ಟಿಕೆಟ್ ಕೈ ತಪ್ಪಿದ ಕೆಲ ಮುಖಂಡರು ತಮ್ಮ ಬೆಂಬಲಿಗರ ಜೊತೆಗೆ ರಾಜೀನಾಮೆ ನೀಡುತ್ತಿದ್ದು ಜಿಲ್ಲಾ ಕಮಲ ಪಾಳಯಕ್ಕೆ ನುಂಗಲಾರದ ತುತ್ತಾಗಿದೆ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ(ಅ.18): ಸ್ಥಳೀಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯಲ್ಲಿ ಮತ್ತೊಮ್ಮೆ ಭಿನ್ನಮತ ಭುಗಿಲೆದ್ದಿದ್ದು, ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಬಂಡಾಯದ ಬಾವುಟ ಬೀಸಿದ್ದಾರೆ. ಟಿಕೆಟ್ ಕೈ ತಪ್ಪಿದ ಕೆಲ ಮುಖಂಡರು ತಮ್ಮ ಬೆಂಬಲಿಗರ ಜೊತೆಗೆ ರಾಜೀನಾಮೆ ನೀಡುತ್ತಿದ್ದು ಜಿಲ್ಲಾ ಕಮಲ ಪಾಳಯಕ್ಕೆ ನುಂಗಲಾರದ ತುತ್ತಾಗಿದೆ.
ತಪ್ಪಿದ ಟಿಕೆಟ್ ಶುರುವಾಯ್ತು ಬಂಡಾಯ..!
ಮಹಾನಗರ ಪಾಲಿಕೆಯ ವಾರ್ಡ್ 22ರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ರವಿಕಾಂತ ಬಗಲಿ ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ತನ್ನ ಬೆಂಬಲಿಗರೊಂದಿಗೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಈಗ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿರುವ ಪ್ರೇಮಾನಂದ ಬಿರಾದಾರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ ಪಕ್ಷದ ಹಿರಿಯ ಮುಖಂಡರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆ: ಕಮಲ ಪಾಳಯಕ್ಕೆ ಬಿಗ್ ಶಾಕ್..!
ಇತರರು ಬಂಡಾಯ ಏಳುವ ಸಾಧ್ಯತೆ..!
ಇವರ ಜತೆ ಹಲವು ಬಂಡಾಯ ಅಭ್ಯರ್ಥಿಗಳು ಇವರ ದಾರಿ ಹಿಡಿಯುವ ಸಾಧ್ಯತೆ ಇದೆ. ಇದರ ಜತೆ ಇತ್ತ ರವಿ ಬಗಲಿ ನನಗೆ ಟಿಕೆಟ್ ಕೈ ತಪ್ಪಿಸಿದ ಮುಖಂಡರ ಹೆಸರನ್ನು ಬಹಿರಂಗ ಪಡಿಸುವೆ ಎಂದಿದ್ದಾರೆ. ಬಿಜೆಪಿ ಟಿಕೆಟ್ ಪಡೆದ ಕೆಲವರ ವಿರುದ್ಧ ತಮ್ಮ ಅಸಮಧಾನ, ಆಕ್ರೋಶದ ಮಾತುಗಳನ್ನ ಹೊರ ಹಾಕುತ್ತಿದ್ದಾರೆ. ಜೆಡಿಎಸ್ ನಿಂದ ಬಂದಿರುವ ಬಿಜೆಪಿ ಅಭ್ಯರ್ಥಿ ಪ್ರೇಮಾನಂದ ಬಿರಾದಾರ ಅದೇ ನಾಯಕನ ಕೃಪಾ ಕಟಾಕ್ಷದಿಂದ ಟಿಕೆಟ್ ಪಡೆದುಕೊಂಡಿದ್ದಾರೆ. ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆದಿದ್ದಾರೆ ಅಥವಾ ಇಲ್ಲವೋ ಎನ್ನುವದೇ ಯಾರಿಗೂ ಗೊತ್ತಿಲ್ಲ, ಅಂಥವರಿಗೆ ಮಣೆ ಹಾಕಿ, ನಿಷ್ಟಾವಂತ ಕಾರ್ಯಕರ್ತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಭ್ಯರ್ಥಿಗಳ ವಿರುದ್ಧವೇ ಕತ್ತಿ ಮಸಿಯುತ್ತಿರುವ ಸ್ವಪಕ್ಷೀಯ ಟಿಕೆಟ್ ವಂಚಿತರು..!
ಕೆಲ ಟಿಕೆಟ್ ವಂಚಿತರು ತಮ್ಮ ಮುಖಂಡರ ಮಾತಿಗೆ ಬೆಲೆ ಕೊಟ್ಟು ಸುಮ್ಮನಾಗಿದ್ದರೂ ಸಹ ತೆರೆಮರೆಯಲ್ಲಿ ಅಧಿಕೃತ ಅಭ್ಯರ್ಥಿ ವಿರುದ್ಧ ಕತ್ತಿ ಮಸಿಯುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರ್ತಿವೆ. ಬಿಜೆಪಿಯ ಹಿರಿಯ ಮುಖಂಡರಾದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಶಾಸಕ ಅಪ್ಪು ಪಟ್ಟಣಶೆಟ್ಟಿ, ಸಂಸದ ರಮೇಶ ಜಿಗಜಿಣಗಿ ಹಾಗೂ ಪಕ್ಕದ ಜಿಲ್ಲೆಯ ಮುಖಂಡ ಹಾಗೂ ಸಚಿವ ಗೋವಿಂದ ಕಾರಜೋಳ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಸರ್ವ ಪ್ರಯತ್ನ ನಡೆಸಿದ್ದಾರೆ. ಆದರೆ ಮೇಲ್ನೋಟಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮ ಬೆಂಬಲಿಗರಿಗೆ ಹೆಚ್ಚಿನ ಟಿಕೆಟ್ ಕೊಡಿಸಲು ಯಶಸ್ವಿಯಾಗಿದ್ದಾರೆ ಎನ್ನಲಾಗ್ತಿದೆ. ಈ ಮೂಲಕ ಜಿಲ್ಲಾ ಬಿಜೆಪಿಯಲ್ಲಿ ತಮ್ಮ ಹಿಡಿತ ಇನ್ನಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ.
ಬಿಜೆಪಿಯಲ್ಲಿ ಟಿಕೆಟ್ ಗಾಗಿ ಅಭ್ಯರ್ಥಿಗಳ ಪಟ್ಟಿ ದೊಡ್ಡದಾಗಿಯೇ ಇತ್ತು. ಪ್ರತಿ ಒಬ್ಬ ಹಿರಿಯ ಮುಖಂಡರು ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ರಾಜ್ಯಮಟ್ಟದಲ್ಲಿಯೂ ಲಾಭಿ ನಡೆಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ನಲ್ಲಿ ಮೇಲ್ನೋಟಕ್ಕೆ ಎಲ್ಲವೋ ಸುಸೂತ್ರ..!
ಜಿಲ್ಲಾ ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ಟಿಕೆಟ್ ಹಂಚಿಕೆ ವಿಚಾರ ಯಾವುದೇ ಬೀದಿಗೆ ತರದೇ ತೆರೆಮರೆಯಲ್ಲಿ ಪಟ್ಟಿ ಸಿದ್ದಪಡಿಸಿ ನಾಮಪತ್ರ ಸಲ್ಲಿಸುವ ಕೊನೆ ದಿನ ಬೆಳಗ್ಗೆ ಪಟ್ಟಿ ಬಿಡುಗಡೆ ಮಾಡಿ ಜಾಣ್ಮೆ ಮೆರೆದಿದೆ. ಇಲ್ಲಿಯೋ ಕೆಲ ವಾರ್ಡ್ ಗಳಲ್ಲಿ ಬಂಡಾಯದ ಬಾವುಟ ಹಾರಿಸಲು ಯತ್ನಿಸಿದ್ದರೂ ಅವರನ್ನು ಸದ್ಯದ ಮಟ್ಟಿಗೆ ಸಮಾಧಾನ ಪಡಿಸಿದ್ದು, ಪಕ್ಷದ ತೀರ್ಪು ಅಂತಿಮ ಎನ್ನುವ ಸಂದೇಶವನ್ನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ರವಾನಿಸಿದ್ದಾರೆ.
ಕೆರೆ ತುಂಬಿಸಿದ ಬಿಜೆಪಿ ಸರ್ಕಾರ ಸ್ಮರಿಸಿ: ಎಂ.ಬಿ.ಪಾಟೀಲಗೆ ಈಶ್ವರಪ್ಪ ಟಾಂಗ್
ಜೆಡಿಎಸ್ ನಿಂದ 20 ಟಿಕೆಟ್ ಹಂಚಿಕೆ..!
ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಎಲ್ಲ ವಾರ್ಡ್ ಗಳಲ್ಲಿ ನಿಲ್ಲದಿದ್ದರೂ, ಬೇರೆ ಪಕ್ಷದಿಂದ ಬಂಡಾಯ ಅಭ್ಯರ್ಥಿಗಳಿಗೆ ಹೆಚ್ಚು ಆಧ್ಯತೆ ನೀಡುವದು ಮಾತ್ರ ಸಾಧ್ಯವಾಗಿದೆ. ಆಮ್ ಆದ್ಮಿ ಸೇರಿದಂತೆ ಹಲವು ಸಣ್ಣ ಪುಟ್ಟ ಪಕ್ಷಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿವೆ.
ನಾಮಪತ್ರಗಳ ಸುರಿಮಳೆ..!
ನಾಮಪತ್ರ ಸಲ್ಲಿಸಲು ಕೊನೆ ದಿನವಾದ ನಿನ್ನೆ ನಾಮಪತ್ರಗಳ ಸುರಿಮಳೆಯೆ ಆಗಿದೆ. ಇಂದು 35ವಾರ್ಡ್ ಗಳಿಗೆ ಒಟ್ಟು 211ನಾಮಪತ್ರ ಸಲ್ಲಿಕೆಯಾಗಿವೆ. ಇದರಲ್ಲಿ ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ಸಿಂಹಪಾಲಾಗಿದ್ದು ಒಟ್ಟು 91ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಬಂಡಾಯ ಹೊರತು ಪಡಿಸಿ 35 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇನ್ನೂ ಕಾಂಗ್ರೆಸ್ ಪಕ್ಷ 30 ಅಭ್ಯರ್ಥಿ ಗಳನ್ನು ಕಣಕ್ಕೆ ಇಳಿಸಿದೆ. ಜೆಡಿಎಸ್ 20, ಆಮ್ ಆದ್ಮಿ 19ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಮಾಡಿದೆ. ಇನ್ನು ಸಣ್ಣ ಪುಟ್ಟ ಪಕ್ಷಗಳು ಕೆಲವು ಕಡೆಗಳಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿ ಕೊಳ್ಳಲು ಕೆಲವು ವಾರ್ಡ್ ಗಳಿಗೆ ತಮ್ನ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಮಾಡಿವೆ. ನಾಳೆ ನಾಮಪತ್ರ ವಾಪಸ್ ತೆಗೆದು ಕೊಳ್ಳಲು ಅವಕಾಶವಿದೆ. ಕೊನೆಗೆ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಭವಿಷ್ಯವನ್ನು ಅ.28ರಂದು ಮತದಾರ ಬರೆಯಲಿದ್ದಾನೆ.