ರಾಜ್ಯದಲ್ಲಿನ ಕೋಮು ಸಂಘರ್ಷ ಹಾಗೂ ಜಾತಿ ದ್ವೇಷದ ಹೆಸರಿನಲ್ಲಿ ನಡೆಯುತ್ತಿರುವ ಅಹಿತಕರ ಘಟನೆಯಿಂದ ಆತಂಕಗೊಂಡು ನಗರಸಭೆ ಸದಸ್ಯರೊಬ್ಬರು ಗನ್ ಮ್ಯಾನ್ ಕೇಳಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು, (ಜುಲೈ.31): ಕರಾವಳಿಯಲ್ಲಿ ಸರಣಿ ಹತ್ಯೆಗಳ ಬೆನ್ನಲ್ಲೇ ಚಿಕ್ಕಮಗಳೂರು ನಗರಸಭೆ ಸದಸ್ಯರೊಬ್ಬರು ತಮ್ಮಗೆ ಗನ್ ಮ್ಯಾನ್ ನೀಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರದ ಬರೆದಿದ್ದಾರೆ.
ಹೌದು... ಚಿಕ್ಕಮಗಳೂರು ನಗರಸಭೆಯ 8ನೇ ವಾರ್ಡಿನ ಜೆಡಿಎಸ್ ಸದಸ್ಯ ಎ.ಸಿ.ಕುಮಾರ್ ಎಂಬುವರು ಗನ್ ಮ್ಯಾನ್ ಕೋರಿ ಎಸ್ಪಿ ಅಕ್ಷಯ್ ಗೆ ಪತ್ರ ಬರೆದಿದ್ದಾರೆ. ಇನ್ನು ಜೆಡಿಎಸ್ ಸದಸ್ಯ ಎ.ಸಿ.ಕುಮಾರ್ ಬರೆದ ಪತ್ರದಲ್ಲಿ ಏನಿದೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ
ದಕ್ಷಿಣ ಕನ್ನಡ: ಫಾಝಿಲ್ ಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿ ಬಂಧನ
ಪತ್ರದಲ್ಲೇನಿದೆ?
ಚಿಕ್ಕಮಗಳೂರು ನಗರಸಭೆಯಲ್ಲಿ ಈ ಹಿಂದೆ ಹಾಗೂ ಈಗ ನಡೆಯುತ್ತಿರುವ ಕಾನೂನುಬಾಹಿರ ಕಾಮಗಾರಿಗಳು, ಟೆಂಡರ್ ಗಳು, ಅಕ್ರಮ ನೇಮಕಾತಿ, ಕಾನೂನು ಬಾಹಿರವಾಗಿ ಇಟ್ಟಿರುವ ಖಾತೆಗಳು, ಕಾನೂನು ಉಲ್ಲಂಘಿಸಿ ನಿರ್ಮಿಸುತ್ತಿರುವ ಅನಧಿಕೃತ ಕಟ್ಟಡಗಳು, ಸರ್ಕಾರಿ ಆಸ್ತಿ ಒತ್ತುವರಿಗಳ ಬಗ್ಗೆ ಮಾಹಿತಿ ಹಕ್ಕಿನಡಿ ದಾಖಲೆಗಳನ್ನು ಪಡೆದು ಅಕ್ರಮ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದೇನೆ. ನಗರದ ಜನತೆಗೂ ಕೂಡ ನಗರಸಭೆಯಲ್ಲಿನ ಭ್ರಷ್ಟಾಚಾರದ ಮಾಹಿತಿಯನ್ನು ತಿಳಿಸುತ್ತಿದ್ದೇನೆ.
ಹಾಗಾಗಿ, ನನ್ನ ಮೇಲೆ ಜಾತಿ ನಿಂದನೆ ಕಾಯ್ದೆಯಡಿ ಸುಳ್ಳು ದೂರು ದಾಖಲಿಸಿದ್ದು, ನಗರಸಭೆ ಪೌರಾಯುಕ್ತರು ಹಾಗೂ ಅಧ್ಯಕ್ಷರು ಸಿಬ್ಬಂದಿಗಳನ್ನು ಪ್ರಚೋದಿಸಿ ನನ್ನ ವಿರುದ್ಧ ದೂರು ತೆಗೆದುಕೊಂಡಿರುತ್ತಾರೆ. ನಾನು ಮಾಹಿತಿ ನೀಡಿರುವ ಅಕ್ರಮ ಕಟ್ಟಡಗಳ ಮಾಲೀಕರು ನನ್ನ ವಿರುದ್ಧ ದೂರು ನೀಡುವಂತೆ ಎತ್ತಿಕಟ್ಟಿದ್ದಾರೆ. ನನ್ನ ವಾಸದ ಮನೆಯನ್ನು ಕೂಡ ಅಕ್ರಮವಾಗಿ ಕಟ್ಟಿದ್ದೀರಿ ಎಂದು ಗುರು ಅರ್ಜಿಯನ್ನು ಪಡೆದುಕೊಂಡು ನನ್ನ ವಾಸದ ಮನೆಗೆ ನೋಟಿಸ್ ನೀಡಿರುತ್ತಾರೆ. ಹಾಗಾಗಿ, ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಹಾಗೂ ನಗರದಲ್ಲಿ ನಡೆಯುತ್ತಿರುವ ನನ್ನ ವಿರುದ್ಧದ ಪಿತೂರಿಯಿಂದ ಅಸುರಕ್ಷತೆಯ ವಾತಾವರಣ ನಿರ್ಮಾಣವಾಗಿದ್ದು ನನಗೆ ತಾವುಗಳು ಗನ್ ಮ್ಯಾನ್ ನೀಡಿ ಕಾನೂನು ಬದ್ಧ ರಕ್ಷಣೆ ನೀಡಬೇಕೆಂದು ಎಸ್ಪಿಗೆ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿನ ಕೋಮು ಸಂಘರ್ಷ ಹಾಗೂ ಜಾತಿ ದ್ವೇಷದ ಹೆಸರಿನಲ್ಲಿ ನಡೆಯುತ್ತಿರುವ ಅಹಿತಕರ ಘಟನೆಯಿಂದ ಆತಂಕಗೊಂಡು ಗನ್ ಮ್ಯಾನ್ ಕೇಳಿದ್ದಾರೆ.
ನಗರಸಭೆ ಅಧ್ಯಕ್ಷರು ಕೂಡ ಗನ್ ಮ್ಯಾನ್ ಕೋರಿದ್ದರು
ಕಳೆದ ಮೂರು ತಿಂಗಳ ಹಿಂದೆ ಚಿಕ್ಕಮಗಳೂರು ನಗರಸಭಾ ಅಧ್ಯಕ್ಷ ವರಸಿದ್ದ ವೇಣುಗೋಪಾಲ್ ಗನ್ ಮ್ಯಾನ್ ನೀಡುವಂತೆ ಎಸ್ಪಿಗೆ ಮನವಿ ಮಾಡಿದ್ದರು. ನಗರದಲ್ಲಿ ನಡೆಯುತ್ತಿದ್ದ ಅಕ್ರಮ ಗೋ ಹತ್ಯೆ ಕೇಂದ್ರ ಮೇಲೆ ನಗರಸಭೆ ನಿರಂತರವಾಗಿ ದಾಳಿ ಮಾಡಿದ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ದೃಷ್ಠಿಯಿಂದ ಗನ್ ಮ್ಯಾನ್ ನೀಡುವಂತೆ ಎಸ್ ಪಿ ಅಕ್ಷಯ್ ಗೆ ವರಸಿದ್ದ ವೇಣುಗೋಪಾಲ್ ಮನವಿಯನ್ನು ಸಲ್ಲಿಸಿದ್ದರು. ಆದ್ರೆ ಜಿಲ್ಲಾ ಪೊಲೀಸ್ ಇಲಾಖೆ ಈವರೆಗೂ ಅಧ್ಯಕ್ಷರಿಗೆ ಯಾವುದೇ ಗನ್ ಮ್ಯಾನ್ ನೀಡಿರಲಿಲ್ಲ. ಇದೀಗ ಸದಸ್ಯರೊಬ್ಬರು ಗನ್‌ಮ್ಯಾನ್‌ಗೆ ಮನವಿ ಮಾಡಿದ್ದು,ಪೊಲೀಸ್ ಇಲಾಖೆ ಒದಗಿಸುತ್ತೋ ಅಥವಾ ಇಲ್ಲ ಎನ್ನುವುದನ್ನು ಕಾದುನೋಡಬೇಕಿದೆ.