ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದಲ್ಲಿ ತಿಕ್ಕಾಟಕ್ಕೆ ಕಾರಣವಾಗಿರುವ, ತೀವ್ರ ಕುತೂಹಲ ಮೂಡಿಸಿರುವ ಹಾಸನ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ ಅವರೇ ಕಣಕ್ಕಿಳಿಯುವ ಸಾಧ್ಯತೆ ಕುರಿತು ಇದೀಗ ಜೋರಾಗಿ ಚರ್ಚೆ ಶುರುವಾಗಿದೆ.
ಹಾಸನ (ಫೆ.11): ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದಲ್ಲಿ ತಿಕ್ಕಾಟಕ್ಕೆ ಕಾರಣವಾಗಿರುವ, ತೀವ್ರ ಕುತೂಹಲ ಮೂಡಿಸಿರುವ ಹಾಸನ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ, ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ ಅವರೇ ಕಣಕ್ಕಿಳಿಯುವ ಸಾಧ್ಯತೆ ಕುರಿತು ಇದೀಗ ಜೋರಾಗಿ ಚರ್ಚೆ ಶುರುವಾಗಿದೆ. ರೇವಣ್ಣ ಅವರನ್ನು ಹಾಸನದಿಂದ ಕಣಕ್ಕಿಳಿಸಿ, ಪತ್ನಿ ಭವಾನಿ ಅವರಿಗೆ ಹೊಳೇನರಸೀಪುರ ಕ್ಷೇತ್ರದ ಟಿಕೆಟ್ ನೀಡುವ ಮೂಲಕ ಒಂದೇ ಏಟಲ್ಲಿ ಮೂರು ಹಕ್ಕಿ ಹೊಡೆಯುವ ಲೆಕ್ಕಾಚಾರಗಳು ಜೆಡಿಎಸ್ನಲ್ಲಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಸ್ವರೂಪ್ ಅಥವಾ ಭವಾನಿ ರೇವಣ್ಣ ಇಬ್ಬರಲ್ಲಿ ಯಾರೇ ಒಬ್ಬರಿಗೆ ಟಿಕೆಟ್ ನೀಡಿದರೂ ಜೆಡಿಎಸ್ನಲ್ಲಿ ಗುಂಪುಗಾರಿಕೆ ನಡೆಯುವ ಸಾಧ್ಯತೆ ಇದೆ. ಅಲ್ಲದೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭವಾನಿ ರೇವಣ್ಣ ಅವರನ್ನು ಯಾವುದೇ ಕಾರಣಕ್ಕೂ ಹಾಸನದಲ್ಲಿ ಕಣಕ್ಕಿಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವರೂಪ್ ಮನವೊಲಿಸಿ ಖುದ್ದು ರೇವಣ್ಣ ಅವರು ಹಾಸನದಿಂದ ಕಣಕ್ಕಿಳಿದರೆ ಬಣ ಜಗಳ ತಡೆದು ಕೈತಪ್ಪಿರುವ ಹಾಸನ ಕ್ಷೇತ್ರವನ್ನು ಮರುವಶ ಮಾಡಿಕೊಳ್ಳಬಹುದು ಮತ್ತು ಗುಂಪುಗಾರಿಕೆ ತಡೆಯಬಹುದು, ಅತ್ತ ಮುನಿಸಿಕೊಂಡಿರುವ ಭವಾನಿ ಅವರನ್ನು ಪತಿಯ ಕ್ಷೇತ್ರದಿಂದ ಕಣಕ್ಕಿಳಿಸಿ ಅಸಮಾಧಾನ ಶಮನಗೊಳಿಸಬಹುದು ಮತ್ತು ಟಿಕೆಟ್ ವಿಚಾರವಾಗಿ ಕುಟುಂಬದಲ್ಲಿ ಎದ್ದಿರುವ ಭಿನ್ನಮತಕ್ಕೆ ಬ್ರೇಕ್ ಹಾಕಬಹುದು ಎಂಬ ಲೆಕ್ಕಾಚಾರ ಒಳಗೊಳಗೆ ನಡೆಯುತ್ತಿದೆ ಎನ್ನಲಾಗಿದೆ.
undefined
ಬಿಜೆಪಿ, ಕಾಂಗ್ರೆಸ್ ಆಡಳಿತದಲ್ಲಿ ಜನರ ಬದುಕಿನ ಜೊತೆ ಚೆಲ್ಲಾಟ: ಎಚ್‌ಡಿಕೆ
ಗುಂಪುಗಾರಿಕೆ ಆತಂಕ: ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ಈಗಾಗಲೇ ಹಾಸನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಅದರಲ್ಲೂ ಮಹಿಳಾ ಮತದಾರರ ಒಲವು ಭವಾನಿಯವರತ್ತಲೇ ಇದೆ. ಹಾಗೆಂದು ಭವಾನಿಗೆ ಟಿಕೆಟ್ ನೀಡಿದರೆ ಸ್ವರೂಪ್ ಬೆಂಬಲಿಗರು ಮುನಿಸಿಕೊಂಡು ಚುನಾವಣೆ ಸಂದರ್ಭದಲ್ಲಿ ಉಲ್ಟಾಹೊಡೆಯುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಇನ್ನು ಸ್ವರೂಪ್ ಅವರ ತಂದೆ ದಿ.ಪ್ರಕಾಶ್ ಅವರು ಇದೇ ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿದ್ದವರು. ಸ್ವರೂಪ್ ಕೂಡ ಜಿ.ಪಂ. ಉಪಾಧ್ಯಕ್ಷರಾಗಿದ್ದವರು. ಅವರ ಬೆನ್ನ ಹಿಂದೆಯೂ ಕಾರ್ಯಕರ್ತರ ಪಡೆ, ಅವರದ್ದೇ ಆದ ವೋಟ್ ಬ್ಯಾಂಕ್ ಕೂಡ ಇದೆ. ಕುಮಾರಸ್ವಾಮಿ ಅವರ ಭರವಸೆ ನಂಬಿ ಮುಂದಿನ ಚುನಾವಣೆಗೆ ಈಗಾಗಲೇ ಸಾಕಷ್ಟುಪ್ರಚಾರವನ್ನೂ ಅವರು ನಡೆಸಿದ್ದಾರೆ. ಹಾಗೆಂದು ಸ್ವರೂಪ್‌ಗೆ ಟಿಕೆಟ್ ನೀಡಿದರೆ ಭವಾನಿ ಬೆಂಬಲಿಗರೂ ಸುಮ್ಮನೆ ಕೂರುವುದು ಅನುಮಾನ. ಇದರಿಂದ ಪಕ್ಷದಲ್ಲೇ ಗುಂಪುಗಾರಿಕೆ ಸೃಷ್ಟಿಯಾಗಿ ದೇವೇಗೌಡರ ಕುಟುಂಬವನ್ನು ಹಿಂದಿನಿಂದಲೂ ಕೆಣಕುತ್ತಲೇ ಬಂದಿರುವ ಬಿಜೆಪಿ ಶಾಸಕ ಪ್ರೀತಂಗೌಡರ ಕೈಮೇಲಾಗುವ ತಳಮಳ ಮುಖಂಡರಲ್ಲಿ ನಡೆಯುತ್ತಿದೆ.
ರೇವಣ್ಣ ಸ್ಪರ್ಧೆಯೇ ಪರಿಹಾರ: ಈ ಎಲ್ಲಾ ಗೊಂದಲದ ನಡುವೆ ಸ್ವತಃ ರೇವಣ್ಣ ಅವರೇ ಅಭ್ಯರ್ಥಿಯಾದರೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂಬ ಲೆಕ್ಕಾಚಾರ ವರಿಷ್ಠರು ಮತ್ತು ಕಾರ್ಯಕರ್ತರ ಮಟ್ಟದಲ್ಲೂ ಇದೀಗ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಸಂಸದರ ನಿವಾಸದಲ್ಲಿ ಜೆಡಿಎಸ್ನಿಂದ ಪ್ರತಿನಿತ್ಯ ಸಭೆಗಳು ನಡೆಯುತ್ತಿದ್ದು, ಸದ್ದಿಲ್ಲದೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಈಗಾಗಲೇ ರೇವಣ್ಣ ಅವರು ಹೈಕಮಾಂಡ್ ಒಪ್ಪಿದರೆ ಹಾಸನದಿಂದ ಸ್ಪರ್ಧಿಸಲು ಸಿದ್ಧ ಎಂದು ಹೇಳಿರುವುದು ಇಂಥ ಅನುಮಾನವನ್ನು ಮತ್ತಷ್ಟುಪುಷ್ಟೀಕರಿಸುತ್ತಿದೆ.
ಪಂಚರತ್ನ ರಥಯಾತ್ರೆಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರದ ಜತೆ ಬಿಜೆಪಿ ಮೇಲೆ ಎಚ್‌ಡಿಕೆ ಅಟ್ಯಾಕ್!
ಹಾಸನದಲ್ಲಿ ಯಾವುದೇ ಕಾರಣಕ್ಕೂ ಭವಾನಿ ರೇವಣ್ಣ ಸ್ಪರ್ಧಿಸಬಾರದು ಎಂದು ನಾನು ಹೇಳಿದ್ದೇನೆ. ಆದರೆ ಹಾಸನದಲ್ಲಿ ಶಾಸಕ ಪ್ರೀತಂ ಗೌಡ ಹಾಕಿರುವ ಸವಾಲನ್ನು ರೇವಣ್ಣ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಇನ್ನು ಅಲ್ಲಿಂದ ರೇವಣ್ಣ ಸ್ಪರ್ಧೆ ಕುರಿತು ಮುಂದೆ ಎಲ್ಲರೂ ಸೇರಿ ಸಮನ್ವಯದ ನಿರ್ಣಯ ಕೈಗೊಳ್ಳುತ್ತೇವೆ. ಅದೇ ಸಂದರ್ಭದಲ್ಲಿ ಹೊಳೆನರಸೀಪುರ ಕ್ಷೇತ್ರದ ಟಿಕೆಟ್ ಕುರಿತಾಗಿಯೂ ಪರಿಶೀಲಿಸುತ್ತೇವೆ.
- ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ