ದಾಖಲೆ ಕೊಟ್ರೆ ಸಿದ್ದು ವಿರುದ್ಧ ಕ್ರಮ ತಗೋತೀರಾ?: ರಾಹುಲ್‌ಗೆ ಸಿಎಂ ಸವಾಲ್‌

By Kannadaprabha News  |  First Published Oct 19, 2022, 12:00 AM IST

ಅರ್ಜಿ ಹಾಕದವರಿಗೂ ನೌಕರಿ ಕೊಟ್ಟಿದ್ದ ಸಿದ್ದು ಪಡೆದಿದ್ದ ಹಣ ಎಷ್ಟು?, ಕಾಂಗ್ರೆಸ್‌ ಹೈಕಮಾಂಡ್‌ಗೆ ಕರ್ನಾಟಕ ಎಟಿಎಂ ಆಗಿತ್ತು: ಬೊಮ್ಮಾಯಿ 


ಔರಾದ್‌(ಅ.19):  ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ನಡೆದ ಪೊಲೀಸ್‌ ನೇಮಕಾತಿ ಹಗರಣ, ಕೆಪಿಎಸ್‌ಸಿ ಹಗರಣಗಳ ಕುರಿತಾದ ದಾಖಲೆಗಳನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರಿಗೆ ನೀಡುತ್ತೇನೆ. ಅಂದು ಅಧಿಕಾರದಲ್ಲಿ ಇದ್ದ ಮುಖ್ಯಮಂತ್ರಿ, ಸಚಿವರ ವಿರುದ್ಧ ರಾಹುಲ್‌ ಗಾಂಧಿಯವರು ಕ್ರಮ ಕೈಗೊಳ್ಳುತ್ತಾರಾ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸವಾಲು ಎಸೆದಿದ್ದಾರೆ.

ಬೀದರ್‌ ಜಿಲ್ಲೆ ಔರಾದ್‌ನ ಅಮರೇಶ್ವರ ಕಾಲೇಜು ಮೈದಾನದಲ್ಲಿ ಮಂಗಳವಾರ ಬಿಜೆಪಿ ಆಯೋಜಿಸಿದ್ದ ಜನ ಸಂಕಲ್ಪ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು. ರಾಹುಲ್‌ ಗಾಂಧಿ ಅವರು ನಮ್ಮ ಸರ್ಕಾರದ ಅವಧಿಯಲ್ಲಿ ಹಗರಣಗಳು ನಡೆದಿವೆ ಎಂದು ಆರೋಪಿಸುತ್ತಿದ್ದಾರೆ. ನಮ್ಮದು ಪರ್ಸೆಂಟೇಜ್‌ ಸರ್ಕಾರ ಎನ್ನುತ್ತಿದ್ದಾರೆ. ಆದರೆ, ಅರ್ಜಿ ಹಾಕದಿದ್ದರೂ ನೌಕರಿ ಕೊಡುವ ವ್ಯವಸ್ಥೆ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿತ್ತು. ಆಗ ಅವರು ಎಷ್ಟುಪರ್ಸೆಂಟೇಜ್‌ ಹೊಡೆದಿರಬಹುದು ಎಂದು ತಿರುಗೇಟು ನೀಡಿದರು.

Tap to resize

Latest Videos

ಹುಬ್ಬಳ್ಳಿ, ಧಾರವಾಡಗಳಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ: ಅರುಣ್‌ ಸಿಂಗ್‌

ಮೊದಲು ನಿಮ್ಮವರು ಮಾಡಿದ ಹಗರಣಗಳ ಬಗ್ಗೆ ಮಾತಾಡಿ. ಸಿದ್ದರಾಮಯ್ಯನವರ ಆಡಳಿತದ ಅವಧಿಯಲ್ಲಿ ಸರ್ಕಾರದಲ್ಲಿ ಏನೇನು ನೇಮಕಾತಿ ಹಗರಣಗಳು ನಡೆದಿವೆಯೋ ಅವುಗಳನ್ನೆಲ್ಲ ದಾಖಲೆ ಸಮೇತ ಬಿಚ್ಚಿಡುತ್ತೇನೆ. ಅವರ ವಿರುದ್ಧ ರಾಹುಲ್‌ ಕ್ರಮ ಕೈಗೊಳ್ಳುತ್ತಾರಾ ಎಂದು ಪ್ರಶ್ನಿಸಿದರು. ಬೇಲ್‌ ಮೇಲೆ ಹೊರಗಿರುವ ರಾಹುಲ್‌, ಕರ್ನಾಟಕದಲ್ಲಿ ಭ್ರಷ್ಟಾಚಾರ ಇದೆ ಎಂದು ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಗೇಲಿ ಮಾಡಿದರು.

ಡಿಐಜಿ ಮುಟ್ಟುವ ಧಮ್‌ ಇರಲಿಲ್ಲ:

ಪೊಲೀಸ್‌ ನೇಮಕಾತಿ ಹಗರಣ ಕಲಬುರಗಿಯ ಡಿಐಜಿ ಶ್ರೀಧರ್‌ ಎಂಬುವರ ಮನೆಯಲ್ಲಿಯೇ ನಡೆದಿತ್ತು. ಆದರೆ, ಅವರನ್ನು ಮುಟ್ಟುವ ಧಮ್‌ ಇಲ್ಲದ ಕಾಂಗ್ರೆಸ್‌, ಪ್ರಕರಣವನ್ನು ಮುಚ್ಚಿ ಹಾಕಿತು. ಆದರೆ, ನಾವು ನಮ್ಮ ಆಡಳಿತದ ಅವಧಿಯಲ್ಲಿ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಎಡಿಜಿಪಿಯನ್ನೇ ಒಳಗೆ ಹಾಕಿದ್ದೇವೆ. ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಸರ್ಕಾರದ ಕಾರ್ಯಕ್ರಮಗಳಲ್ಲಿ ದುಡ್ಡು ಹೊಡೆಯೋದು ಹೇಗೆ ಎನ್ನುವುದೇ ಕಾಂಗ್ರೆಸ್‌ ಶಾಸಕರ ಚಿಂತೆಯಾಗಿತ್ತು. ಬಡಮಕ್ಕಳಿಗೆ ನೀಡುವ ದಿಂಬಿನಲ್ಲಿ, ಹಾಸಿಗೆಯಲ್ಲಿ ದುಡ್ಡು ಹೊಡೆದಿದ್ದಾರೆ. ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ಕರ್ನಾಟಕವು ಕಾಂಗ್ರೆಸ್‌ ಹೈಕಮಾಂಡ್‌ ಪಾಲಿಗೆ ಎಟಿಎಂ ಆಗಿ ಬಿಟ್ಟಿತ್ತು ಎಂದು ಆರೋಪಿಸಿದರು.

ಸಿದ್ದು ಸಿಎಂ ಆಗೋದು ತಿರುಕನ ಕನಸು: ಯಡಿಯೂರಪ್ಪ

‘ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆಗಳಾಗಿವೆ. ಬೀದರ್‌ ಜಿಲ್ಲೆಯ ಜೀವನಾಡಿಯಾಗಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ತಿಂದು ತೇಗಲಾಗಿದೆ. ಇದನ್ನು ನಾನು ಸಹಿಸುವುದಿಲ್ಲ. ಇದನ್ನು ಪೊಲೀಸ್‌ ತನಿಖೆಗೆ ಒಳಪಡಿಸುತ್ತೇನೆ’ ಎಂದು ಎಚ್ಚರಿಸಿದರು.

ಸಿಎಂ ತಿರುಗೇಟು

- ನಮ್ಮ ಸರ್ಕಾರದಲ್ಲಿ ಹಗರಣ ನಡೆದಿವೆ ಎಂದು ರಾಹುಲ್‌ ಹೇಳುತ್ತಿದ್ದಾರೆ
- ನಮ್ಮದು ಪರ್ಸೆಂಟೇಜ್‌ ಸರ್ಕಾರ ಎಂದು ರಾಹುಲ್‌ ದೂರುತ್ತಿದ್ದಾರೆ
- ಅರ್ಜಿ ಹಾಕದಿದ್ದರೂ ನೌಕರಿ ಕೊಡುವ ವ್ಯವಸ್ಥೆ ಸಿದ್ದು ಸರ್ಕಾರದಲ್ಲಿತ್ತು
- ಆಗ ಸಿದ್ದರಾಮಯ್ಯ ಅವರು ಎಷ್ಟುಪರ್ಸೆಂಟೇಜ್‌ ಹೊಡೆದಿರಬಹುದು?
- ಪಿಎಸ್‌ಐ ಹಗರಣ ಡಿಐಜಿ ಮನೆಯಲ್ಲೇ ನಡೆದಿದ್ದರೂ ಕಾಂಗ್ರೆಸ್‌ ಸುಮ್ಮನಿತ್ತು
- ಕಾಂಗ್ರೆಸ್‌ ಅವಧಿಯಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆಗಳಾಗಿವೆ
- ಬೀದರ್‌ನ ಸಹಕಾರ ಸಕ್ಕರೆ ಕಾರ್ಖಾನೆಯನ್ನು ತಿಂದು ತೇಗಲಾಗಿದೆ
- ಇದನ್ನು ನಾವು ಸಹಿಸುವುದಿಲ್ಲ. ಪೊಲೀಸ್‌ ತನಿಖೆಗೆ ಒಳಪಡಿಸುತ್ತೇವೆ

ಮೀಸಲು ಕೊಟ್ಟಿದ್ದು ನಾವು

ರಾಜ್ಯದಲ್ಲಿ ಈಗ ಬಿಜೆಪಿ ಸರ್ಕಾರವಿದೆ. ಹಿಂದುಳಿದವರಿಗೆ ನಾವು ಮೀಸಲಾತಿ ಕೊಟ್ಟಿದ್ದೇವೆ. ಆದರೂ, ಕಾಂಗ್ರೆಸ್‌ನವರು ತಾವೇ ಮೀಸಲಾತಿ ನೀಡಿದ್ದೇವೆ ಎನ್ನುತ್ತಿದ್ದಾರಲ್ಲ, ಅವರಿಗೆ ಆತ್ಮಸಾಕ್ಷಿಯಾದರೂ ಇದೆಯಾ? ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 
 

click me!