ ಪ್ರಕರಣ ದಾಖಲಿಸಿ ನ್ಯಾಯಾಲಯ ತೀರ್ಪು ನೀಡಿದೆ’ ಎಂದು ಹೇಳಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಕಾಂಗ್ರೆಸ್‌ನಿಂದ ಮೊದಲ ಪಟ್ಟಿ ಬಿಡುಗಡೆಯಾಗಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. 

ಮೀಸಲಿನಿಂದ ಉಳಿಯುತ್ತಾ ವೋಟ್‌ಬ್ಯಾಂಕ್‌?: ಚುನಾವಣೆಗೂ ಮುನ್ನ ದೊಡ್ಡ ಸಾಹಸಕ್ಕೆ ಕೈಹಾಕಿದ ಬೊಮ್ಮಾಯಿ

ಅದರಲ್ಲಿ ಹೊಸತನ ಏನಿಲ್ಲ. ಬಿಜೆಪಿ ಪಟ್ಟಿ ಬಿಡುಗಡೆ ಕುರಿತು ಕಾದು ನೋಡಿ’ ಎಂದರು. ದಾವಣಗೆರೆಯಿಂದ ವಿಜಯದ ಯಾತ್ರೆ ಪ್ರಾರಂಭವಾಗಲಿದ್ದು, ಪ್ರಧಾನಿ ಮೋದಿಯ ದೊಡ್ಡ ಬಲ ನಮಗೆ ಇದೆ. ಡಬಲ್‌ ಇಂಜಿನ್‌ ಸರ್ಕಾರದ ಒಳ್ಳೆಯ ಕೆಲಸ ಇಟ್ಟುಕೊಂಡು ಜನರ ಆಶೀರ್ವಾದ ಪಡೆಯುತ್ತೇವೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಯಾಗುವುದು ನಿಶ್ಚಿತ. ಮೇ ತಿಂಗಳಲ್ಲಿ ಮತ್ತೊಮ್ಮೆ ವಿಜಯೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಯುತ್ತೇವೆ ಎಂದು ಇದೇ ವೇಳೆ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಸ್ವಾಭಿಮಾನಿ ಕರ್ನಾಟಕ ಕಟ್ಟುವೆ: ಕುರಿಗಾರರು, ಕುಂಬಾರರು ಸೇರಿದಂತೆ ನಾಡಿನ ಎಲ್ಲಾ ವೃತ್ತಿ ವರ್ಗದ ಕುಟುಂಬ ಹಾಗೂ ಅವರ ಮಕ್ಕಳಿಗೆ ಭವ್ಯಭವಿಷ್ಯ ರೂಪಿಸುವುದರೊಂದಿಗೆ ಸ್ವಾಭಿಮಾನದ ಕರ್ನಾಟಕ ಕಟ್ಟಲು ಶ್ರಮಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಗುರುವಾರ ಆಯೋಜಿಸಿದ್ದ ಆಟೋ ಮತ್ತು ಟ್ಯಾಕ್ಸಿ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ, ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಸ್ವಸಹಾಯ ಗುಂಪುಗಳಿಗೆ ಸಮುದಾಯ ಬಂಡವಾಳ ನಿಧಿ ವಿತರಣೆ, ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಹಾಗೂ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಪ್ರಧಾನಿ ಮೋದಿ ‘ಮಹಾ’ ಮತ ಕಹಳೆ: ಸಿದ್ದರಾಮಯ್ಯಗೆ ಕಪಾಳಮೋಕ್ಷ ಟಾಂಗ್‌!

ಒಂದು ವರ್ಷದ ಹಿಂದೆ ಕಂಡ ಕನಸು ನನಸಾಗಿದೆ. ವಿದ್ಯಾನಿಧಿಯಿಂದ 11 ಲಕ್ಷ ರೈತರ ಮಕ್ಕಳಿಗೆ, ಮೀನುಗಾರರು, ನೇಕಾರರ ಮಕ್ಕಳಿಗೆ ಅನುಕೂಲ ಆಗಿದೆ. ಅಭಿವೃದ್ಧಿಯ ಪಯಣ ಮುಂದುವರೆಯಲಿ. ಜನರ ಆಶೀರ್ವಾದ, ಬೆಂಬಲದಿಂದ ಮುಖ್ಯಮಂತ್ರಿ ಹುದ್ದೆಯಲ್ಲಿದ್ದು, ಜನರ ಆಶೀರ್ವಾದದಿಂದ ಸ್ವಾಭಿಮಾನಿ ಕರ್ನಾಟಕ ಕಟ್ಟಲು ಸಂಪೂರ್ಣ ಶಕ್ತಿಯನ್ನು ಬಳಕೆ ಮಾಡುವುದಾಗಿ ತಿಳಿಸಿದರು. ಕುರಿಗಾಹಿಗಳಿಗೆ 355 ಕೋಟಿ ರು. ಮೀಸಲಿಡಲಾಗಿದ್ದು, 20 ಕುರಿ, ಒಂದು ಮೇಕೆ ಖರೀದಿಗೆ 20 ಸಾವಿರ ಕುರಿಗಾಹಿಗಳಿಗೆ ತಲಾ 1.31 ಲಕ್ಷ ರು. ನೀಡಲಾಗುವುದು. ಕುರಿ ಉಣ್ಣೆ ಉತ್ಪಾದನೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಇದೆ. ಕುರಿ ಮಾಂಸ ಉತ್ಪಾದನೆ ಹೆಚ್ಚಳವಾಗಿ ಮಾಂಸ ವಿದೇಶಗಳಿಗೆ ರಪ್ತು ಆಗಬೇಕು. ಕುರಿಗಾಹಿಗಳ ಆದಾಯ ದ್ವಿಗುಣವಾಗಬೇಕು. ಉತ್ಪಾದನೆಯನ್ನು ಅಮೃತ ಕುರಿಗಾಹಿ ಯೋಜನೆ ಮಾರುಕಟ್ಟೆಗೆ ಜೋಡಿಸುತ್ತದೆ. ಇನ್ನೂ 50 ಸಾವಿರ ಕುರಿಗಾಹಿಗಳ ಸಂಘಗಳಿಗೆ ಯೋಜನೆಯ ಫಲ ನೀಡಲಿದೆ ಎಂದು ವಿವರಿಸಿದರು.

click me!