ಜಮೀರ್‌ಗೆ ಸಾಲ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಕಾಂಗ್ರೆಸ್‌ ನಾಯಕ ಕೆಜಿಎಫ್ ಬಾಬು!

By Suvarna NewsFirst Published Aug 6, 2022, 3:48 PM IST
Highlights

 ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್​ ಅಹಮದ್​ ಖಾನ್​ಗೆ ಅವರಿಗೆ  ಕೋಟ್ಯಂತರ ರೂಪಾಯಿ ಹಣ ನೀಡಿ ಮತ್ತೋರ್ಮ ಕಾಂಗ್ರೆಸ್ ನಾಯಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಂಗಳೂರು, (ಆಗಸ್ಟ್.06):  ಗುಜರಿ ವ್ಯಾಪಾರಿ, ಕಾಂಗ್ರೆಸ್​ ಮುಖಂಡ ಯೂಸೂಫ್​ ಶರೀಫ್​ (ಕೆಜಿಎಫ್​ ಬಾಬು)  ಅವರು  ಶಾಸಕ ಜಮೀರ್​ ಅಹಮದ್​ ಖಾನ್​ಗೆ ಕೋಟ್ಯಂತರ ರೂಪಾಯಿ ಸಾಲ ಕೊಟ್ಟು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೌದು....ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಸಿಲುಕಿರುವ ಕೆಜಿಎಫ್​​ ಬಾಬುಗೆ ಆ.10ರೊಳಗೆ ಉತ್ತರ ನೀಡುವಂತೆ ಇಡಿ ಅಧಿಕಾರಿಗಳು ನೋಟಿಸ್​ ಜಾರಿ ಮಾಡಿದ್ದಾರೆ. ಇದರಿಂದ ಕೆಜಿಎಫ್‌ ಬಾಬುಗೆ ಟೆನ್ಷನ್ ಶುರುವಾಗಿದೆ.

ಐಎಂಎ ಬಹುಕೋಟಿ ಅಕ್ರಮ ಪ್ರಕರಣದಲ್ಲಿ ಸಿಲುಕಿರುವ ಶಾಸಕ ಜಮೀರ್​​ರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ನಡೆಸಿದ್ದರು. ಕೆಜಿಎಫ್​ ಬಾಬು ಬಳಿ 3 ಕೋಟಿ ರೂ. ಸಾಲ ಪಡೆದಿರುವುದಾಗಿ ಜಮೀರ್​ ಹೇಳಿಕೆ ನೀಡಿದ್ದರು. ಇದರ ಆಧಾರದ ಮೇಲೆ ಕೆಜಿಎಫ್​​ ಬಾಬು ಮನೆ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು, ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಿ ಅಜ್ಯುಡಿಕ್ಟಿಂಗ್​ ಕಮಿಟಿಗೆ ಒಪ್ಪಿಸಿದ್ದಾರೆ. 

ಅಕ್ರಮ ಆಸ್ತಿ ಗಳಿಕೆ: ಶಾಸಕ ಜಮೀರ್ ಅಹಮದ್ ಎಸಿಬಿ ವಿಚಾರಣೆಗೆ ಹಾಜರು

ಈ ವಸ್ತುಗಳನ್ನು ಕೆಜಿಎಫ್​ ಬಾಬುಗೆ ವಾಪಸ್​ ನೀಡದಂತೆ ಇಡಿ ಅಧಿಕಾರಿಗಳು ಆಕ್ಷೇಪ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅಜ್ಯುಡಿಕ್ಟಿಂಗ್​ ಕಮಿಟಿ, ಆ.10ರ ಒಳಗಾಗಿ ಲಿಖಿತ ಉತ್ತರ ನೀಡಲು ಕೆಜಿಎಫ್​ ಬಾಬುಗೆ ಶೋಕಾಸ್​ ನೊಟೀಸ್​ ಜಾರಿ ಮಾಡಿದೆ

40 ಕೋಟಿ ರೂ. ಆದಾಯ ತೆರಿಗೆ ಪಾವತಿ ಮಾಡುತ್ತಿದ್ದೇನೆ. ಆದರೂ ಇಡಿ ಅಧಿಕಾರಿಗಳು ಟಾರ್ಚರ್​ ಕೊಡುತ್ತಿದ್ದಾರೆ. ನನ್ನ ಪತ್ನಿಗೆ ಆಪರೇಷನ್​ ಆಗಿದೆ. ಆದರೂ ವಿಚಾರಣೆ ನಡೆಸಿದ್ದಾರೆ ಎಂದು ಕೆಜಿಎಫ್​​ ಬಾಬು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಚಾರಣೆಗೆ ಹಾಜರಾದ ಜಮೀರ್
ಇತ್ತ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್‌ ಇಂದು(ಶನಿವಾರ) ಎಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಈ ಹಿಂದೆ ಜಮೀರ್ ನಿವಾಸದ ಮೇಲೆ ಎಸಿಬಿ ದಾಳಿ ಮಾಡಿತ್ತು.

ದಾಳಿ ಬಳಿಕ ವಿಚಾರಣೆಗೆ ಹಾಜರಾಗುವಂತೆ ಎಸಿಬಿ ನೋಟಿಸ್ ನೀಡಿತ್ತು. ದಾಳಿಯಲ್ಲಿ ಮನೆ, ಆಸ್ತಿ, ಆದಾಯದ, ಮೂಲ ಪತ್ತೆಯಾಗಿತ್ತು. ಅದಮತೋಲನ ಆಸ್ತಿ ಗಳಿಕೆ ಹಿನ್ನೆಲೆ ವಿಚಾರಣೆಗೆ 10 ದಿನದ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಎಸಿಬಿ ನೋಟಿಸ್ ನೀಡಿತ್ತು. ಇಂದು ಎಸ್ಪಿ ಡಿವೈಎಸ್ಪಿ ರವಿಶಂಕರ್ ನೇತೃತ್ವದಲ್ಲಿ ಜಮೀರ್ ವಿಚಾರಣೆ ನಡೆಯುತ್ತಿದ್ದು, ಜಮೀರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988 ಕಲಂ 13(1)(b)r/w13(2) ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು.

ಕೆಜಿಎಫ್ ಬಾಬು ಮನೆ ಮೇಲೆ ಇಡಿ ದಾಳಿ ಮಾಡಿತ್ತು
ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್​ಗೆ ನಡೆದಿದ್ದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಕೆಜಿಎಫ್ ಬಾಬು (KGF Babu) ನಿವಾಸದ ಮೇಲೆ ಮೇ 28 ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಉಮ್ರಾ ಡೆವಲಪರ್ಸ್ ಕಂಪನಿ ಮಾಲೀಕರಾಗಿರುವ ಕೆಜಿಎಫ್ ಬಾಬು ಈಗಾಗಲೇ ಸ್ಕ್ರಾಪ್ ಉದ್ಯಮದಲ್ಲಿ ಕೋಟ್ಯಂತರ ರೂಪಾಯಿ ಗಳಿಸಿದ್ದಾಗಿ ಯೂಸುಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬು ಕೆಲವೆಡೆ ಹೇಳಿಕೊಂಡಿದ್ದಾರೆ. ಕೆಜಿಎಫ್ ಬಾಬು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಸದ್ಯ 2023ರ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಇಡಿ, ಸಿಬಿಐಯವರು ಬರ್ತಾರೆ ಅಂತ ನಿದ್ದೆ ಬರ್ತಿಲ್ಲ ಎಂದಿರುವ ಬಾಬು
ನನಗೆ ಯಾವುದೇ ಭಯವಿಲ್ಲ. ಇದ್ದರೇ ಒಂದೇ, ಹೋದರೇ ಒಂದೇ. ಆದರೆ ಇಡಿಯವರು, ಸಿಬಿಐಯವರು ಬರುತ್ತಾರೆ ಎಂದು ರಾತ್ರಿ ನಿದ್ದೆ ಬರುತ್ತಿಲ್ಲ. ಜೀವನದಲ್ಲಿ ಟೆನ್ಶನ್ ಹೆಚ್ಚಾಗಿದೆ ಎಂದು ಕೆಜಿಎಫ್ ಬಾಬು ಹೇಳಿದ್ದಾರೆ.

40 ಕೋಟಿ ಟ್ಯಾಕ್ಸ್ ಕಟ್ಟುತ್ತಿದ್ದೇನೆ. ನಾನು ಕಳ್ಳತನ ಮಾಡಿಲ್ಲ. ಆದರೂ ಇಡಿಯವರು ನನಗೆ ಟಾರ್ಚರ್ ಕೊಡುತ್ತಿದ್ದಾರೆ. ಅರೆಸ್ಟ್ ಮಾಡ್ತೇವೆ, ತಿಹಾರ್ ಜೈಲಿನಲ್ಲಿ ಇಡ್ತೇವೆ ಎಂದು ಹೇಳಿ ಹೆದರಿಸುತ್ತಿದ್ದಾರೆ. ನನ್ನ ಹೆಂಡತಿಗೆ ಬೆದರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಾರ್ಟಿ ನಲ್ಲಿ ಇರುತ್ತೇನೆ. ಚಿಕ್ಕಪೇಟೆ ಕ್ಷೇತ್ರದಲ್ಲಿ ನಾನು ಕೆಲಸ ಮಾಡುತ್ತೇನೆ. ಅಲ್ಲಿಂದ ಸ್ಪರ್ಧೆ ಮಾಡಿ ಎಂದು ಜನ ಒತ್ತಾಯ ಮಾಡುತ್ತಿದ್ದಾರೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

click me!