ದಕ್ಷಿಣ ಕನ್ನಡ: ಫಾಝಿಲ್ ಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿ ಬಂಧನ
Surathkal Fazil Murder: ಟ್ರಾವೆಲ್ಸ್ ಏಜನ್ಸಿಯನ್ನ ಇಟ್ಟುಕೊಂಡಿದ್ದ ಪುತ್ತೂರು ಮೂಲದ ಆರೋಪಿ ಪ್ರೇಮನಗರದಲ್ಲಿ ವಾಸ ಮಾಡುತ್ತಿದ್ದ
ಮಂಗಳೂರು (ಜು. 31): ಫಾಝಿಲ್ ಹತ್ಯೆ ಪ್ರಕರಣದಲ್ಲಿ ಪೊಲೀಸರು ಮೊದಲ ಆರೋಪಿಯನ್ನು ಬಂಧಿಸಿದ್ದಾರೆ. ಸೂರತ್ಕಲ್‌ನ ಕೋಡಿಕೆರೆ ಪ್ರೇಮನಗರದಲ್ಲಿ ವಾಸವಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ತನ್ನ ಪತ್ನಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ. ಪತ್ನಿ ಗರ್ಭಿಣಿಯಾಗಿದ್ದ ಹಿನ್ನೆಲೆ ಕಳೆದ ಕೆಲವು ತಿಂಗಳುಗಳ ಹಿಂದೆ ತವರು ಮನೆಗೆ ತೆರಳಿದ್ದರು. ಆರೋಪಿ ಇಲ್ಲೆ ನೆಲೆಯೂರಲು ನೂತನ ಮನೆ ನಿರ್ಮಾಣ ಮಾಡುತ್ತಿದ್ದು, ಎರಡು ಅಂತಸ್ಥಿನ ಮನೆ ಕಟ್ಟುತ್ತಿರುವುದಾಗಿ ತಿಳಿದುಬಂದಿದೆ.
ಟ್ರಾವೆಲ್ಸ್ ಏಜನ್ಸಿಯನ್ನ ಇಟ್ಟುಕೊಂಡಿದ್ದ ಪುತ್ತೂರು ಮೂಲದ ಆರೋಪಿ ಪ್ರೇಮನಗರದಲ್ಲಿ ವಾಸ ಮಾಡುತ್ತಿದ್ದ. ಮನೆಯ ಸುತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರನ್ನು ನಿಯೋಜಿಸಲಾಗಿದೆ.
ಫಾಝಿಲ್ ಹತ್ಯೆಗೆ ಬಳಸಲಾಗಿದ್ದ ಕಾರು ಪತ್ತೆ: ಇನ್ನು ಫಾಝಿಲ್ ಹತ್ಯೆಗೆ ಬಳಸಲಾಗಿದ್ದ ಕಾರು ಪತ್ತೆಯಾಗಿದೆ. ಇಯಾನ್ ಕಾರು ಪಕ್ಕದ ಜಿಲ್ಲೆಯ ನಿರ್ಜನ ಪ್ರದೇಶವೊಂದರಲ್ಲಿ ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಇನ್ನಾ ಗ್ರಾಮದ ಗ್ರಾಮದ ಕಾಂಜರಕಟ್ಟೆಯ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ.
ಹತ್ಯೆಗೆ ಬಳಸಿದ ಬಿಳಿ ಬಣ್ಣದ ಈಯಾನ್ ಕಾರು ಪತ್ತೆಯಾಗಿದೆ. ಕಳೆದ ಎರಡು ದಿನಗಳಿಂದ ಇಯಾನ್ ಕಾರು ಇದೇ ಸ್ಥಳದಲ್ಲಿದ್ದು, ಕೃತ್ಯದ ಬಳಿಕ ಆರೋಪಿಗಳು ಕಾರನ್ನು ನಿರ್ಜನ ಪ್ರದೇಶದಲ್ಲಿ ಇರಿಸಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಫಾಝಿಲ್ ಹತ್ಯೆ ಪ್ರಕರಣ, ಕಾರ್ ಡ್ರೈವರ್ ಪೊಲೀಸ್ ವಶಕ್ಕೆ
ಆರೋಪಿಗಳು ಪ್ರತ್ಯೇಕ ಕಾರಿನಲ್ಲಿ ಇಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸ್ಥಳೀಯರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಬೆರಳಚ್ಚು ತಜ್ಞರ ಮೂಲಕ ಪೊಲೀಸರು ಪರೀಕ್ಷೆ ನಡೆಸುತ್ತಿದ್ದಾರೆ. ರಸ್ತೆ ಸರಿ ಇರದ ಕಾರಣ ಯಾರೋ ಕಾರು ಬಿಟ್ಟು ಹೋಗಿದ್ದಾರೆ ಎಂದು ಗ್ರಾಮಸ್ಥರು ಭಾವಿಸಿದ್ದರು.
ಸದ್ಯ ಕಾರಿಗೆ ತಾರ್ಪಲ್ ಮುಚ್ಚಲಾಗಿದ್ದು, ಸ್ಥಳದ ಸರಿಯಾದ ಪರಿಚಯ ಇದ್ದವರೇ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ನಿರ್ಜನ ಪ್ರದೇಶ ಎಂಬ ಕಾರಣಕ್ಕೆ ಆರೋಪಿಗಳು ಕಾರನ್ನು ಇಲ್ಲಿ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.