ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಏಳೆಂಟು ತಿಂಗಳು ಬಾಕಿ ಇದೆ. ಆಗಲೇ ರಾಜಕೀಯ ಪಕ್ಷಗಳು ಅಖಾಡಕ್ಕಿಳಿದಿವೆ. ಇನ್ನು ರಾಜಕೀಯ ನಾಯಕರು ಸಹ ಕ್ಷೇತ್ರದಲ್ಲಿ ಬೀಡುಬಿಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಇನ್ನು ಹಾಲಿ ಶಾಸಕ, ಸಚಿವರಾಗಿರುವ ಮಾಧುಸ್ವಾಮಿಗೆ ಮಾಜಿ ಶಾಸಕರೊಬ್ಬರು ಪರೋಕ್ಷವಾಗಿ ಕ್ಷೇತ್ರ ಬಿಟ್ಟುಕೊಡುವಂತೆ ಹೇಳಿದ್ದಾರೆ.
ತುಮಕೂರು, (ಆಗಸ್ಟ್.06): 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಟಿಕೆಟ್ ಆಕಾಂಕ್ಷಿಗಳು ಕ್ಷೇತ್ರ ಹುಡುಕಾಟದಲ್ಲಿದ್ದಾರೆ. ಅದರಂತೆ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಅವರು 2023ರ ವಿಧಾನಸಭಾ ಚುನಾವಣಾ ಪ್ರಚಾರವನ್ನು ಚಿಕ್ಕನಾಯಕನಹಳ್ಳಿಯಿಂದ ಪ್ರಾರಂಭಿಸಿದ್ದಾರೆ.
ಇದರ ಅಂಗವಾಗಿ, ಶುಕ್ರವಾರ ತಮ್ಮ ಬೆಂಬಲಿಗರಿಗಾಗಿ ಕಚೇರಿ ಸ್ಥಾಪಿಸಿದ್ದಾರೆ. ಈ ಮೂಲಕ ಕಾನೂನ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿಗೆ ಸಡ್ಡು ಹೊಡೆದಿದ್ದಾರೆ. ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧೆಗೆ ಮುಂದಾಗಿರುವ ಕಿರಣ್ ಕುಮಾರ್, ಬಿಜೆಪಿ ಟಿಕೆಟ್‌ಗೆ ತಾವೇ ತೀವ್ರ ಆಕಾಂಕ್ಷಿ ಎಂದು ಹೇಳಿದ್ದಾರೆ.
ಪುತ್ರನಿಗೆ ಬಿಎಸ್‌ವೈ ಕ್ಷೇತ್ರ ತ್ಯಾಗ: ಇದು ಬಿಜೆಪಿ ನಿರ್ಧಾರ ಅಲ್ಲ, ಅಚ್ಚರಿ ಹೇಳಿಕೆ ನೀಡಿದ ಸಚಿವ
2008ರಲ್ಲಿ ಕ್ಷೇತ್ರಗಳ ವಿಂಗಡಣೆಯ ಬಳಿ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಧುಸ್ವಾಮಿ ಹಾಗೂ ಕಿರಣ್ ಕುಮಾರ್ ನಡುವೆ ಮುಸುಕಿನ ಗುದ್ದಾಟ ನಡೆದಿದೆ. 2018 ರ ಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್ ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಒತ್ತಡದಿಂದಾಗಿ ಕಿರಣ್ ಕುಮಾರ್ ಅವರು ಮಾಧುಸ್ವಾಮಿಗೆ ಕ್ಷೇತ್ರ ತ್ಯಾಗ ಮಾಡಿದ್ದರು. ಆದ್ರೆ, ಇದೀಗ ಕಿರಣ್ ಕುಮಾರ್ ಮುಂದಿನ ವಿಧಾನಸಭೆ ಚುನಾವಣೆಗೆ ನಾನೇ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದು, ಮಾಧುಸ್ವಾಮಿಗೆ ತಲೆನೋವಾಗಿದೆ.
ಇತ್ತೀಚೆಗೆ ವಿವಿಧ ಮಂಡಳಿ ಮತ್ತು ನಿಗಮಗಳ ಸುಮಾರು 52 ಅಧ್ಯಕ್ಷರನ್ನು ಪದಚ್ಯುತಗೊಳಿಸಿ ಸರ್ಕಾರ ಆದೇಶ ಹೊರಡಿಸಿದಾಗ ಕಿರಣ್ ಕುಮಾರ್ ಅವರನ್ನು ಮಂಡಳಿಯ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿಲ್ಲ. ಇದು ಕಿರಣ್ ಕುಮಾರ್ ಆತ್ಮವಿಶ್ವಾಸ ಹೆಚ್ಚಾಗಿದ್ದು, ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ.
ಟಿಕೆಟ್ ಕೈತಪ್ಪಿದ್ದಕ್ಕೆ ನಿಗಮ ಮಂಡಳಿ
ಯೆಸ್...ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಭರವಸೆ ಮೇರೆಗೆ ಕಿರಣ್ ಕುಮಾರ್ ಅವರು ಸ್ಪರ್ಧೆಯಿಂದ ಹಿಂದೆ ಸರಿದು ಮಾಧುಸ್ವಾಮಿಗೆ ಅವಕಾಶ ನೀಡಿದ್ದರು, ಇದರಿಂದ ಅವರಿಗೆ ಬಿಎಸ್ ಯಡಿಯೂರಪ್ಪ ಅವರನ್ನು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆದ್ರೆ ಇದೀಗ ಮತ್ತೆ ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಎಂದು ಎದ್ದು ನಿಂತಿದ್ದಾರೆ.
ಯಡಿಯೂರಪ್ಪ ಮತ್ತು ಬಿಜೆಪಿ ಹೈಕಮಾಂಡ್ 2023ರಲ್ಲಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ 2018ರಲ್ಲಿ ಸೀಟು ತ್ಯಾಗ ಮಾಡಿದ್ದೆ ಎಂದು ಕಿರಣ್ ಕುಮಾರ್ ಹೇಳಿದ್ದಾರೆ, ನನ್ನ ಸ್ಪರ್ಧೆ ಖಚಿತ ಎಂಬ ಸ್ಪಷ್ಟ ಸಂದೇಶವನ್ನು ಪಕ್ಷದ ಕಾರ್ಯಕರ್ತರಿಗೆ ರವಾನಿಸಲು ಪ್ರಚಾರ ಆರಂಭಿಸಿದ್ದೇನೆ ಎಂದು ಕಿರಣ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ತೆರೆಮರೆಗೆ ಸರಿದಿರುವ ಮಾಧುಸ್ವಾಮಿ
ಸರ್ಕಾರದ ರಚನೆ ವೇಳೆ ವಿಧಾನಸೌಧದಲ್ಲಿ ವಿರೋಧ ಪಕ್ಷಗಳ ಮಾತಿಗೆ ತಿರುಗೇಟು ನೀಡುವ ಮೂಲಕ ಬಿಜೆಪಿ ಕಾರ್ಯಕರ್ತರ ಮೆಚ್ಚುಗೆಗೆ ಮಾಧುಸ್ವಾಮಿ ಪಾತ್ರರಾಗಿದ್ದರು. ಆದ್ರೆ, ಇತ್ತೀಚೆಗೆ ಅದ್ಯಾಕೋ ಮಾಧುಸ್ವಾಮಿ ಅವರು ಸುದ್ದಿಯಲ್ಲಿ ಪಕ್ಷದ ಕಾರ್ಯಚಟುವಟಿಕೆಗಳಂದ ಕೊಂಚ ದೂರಸರಿದಂತೆ ಕಾಣುತ್ತಿದೆ.