
ಮೈಸೂರು(ಜ.23): ಚುನಾವಣೆಯಲ್ಲಿ ಸೋಲುವ ಭೀತಿಯಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಚುನಾವಣೆಯಲ್ಲಿ ಸೋತ ಮೇಲೆ ರಾಜಕೀಯ ನಿವೃತ್ತಿಯಾಗುವ ಪರಿಸ್ಥಿತಿ ಬರಲಿದೆ. ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್ ಭರವಸೆ ಈಡೇರಿಸದಿದ್ದಲ್ಲಿ ರಾಜೀನಾಮೆ ಕೊಡುವ ಮಾತನ್ನು ಸಿದ್ದರಾಮಯ್ಯ ಹೇಳಿದ್ದಾರೆ. ಅವರ ಕಾಲದಲ್ಲಿ ಎಸ್ಕಾಂಗಳು ನಷ್ಟದಲ್ಲಿದ್ದವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 8 ಸಾವಿರ ಕೋಟಿ ನೇರ ಮತ್ತು 13000 ಸಾವಿರ ಕೋಟಿಯನ್ನು ಸಾಲದ ರೂಪದಲ್ಲಿ ಕೊಟ್ಟು ಎಸ್ಕಾಂಗಳನ್ನು ಉಳಿಸಲಾಗಿದೆ. ಇದರಿಂದಾಗಿ ನಿರಂತರವಾದ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದರು.
ಸಿಎಂ ಬೊಮ್ಮಾಯಿ ಮನೆ ಹಾಳಾಗ ಎಂದ ಸಿದ್ದುಗೆ ತಿರುಗೇಟು ನೀಡಿದ ಸಚಿವ ಸೋಮಣ್ಣ
ಪ.ಜಾತಿ ಮತ್ತು ಪ.ಪಂಗಡದವರಿಗೆ ವೈಜ್ಞಾನಿಕವಾಗಿ 75 ಯೂನಿಟ್ ವಿದ್ಯುತ್ ಕೊಡುತ್ತಿದ್ದೇವೆ. 200 ಯೂನಿಟ್ ವಿದ್ಯುತ್ ಕೊಡಲು ಯಾವ ಮಾನದಂಡ ಅನುಸರಿಸಲಿದ್ದಾರೆ? ಬಿಪಿಎಲ್ ಕಾರ್ಡುದಾರರಿಗೆ ಮೊದಲು 30 ಕೆಜಿ, ನಂತರ 7 ಕೆಜಿ, ಅಮೇಲೆ ನಾಲ್ಕು ಕೆಜಿಗೆ ತಂದು ನಿಲ್ಲಿಸಿದ್ದರು. ಚುನಾವಣೆ ಬರುತ್ತಿದ್ದಂತೆ 7 ಕೆಜಿ ಕೊಡುವುದನ್ನು ಶುರು ಮಾಡಿದರು. ಸಿದ್ದರಾಮಯ್ಯ ಅವರ ಸರ್ಕಾರದ ಟ್ರ್ಯಾಕ್ ರೆಕಾರ್ಡ್ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್ ಎಂದು ಜರಿದ ಕುರಿತು ಕಿಡಿಕಾರಿದ ಬಸವರಾಜ ಬೊಮ್ಮಾಯಿ, ಗುಜರಾತ್ ಚುನಾವಣೆ ವೇಳೆ ಬಾಯಿಗೆ ಬಂದಂತೆ ಮಾತನಾಡಿದ ಪರಿಣಾಮ ಅಲ್ಲಿನ ಫಲಿತಾಂಶ ಏನಾಯಿತು ಎಂಬುದು ಗೊತ್ತಿದೆ. ಮೋದಿ ಅವರನ್ನು ಟೀಕಿಸಿದಷ್ಟು ಅತ್ಯಧಿಕ ಬಹುಮತಗಳಿಂದ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಅವರ ಟೀಕೆಯ ಬಗ್ಗೆ ನಾನೇನೂ ಪ್ರತಿಕ್ರಿಯಿಸುವುದಿಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರ, ಅವ್ಯವಹಾರ, ದೌರ್ಭಾಗ್ಯದ ಬಗ್ಗೆ ಮಾತನಾಡುತ್ತೇವೆಯೇ ಹೊರತು ವೈಯಕ್ತಿಕವಾಗಿ ಟೀಕೆ ಮಾಡಲ್ಲ. ಅವರ ಟೀಕೆಯ ಪದಗಳನ್ನು ನೋಡಿದರೆ ಸಿದ್ದರಾಮಯ್ಯ ಸಂಸ್ಕೃತಿ, ರಾಜಕಾರಣದ ಸಂಸ್ಕೃತಿ ಅರ್ಥವಾಗಲಿದೆ ಎಂದು ಅವರು ತಿರುಗೇಟು ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.