ಸಂಸತ್ ಭವನದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಚರ್ಚೆ ಮಾಡಿದರೆ ರಾಹುಲ್ ಗಾಂಧಿ ಹೊರಗೇ ಓಡಿಹೋಗ್ತಾರೇ. ಇಂಗ್ಲೆಂಡ್ ಮತ್ತು ಇಟಲಿಯಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಭಾಷಣ ಮಾಡ್ತಾರೇ.
ಕೊರಟಗೆರೆ (ಮಾ.17): ಸಂಸತ್ ಭವನದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಚರ್ಚೆ ಮಾಡಿದರೆ ರಾಹುಲ್ ಗಾಂಧಿ ಹೊರಗೇ ಓಡಿಹೋಗ್ತಾರೇ. ಇಂಗ್ಲೆಂಡ್ ಮತ್ತು ಇಟಲಿಯಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಭಾಷಣ ಮಾಡ್ತಾರೇ. ಕಾಂಗ್ರೆಸ್ ಪಕ್ಷ ಮುಳುಗುವ ಹಡಗು. ಮಹಾರಾಷ್ಟ್ರ, ಗುಜರಾತ್, ಹರಿಯಾಣ ಸೇರಿದಂತೆ ಉತ್ತರ ಭಾರತದಲ್ಲಿ ಕಾಂಗ್ರೆಸ್ ಈಗಾಗಲೇ ಮುಳುಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಪಟ್ಟಣದಲ್ಲಿ ಬಿಜೆಪಿ ಪಕ್ಷದಿಂದ ಏರ್ಪಡಿಸಲಾಗಿದ್ದ ವಿಜಯ ಸಂಕಲ್ಪ ರಥಯಾತ್ರೆಯ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಸಿದ್ದರಾಮಯ್ಯ ಸಿಎಂ ಆಗಿದ್ರು ಆವಾಗ ಪ್ರತಿ ಮನೆಗೆ 2 ಸಾವಿರ ಕೊಡ್ಲಿಲ್ಲ. ಡಿ.ಕೆ.ಶಿವಕುಮಾರ್ ಇಂಧನ ಸಚಿವ ಆಗಿದ್ದಾಗ 200 ಯುನಿಟ್ ವಿದ್ಯುತ್ ಕೊಡ್ಲಿಲ್ಲ ಈಗ ಸುಳ್ಳು ಭರವಸೆ ನೀಡ್ತಿದ್ದಾರೆ. 60 ವರ್ಷದಿಂದ ಕಾಂಗ್ರೆಸ್ ಪಕ್ಷ ಮಾಡದಿರುವ ಅಭಿವೃದ್ಧಿಯನ್ನು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದೆ. ಮನೆಹಾಳು ಮಾಡೋ ಕಾಂಗ್ರೆಸ್ ಪಾರ್ಟಿಯ ಮಾತು ನಂಬಬೇಡಿ ಎಂದು ಹೇಳಿದರು.
ರೈತರಿಗೆ ಮೊದಲು ವಿಮೆ ಜಾರಿ ಮಾಡಿದ್ದು ನಮ್ಮ ಸರ್ಕಾರ: ಬಿ.ಎಸ್.ಯಡಿಯೂರಪ್ಪ
ವಿಜಯ ಸಂಕಲ್ಪ ರಥಯಾತ್ರೆಯಲ್ಲಿ ಶಿಕ್ಷಣ ಸಚಿವ ನಾಗೇಶ್, ಸಂಸದ ಜಿ.ಎಸ್.ಬಸವರಾಜು, ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಮಂಜುನಾಥ, ಕೊರಟಗೆರೆ ಉಸ್ತುವಾರಿ ಅಶ್ವತ್ಥನಾರಾಯಣ್, ಜಿಲ್ಲಾ ಕಾರ್ಯದರ್ಶಿ ಶಿವಕುಮಾರಸ್ವಾಮಿ, ಬಿಜೆಪಿ ಮಂಡಲ ಅಧ್ಯಕ್ಷ ಪವನಕುಮಾರ್, ಯುವಧ್ಯಕ್ಷ ಅರುಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಗುರುಧತ್, ಮುಖಂಡರಾದ ವೆಂಕಟಾಚಲಯ್ಯ, ಹನುಮಂತರಾಜು, ಸಂಜೀವರಾಜು, ವಿಶ್ವನಾಥ್, ಗಿರೀಶ್, ದಾಸಾಲುಕುಂಟೆ ರಘು, ದಯಾನಂದ್, ಚೇತನ್, ನಟರಾಜು ಸೇರಿದಂತೆ ಇತರರು ಇದ್ದರು.
ಕೊರಟಗೆರೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ: ವಿಜಯ ಸಂಕಲ್ಪ ರಥಯಾತ್ರೆಗೂ ಮೊದಲು ಕನಕದಾಸ ಪ್ರತಿಮೆಗೆ ಸಿಎಂ ಬಸವರಾಜು ಬೊಮ್ಮಾಯಿ ಪೂಜೆ ಸಲ್ಲಿಸಿದರು. ಸಿಎಂಗೆ ನೂರಾರು ಜನ ಮಹಿಳೆಯರು ಪೂರ್ಣಕುಂಭ ಕಳಸದ ಸ್ವಾಗತ ಕೂರಿದರು. ಕೊರಟಗೆರೆ ಪಟ್ಟಣದ ಊರ್ಡಿಗೆರೆ ವೃತ್ತದಿಂದ ತೆರೆದ ವಾಹನದಲ್ಲಿ ಸಿಎಂ, ಕಂದಾಯ ಸಚಿವ, ಶಿಕ್ಷಣ ಸಚಿವ ಸಾವಿರಾರು ಜನ ಕಾರ್ಯಕರ್ತರ ಜೊತೆ ರೂಡ್ ಶೋ ನಡೆಸಿದರು. ಕೊರಟಗೆರೆ ಪಟ್ಟಣದುದ್ದಕ್ಕೂ ಬಿಜೆಪಿ ಬಾವುಟ, ಫ್ಲೆಕ್ಸ್ ಹಿಡಿದು ಬಿಜೆಪಿ ಪಕ್ಷದ ಪರವಾಗಿ ಜಯಘೋಷ ಕೂಗುವ ಮೂಲಕ ಕೊರಟಗೆರೆ ಪಟ್ಟಣದಲ್ಲಿ ಬಿಜೆಪಿ ಪಕ್ಷದ ಶಕ್ತಿ ಪ್ರದರ್ಶನ ನಡೆಯಿತು.
ಬ್ಯಾನರ್ ಕಟ್ಟಲು ಆಕಾಂಕ್ಷಿಗಳ ಪೈಪೋಟಿ: ವಿಜಯ ಸಂಕಲ್ಪ ರಥಯಾತ್ರೆಯ ಸ್ವಾಗತಕ್ಕಾಗಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಇಬ್ಬರು ಆಕಾಂಕ್ಷಿತ ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆದಿದೆ. ಸಿಎಂ ಭೇಟಿಗೂ ಮುನ್ನವೇ ಕೊರಟಗೆರೆ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಬಿಜೆಪಿ ಆಕಾಂಕ್ಷಿ ಅಭ್ಯರ್ಥಿಗಳಾದ ಬಿ.ಎಚ್.ಅನಿಲ್‌ಕುಮಾರ್ ಮತ್ತು ಡಾ.ಲಕ್ಷ್ಮೇಕಾಂತ್ ಹಾಗೂ ಬೆಂಬಲಿಗರ ನಡುವೆ ಬ್ಯಾನರ್ ಕಟ್ಟುವ ಜಾಗದ ವಿಷಯಕ್ಕೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ.
ಮಾಜಿ ಡಿಸಿಎಂ ಪರಮೇಶ್ವರನ್ನಾ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೊರಟಗೆರೆಗೆ ಬಂದು ಸೋಲಿಸ್ತಾರೇ. ಅದರ ಬಗ್ಗೆ ನಮಗೇ ಚಿಂತೆಯೇ ಬೇಡ. ಕಾಂಗ್ರೆಸ್ ಪಕ್ಷದ ನಾಯಕರು ನೀಡುತ್ತಿರೋದು ಗ್ಯಾರಂಟಿ ಕಾರ್ಡ್ ಅಲ್ಲ ಅದು ಬರೀ ವಿಸಿಟಿಂಗ್ ಕಾರ್ಡು ಮಾತ್ರ. ಅವರೇ ಇನ್ನೂ ಗ್ಯಾರಂಟಿ ಇಲ್ಲ, ಇನ್ನೂ ಕಾರ್ಡಿಗೆ ಬೆಲೆ ಇದೀಯಾ. ಕಾಂಗ್ರೆಸ್ ನಾಯಕರ ಸುಳ್ಳು ಭರವಸೆಗೆ ಮರುಳಾಗಬೇಡಿ.
-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ರಾಹುಲ್ ಗಾಂಧಿ ದೇಶದ ಜನರ ಕ್ಷಮೆ ಕೇಳಲಿ: ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ
ಬಸವರಾಜು ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಸ್ಟಿ-ಎಸ್ಟಿಮೀಸಲಾತಿ ಹೆಚ್ಚಿಸಿ ಸಮುದಾಯಕ್ಕೆ ದೊಡ್ಡ ಉಡುಗೂರೆ ನೀಡಿದೆ. ಕೊರಟಗೆರೆ ಕ್ಷೇತ್ರಕ್ಕೆ ಬಿಜೆಪಿ ನಾಯಕರ ಆಗಮನದಿಂದ ನಮಗೆ ಇನ್ನಷ್ಟುಶಕ್ತಿ ಬಂದಿದೆ. ನರೇಂದ್ರ ಮೋದಿ ಮತ್ತು ಬಸವರಾಜು ಬೊಮ್ಮಾಯಿ ನೇತೃತ್ವದ ಕೇಂದ್ರ-ರಾಜ್ಯ ಸರ್ಕಾರದ ಸಾಧನೆಗಳೇ ಬಿಜೆಪಿ ಗೆಲುವಿಗೆ ಆಸರೆ ಆಗಲಿದೆ. 2023ಕ್ಕೆ ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಲಿದೆ.
-ಅನಿಲ್‌ಕುಮಾರ್ ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ, ಕೊರಟಗೆರೆ