ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಕ್ಷಣ ಬಿಬಿಎಂಪಿ ಚುನಾವಣೆ: ಸಿದ್ದರಾಮಯ್ಯ

By Kannadaprabha NewsFirst Published Mar 26, 2023, 7:01 AM IST
Highlights

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ತಕ್ಷಣ ಬಿಬಿಎಂಪಿ ಚುನಾವಣೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ಬೆಂಗಳೂರು (ಮಾ.26): ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ತಕ್ಷಣ ಬಿಬಿಎಂಪಿ ಚುನಾವಣೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ‘ಕೆಪಿಸಿಸಿ ಅಪಾರ್ಟ್‌ಮೆಂಟ್‌ ಸೆಲ್‌’ ಶನಿವಾರ ಆಯೋಜಿಸಿದ್ದ ಅಪಾರ್ಟ್‌ಮೆಂಟ್‌ನ ನಿವಾಸಿಗಳೊಂದಿಗೆ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕಳೆದ ಮೂರು ವರ್ಷದಿಂದ ವಾರ್ಡ್‌ ಮರು ವಿಂಗಡಣೆ ನೆಪದಲ್ಲಿ ಬಿಬಿಎಂಪಿ ಚುನಾವಣೆ ಮಾಡಿಲ್ಲ. ಅಧಿಕಾರ ವಿಕೇಂದ್ರಿಕರಣ ಅಂದರೆ, ಇದೇ ಏನು ಎಂದು ಪ್ರಶ್ನಿಸಿದರು.

ಪಾಲಿಕೆ ಸದಸ್ಯರು ಇಲ್ಲದ ಕಾರಣಕ್ಕೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಸಣ್ಣ ಮಳೆ ಬಂದರೆ ಸಾಕು ಮನೆ, ಅಪಾರ್ಟ್‌ಮೆಂಟ್‌ಗಳಿಗೆ ನೀರು ತುಂಬಿಕೊಳ್ಳುತ್ತದೆ. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಕಳೆದ ನಾಲ್ಕು ವರ್ಷದಿಂದ ಬೆಂಗಳೂರಿನ ಚಿತ್ರಣ ಬದಲಾವಣೆ ಮಾಡುತ್ತೇವೆ ಎಂದು ಬರೀ ಬಾಯಿ ಮಾತಿನಲ್ಲಿ ಹೇಳಿದರು ಎಂದು ವಾಗ್ದಾಳಿ ನಡೆಸಿದರು.

ಹಿಂಬಾಗಿಲಿನಿಂದ ಬಂದ ಅನೈತಿಕ ಸರ್ಕಾರ ರಾಜ್ಯದಲ್ಲಿದೆ: ಡಬಲ್‌ ಇಂಜಿನ್ ಸರ್ಕಾರದ ವಿರುದ್ಧ ಸಿದ್ದು ವಾಗ್ದಾಳಿ

ಸಮಿತಿ ರಚನೆ: ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದ ಕಾರಣ ಸಮಸ್ಯೆ ಆಗುತ್ತಿದೆ. ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಅಪಾರ್ಟ್‌ಮೆಂಟ್‌ ನಿವಾಸಿಗಳ ಸಮಸ್ಯೆ ನೇರವಾಗಿ ಕೇಳಿ ಅರ್ಥ ಮಾಡಿಕೊಂಡು ಪರಿಹರಿಸಲು ಬೆಂಗಳೂರು ಅಭಿವೃದ್ಧಿ ಸಚಿವರು, ಶಾಸಕರು ಹಾಗೂ ಮೇಯರ್‌ ಅವರ ನೇತೃತ್ವದಲ್ಲಿ ಒಂದು ಸಮಿತಿ ರಚನೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ, ಸಂಚಾರ ದಟ್ಟಣೆ ಹಾಗೂ ಬೆಂಗಳೂರಿಗೆ ವಲಸೆ ಬರುವವ ಸಂಖ್ಯೆ ಕಡಿಮೆ ಮಾಡಬೇಕಿದೆ. ಅದಕ್ಕಾಗಿ ಎರಡನೇ ಹಂತದ ನಗರಗಳನ್ನು ಅಭಿವೃದ್ಧಿ ಪಡಿಸಬೇಕು. ಈ ಮೂಲಕ ಬೆಂಗಳೂರಿನ ಮೇಲೆ ಹೊರೆ ಇಳಿಸಬಹುದು ಎಂದರು.

ಈ ಹಿಂದೆ ರೇರಾ ವಿಚಾರದಲ್ಲಿ ಸಾಕಷ್ಟುಸಮಸ್ಯೆಗಳಿದ್ದವು. ಆದರೆ ಕಾಂಗ್ರೆಸ್‌ ಪಕ್ಷ ಈ ವಿಚಾರವಾಗಿ ಧೃಡ ಸಂಕಲ್ಪ ಮಾಡಿ ರೇರಾ ತಂದು ಹಂತ ಹಂತವಾಗಿ ಸುಧಾರಣೆಗೆ ಕ್ರಮ ಕೈಗೊಂಡಿತ್ತು ಎಂದರು. ಈ ವೇಳೆ ಅಪಾರ್ಟ್‌ಮೆಂಟ್‌ ನಿವಾಸಿಗಳಿಂದ ಸಮಸ್ಯೆಆಲಿಸಲಾಯಿತು. ‘ನಮ್ಮ ಬೆಂಗಳೂರು ಅಪಾರ್ಟ್‌ಮೆಂಟ್‌ ನಿವಾಸಿಗಳಿಗಾಗಿ ನಮ್ಮ ಕಾರ್ಯಯೋಜನೆ’ಯನ್ನು ಬಿಡುಗಡೆ ಮಾಡಲಾಯಿತು. ಮುಖಂಡರಾದ ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ಶಾಸಕರಾದ ಬೈರತಿ ಸುರೇಶ್‌, ರಿಜ್ವಾನ್‌ ಅರ್ಷದ್‌, ಮಾಜಿ ಮೇಯರ್‌ಗಳಾದ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಹಾಗೂ ಸಂಪತ್‌ ರಾಜ್‌, ಕೆಪಿಸಿಸಿ ಅಪಾರ್ಟ್‌ಮೆಂಟ್‌ ಸೆಲ್‌ನ ಮುಖ್ಯಸ್ಥ ರಾಜೀವ್‌ ಗೌಡ ಮೊದಲಾದವರಿದ್ದರು.

ರಾಹುಲ್‌ ಗಾಂಧಿ ಅನರ್ಹತೆಯಿಂದ ಮೋದಿ ಹೇಡಿತನ ಸಾಬೀತು: ಸಿದ್ದರಾಮಯ್ಯ

ಮೆಟ್ರೋ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಟೆಂಡರ್‌ ಶ್ಯೂರ್‌ ರಸ್ತೆಗಳು ಸೇರಿದಂತೆ ಹಲವು ಬೆಂಗಳೂರಿನ ಅಭಿವೃದ್ಧಿ ಯೋಜನೆಗಳು ಕಾಂಗ್ರೆಸ್‌ ಅಧಿಕಾರ ಅವಧಿಯಲ್ಲಿಯೇ ಆರಂಭಿಸಲಾಗಿದೆ. ಈ ಬಾರಿ ಕಾಂಗ್ರೆಸ್‌ನಿಂದ ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು.
-ರಾಮಲಿಂಗಾರೆಡ್ಡಿ, ಮಾಜಿ ಸಚಿವ

click me!