* ಹಾನಗಲ್, ಸಿಂದಗಿ ಉಪಚುನಾವಣೆ ಫಲಿತಾಂಶ ಪ್ರಕಟ
* ಸಿಎಂ ಬೊಮ್ಮಾಯಿ ತವರು ಜಿಲ್ಲೆಯಲಲ್ಇ ಬಿಜೆಪಿಗೆ ಸೋಲು
* ಹಾನಗಲ್ ಮಣ್ಣಿಗೆ ಹಣೆಮಣೆದು ಕ್ಷೇತ್ರ ಪ್ರವೇಶಿಸಿದ ಕಾಂಗ್ರೆಸ್‌ನ ಶ್ರೀನಿವಾಸ್ ಮಾನೆ
ಬೆಂಗಳೂರು, (ನ.02): ಹಾವೇರಿಯ ಹಾನಗಲ್ ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ (By Election Resut) ಇಂದು (ನ.02) ಹೊರಬಿದ್ದಿದೆ.
ಹಾನಗಲ್‌ನಲ್ಲಿ (Hangal) ಕಾಂಗ್ರೆಸ್ ಅಭ್ಯರ್ಥಿ (Congress Candidate) ಶ್ರೀನಿವಾಸ ಮಾನೆ (Srinivas Mane) ಗೆಲುವು ಸಾಧಿಸಿದ್ದಾರೆ. ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಗೆಲುವಿನ ನಗೆ ಬೀರಿದ್ದಾರೆ. ಅದರಲ್ಲೂ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಹಾನಗಲ್‌ನಲ್ಲಿ ಕಾಂಗ್ರೆಸ್ (Congress) ಗೆಲುವು ಸಿಕ್ಕಿರುವುದು ಸಿಎಂ ಬಸವರಾಜ ಬೊಮ್ಮಾಯಿಗೆ (Basavaraj Bommai) ಭಾರೀ ಮುಖಭಂಗವಾಗಿದೆ.
ಹಾನಗಲ್ ಸೋಲು, ಸಿಎಂಗೆ ಮುಖಭಂಗ: ಬಿಜೆಪಿ ಆಂತರಿಕ ವಲಯದಲ್ಲಿ ಗಂಭೀರ ಚರ್ಚೆ
ಶ್ರೀನಿವಾಸ ಮಾನೆಗೆ ಒಟ್ಟು 87,490 ಮತಗಳು ಲಭಿಸಿದ್ದು, 7,373 ಮತಗಳ ಅಂತರದಿಂದ ಬಿಜೆಪಿಯ ಶಿವರಾಜ್ ಸಜ್ಜನ (80,117 ಮತ) ಅವರನ್ನ ಮಣಿಸಿದ್ದಾರೆ.
ಹಾನಗಲ್ ಮಣ್ಣಿಗೆ ಹಣೆಮಣೆದು ಕ್ಷೇತ್ರ ಪ್ರವೇಶಿಸಿದ ಮಾನೆ
ಹೌದು... ಉಪ ಚುನಾವಣೆಯಲ್ಲಿ ಪ್ರಚಂಡ ವಿಜಯ ಸಾಧಿಸಿದ ಶ್ರೀನಿವಾಸ ಮಾನೆ ಅವರು ಹಾವೇರಿಯ ಮತ ಎಣಿಕೆ ಕೇಂದ್ರದಿಂದ ಆಗಮಿಸುತ್ತಿದ್ದ ಸಂದರ್ಭದಲ್ಲಿ ಹಾನಗಲ್ ಕ್ಷೇತ್ರದ ಪ್ರವೇಶ ಸ್ಥಳ ವರ್ದಿ ಕ್ರಾಸ್ ಬಳಿ ವಾಹನದಿಂದ ಕೆಳಗಿಳಿದು ಭೂಮಿತಾಯಿಗೆ ಸಾಷ್ಟಾಂಗ ನಮಸ್ಕಾರ ಸಲ್ಲಿಸಿದರು.
ತಾಯಿ ನೀನು ನನ್ನ ಕೈಬಿಡಲಿಲ್ಲ ಎಂದು ಕೃತಜ್ಞತಾ ಭಾವ ಸಲ್ಲಿಸಿ, ಜನರ ಸೇವೆಗೆ ಶಕ್ತಿ ದಯಪಾಲಿಸು ಎಂದು ಪ್ರಾರ್ಥಿಸಿದರು. ಶ್ರೀನಿವಾಸ ಮಾನೆ ಅವರು ಭೂಮಿತಾಯಿಗೆ ಹಣೆ ಮಣೆಯುತ್ತಿದ್ದಂತೆಯೇ ಅಲ್ಲಿ ನೆರೆದವರು ಹರ್ಷೋದ್ಗಾರ ಮೊಳಗಿಸಿದರು. ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿ ಮೇಲ್ಪಂಥಿ ಹಾಕಿಕೊಟ್ಟ ಶ್ರೀನಿವಾಸ ಮಾನೆ ಅವರು ಮಾದರಿ ಎನಿಸಿದರು.
ಕೈ ಹಿಡಿದ ಮಾನೆ ಕೆಲಸ
ಯೆಸ್..ಕೊರೋನಾ ಸಂದರ್ಭದಲ್ಲಿ ಶ್ರೀನಿವಾಸ್ ಮಾನೆ ಅವರು ಕ್ಷೇತ್ರದಲ್ಲಿ ಓಡಾಡಿ ಸಹಾಯ ಮಾಡಿದ್ದಾರೆ. ಬಡವರಿಗೆ, ಬೀದಿ ವ್ಯಾಪಾರಿ, ಆಟೋ, ಕ್ಯಾಬ್ ಡ್ರೈವರ್‌ಗಳಿಗೆ ಸಹಾಯ ಮಾಡಿದ್ದಾರೆ. ಅಂದಿನ ಮಾನವೀಯತೆ ಕೆಲಸ ಈಗ ಮಾನೆ ಅವರ ಕೈಹಿಡಿದಿದೆ. ಇನ್ನು ಮಾನೆ ಅವರ ಕೆಲಸವನ್ನು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಶ್ಲಾಘನೆ ಮಾಡಿದ್ದು, ಅವರ ಕೆಲಸದಿಂದಲೇ ಗೆದ್ದಿದ್ದಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಕ್ಷೇತ್ರದಲ್ಲಿ 2-3 ವರ್ಷಗಳಿಂದ ಕೆಲಸ ಮಾಡಿದ್ದಾರೆ. ಹೀಗಾಗಿ ಕ್ಷೇತ್ರದ ಜನತೆ ಕಾಂಗ್ರೆಸ್‌ನ ಶ್ರೀನಿವಾಸ ಮಾನೆ ಅವರ ಕೈಹಿಡಿದಿದ್ದಾರೆ ಎಂದು ಖುದ್ದು ಬೊಮ್ಮಾಯಿ ಒಪ್ಪಿಕೊಂಡಿದ್ದಾರೆ.
ಇನ್ನು ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಯ ಪ್ರಚಾರವನ್ನು ಸ್ವತಃ ಮುಖ್ಯಮಂತ್ರಿಯೇ ಮುನ್ನಡೆಸಿದ್ದರು. ಪ್ರಚಾರದ ವೇಳೆ ಸಿಎಂ ಬೊಮ್ಮಾಯಿ, ಪಕ್ಕದ ಶಿಗ್ಗಾಂವಿ ಕ್ಷೇತ್ರದವನು ಸಿಎಂ ಆಗಿದ್ದೇನೆ. ಹಾನಗಲ್ ಕ್ಷೇತ್ರದ ಅಳಿಯ ಅಂತೆಲ್ಲಾ ಭಾವನಾತ್ಮಕ ಮಾತುಗಳನ್ನಾಡಿದ್ದರು. ಆದ್ರೆ, ಮತದಾರ ಅದ್ಯಾವುದಕ್ಕೂ ಕಿವಿ ಕೊಟ್ಟಿಲ್ಲ.
ಬಿಎಸ್‌ವೈ ಮಾತು
ಹಾನಗಲ್ ಕ್ಷೇತ್ರದಲ್ಲಿ ಕೂಡ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಹಿನ್ನಡೆ ಆಗಿದೆ. ಅದಕ್ಕಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಬೀಗುವ ಅವಶ್ಯಕತೆ ಇಲ್ಲ. ಈ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿಯಲ್ಲ ಬೊಮ್ಮಾಯಿ ನಾಯಕತ್ವದ ಪ್ರಶ್ನೆ ಉದ್ಭವಿಸಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದೇವೆ. ಸೋಲು, ಗೆಲುವನ್ನು ಸಮಾನವಾಗಿ ಹಂಚಿಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಒಟ್ಟಾಗಿ ಪಕ್ಷ ಬಲಪಡಿಸುತ್ತೇವೆ. ಎಲ್ಲಿ ಎಡವಿದ್ದೇವೆ ಎಂದು ನಾವು ಚರ್ಚೆ ಮಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಗೆ ಭೇಟಿ ನೀಡುತ್ತೇನೆ. ಈ ಸೋಲನ್ನು ಸಿಎಂ ಒಬ್ಬರ ಮೇಲೆ ಹಾಕಲು ಆಗಲ್ಲ. ಎಲ್ಲರೂ ಕುಳಿತು ಸೋಲಿನ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.