ಸಾಲ ತೀರಿಸಲಾಗದೆ ಮನೆ ಮಾರಿದ್ದೇನೆ, ನನಗೆ ಹಣದ ಮೋಹವಿಲ್ಲ: ಸಿದ್ದರಾಮಯ್ಯ ಭಾವುಕ ಟ್ವೀಟ್‌

Published : Aug 09, 2024, 09:08 PM ISTUpdated : Aug 09, 2024, 09:10 PM IST
ಸಾಲ ತೀರಿಸಲಾಗದೆ ಮನೆ ಮಾರಿದ್ದೇನೆ, ನನಗೆ ಹಣದ ಮೋಹವಿಲ್ಲ: ಸಿದ್ದರಾಮಯ್ಯ ಭಾವುಕ ಟ್ವೀಟ್‌

ಸಾರಾಂಶ

siddaramaiah wife in muda scam ಮುಡಾ ಹಗರಣದ ವಿಚಾರವಾಗಿ ತಮ್ಮ ಮೇಲೆ ಬಂದಿರುವ ಆರೋಪಗಳ ಬಗ್ಗೆ ಸಿದ್ದರಾಮಯ್ಯ ಭಾವುಕವಾಗಿ ಟ್ವೀಟ್‌ ಮಾಡಿದ್ದಾರೆ. ಮೈಸೂರಿನಲ್ಲಿ ಹಿಂದೆ ಇದ್ದ ಮನೆಯನ್ನು ಸಾಲದಲ್ಲಿ ಕಟ್ಟಿದ್ದೆ. ಸಾಲ ತೀರಿಸಲಾಗದೆ ಅದನ್ನು ಮಾರಿದ್ದೇನೆ ಎಂದು ಹೇಳಿದ್ದಾರೆ.  

ಬೆಂಗಳೂರು (ಆ.9): ಕೇಂದ್ರದ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ ಮತ್ತು ಅಧಿಕಾರ ದುರ್ಬಳಕೆ ಹಾಗೂ ಚುನಾಯಿತ ಸರ್ಕಾರಗಳನ್ನು ಉರುಳಿಸುವ ಬಿಜೆಪಿ ಹಾಗೂ ಜೆಡಿಎಸ್‌ನ  ಜನತಂತ್ರ ವಿರೋಧಿ ನಡೆಯನ್ನು ವಿರೋಧಿಸಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ಜನಾಂದೋಲನ ಸಮಾವೇಶದಲ್ಲಿ ಸಿಎಂ ಸಿದ್ಧರಾಮಯ್ಯ ಮಾತನಾಡಿದರು. ಈ ವೇಳೆ ವಿಪಕ್ಷಗಳನ್ನು ಟೀಕೆ ಮಾಡಿದ ಅವರು ಬಳಿಕ ಎಕ್ಸ್‌ನಲ್ಲಿ ಸರಣಿ ಟ್ವೀಟ್‌ ಮಾಡಿ ಭಾವುಕವಾಗಿ ಬರೆದುಕೊಂಡಿದ್ದಾರೆ. 'ನಾನು ಈ ನೆಲದ ಶೋಷಿತರು, ಶ್ರಮಿಕರು, ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರವಾಗಿ ಇದ್ದೀನಿ. ಇವರ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತೇನೆ ಎನ್ನುವ ಕಾರಣಕ್ಕೆ ನನ್ನನ್ನು ಕೆಳಗಿಳಿಸುವ ಹುನ್ನಾರ ನಡೆಸುತ್ತಿದ್ದಾರೆ. ಇದಕ್ಕೆ ಈ ನಾಡಿನ‌ ಜನತೆ ಅವಕಾಶ ಕೊಡುವುದಿಲ್ಲ ಎನ್ನುವ ನಂಬಿಕೆ ನನಗಿದೆ. ಬಿಜೆಪಿ, ಜೆಡಿಎಸ್ ಎಷ್ಟೇ ಕಪಟ ಉದ್ದೇಶದ ಪಾದಯಾತ್ರೆ ನಡೆಸಿದರೂ ನಾನು ಹೆದರುವುದಿಲ್ಲ. ರಾಜಭವನ ಮತ್ತು ಕೇಂದ್ರ ಸರ್ಕಾರ ಎಷ್ಟೇ ಷಡ್ಯಂತ್ರ ನಡೆಸಿದರೂ ನಾನು ಹೆದರುವುದಿಲ್ಲ. ನಾನು ಇವರ ಷಡ್ಯಂತ್ರಕ್ಕೆ ಬಲಿಯಾಗಿ ಮನೆಯಲ್ಲಿ ಕೂರುವವನಲ್ಲ' ಎಂದು ಸಿಎಂ ಟ್ವೀಟ್‌ ಮಾಡಿದ್ದಾರೆ.

'15 ಬಜೆಟ್ ಮಂಡಿಸಿದ್ದೇನೆ. ನನಗೆ ಹಣದ ಮೋಹ ಇದ್ದಿದ್ದರೆ ಕೋಟಿ ಕೋಟಿ ಮಾಡಬಹುದಿತ್ತು. ಇಷ್ಟು ದಿನವಾದರೂ ನನಗೆ ಮೈಸೂರಲ್ಲಿ ಮನೆ ಇಲ್ಲ, ಈಗ ಕಟ್ಟಿಸುತ್ತಿದ್ದೇನೆ. ಹಿಂದಿದ್ದ ಮನೆ ಸಾಲ ತಗೊಂಡು ಕಟ್ಟಿಸಿದ್ದೆ. ಸಾಲ ತೀರಿಸಲಾಗದೆ ಆ ಮನೆ ಮಾರಿಬಿಟ್ಟೆ. ಬಾಡಿಗೆ ಮನೆಯಲ್ಲಿ ಇದ್ದುಕೊಂಡೇ ವಿಧಾನಸಭೆ, ಲೋಕಸಭೆ ಚುನಾವಣೆ ಮಾಡಿದೆ. ಈಗ ಕಟ್ಟುತ್ತಿರುವ ಮನೆ ಬಿಟ್ಟು ನನ್ನ ಹೆಸರಲ್ಲಿ ಒಂದೇ ಒಂದು ಸೈಟು ಇದ್ದರೆ ತೋರಿಸಿ. ಈಗ ರಾಜಭವನವನ್ನು ದುರುಪಯೋಗಪಡಿಸಿಕೊಂಡು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಈ ಷಡ್ಯಂತ್ರದಲ್ಲಿ ಕುಮಾರಸ್ವಾಮಿ, ಬಿಎಸ್‌ ಯಡಿಯೂರಪ್ಪ. ವಿಜಯೇಂದ್ರ ಹಾಗು ಆರ್‌. ಅಶೋಕ ಸೇರಿದ್ದಾರೆ. ಕುಮಾರಸ್ವಾಮಿ ವಿರುದ್ಧ, ನಿರಾಣಿ ವಿರುದ್ಧ, ಶಶಿಕಲಾ ಜೊಲ್ಲೆ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದರೂ ರಾಜಭವನದಿಂದ ಇದುವರೆಗೂ ನೋಟಿಸ್ ಹೋಗಿಲ್ಲ. ಆದರೆ ನನಗೆ ಮಾತ್ರ ನೋಟಿಸ್ ಬಂದಿದೆ. ಇದು ಪರಮದ್ರೋಹ ಅಲ್ಲವೇ?' ಎಂದು ಅವರು ಪ್ರಶ್ನೆ ಮಾಡಿದ್ದಾರೆ.

'ಮುಡಾ ವಿಚಾರದಲ್ಲಿ ನನ್ನ ತಪ್ಪು ಎಲ್ಲಿದೆ? ಮುಡಾದ ಯಾವ ಸದಸ್ಯರಿಗೂ ನಾನು ಕರೆ ಮಾಡಿಲ್ಲ, ಬೇಡಿಕೆ ಇಟ್ಟಿಲ್ಲ, ಶಿಫಾರಸ್ಸು ಮಾಡಿಲ್ಲ. ನಾನು ಯಾವುದಕ್ಕೂ ಸಹಿ ಹಾಕಿಲ್ಲ. ಹೀಗಿದ್ದಾಗ ಇದರಲ್ಲಿ ನನ್ನ ಪಾತ್ರ ಏನಿದೆ? ನಮ್ಮ ಜಮೀನು ಅಕ್ರಮವಾಗಿ ವಶಕ್ಕೆ ಪಡೆದು ಸೈಟು, ಪಾರ್ಕ್, ರಸ್ತೆ ಮಾಡಿ ಹಂಚಿಬಿಟ್ಟರು. ಇಲ್ಲಿ ತಪ್ಪು ಮಾಡಿರುವುದು ಮುಡಾ. ತಪ್ಪು ಒಪ್ಪಿಕೊಂಡು ನಂತರ ನನ್ನ ಕುಟುಂಬಕ್ಕೆ ಬದಲಿ ನಿವೇಶನ ನೀಡಿದ್ದಾರೆ. ನನ್ನ ಪತ್ನಿ ಬದಲಿ ಜಮೀನು ಕೊಡಿ ಎಂದು ಅರ್ಜಿ ಹಾಕಿದ್ದರೇ ವಿನಃ ಯಾವುದೇ ನಿರ್ಧಿಷ್ಟ ಜಾಗದಲ್ಲಿ ನಿವೇಶನ ಕೊಡಿ ಎಂದು ಕೇಳಿರಲಿಲ್ಲ.  ನಿವೇಶನ ಕೊಟ್ಟವರು ಬಿಜೆಪಿಯವರು . ಈಗ ಹಗರಣ ನಡೆದಿದೆ ಎನ್ನುತ್ತಿರುವವರು ಅವರೇ. ಇದರಲ್ಲೇ ಅವರ ಉದ್ದೇಶ ಏನಿದೆ ಎಂಬುದನ್ನು ರಾಜ್ಯದ ಜನ ಅರ್ಥಮಾಡಿಕೊಳ್ಳಬೇಕು' ಎಂದು ಮನವಿ ಮಾಡಿಕೊಂಡಿದ್ದಾರೆ.

ಕಲ್ಲು ಪ್ರಕೃತಿ, ಕಡಿದರೆ ಆಕೃತಿ; ಈ ಬಂಡೆ ಸಿದ್ದರಾಮಯ್ಯ ಜೊತೆಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್!

ನಾನು ಸೊನ್ನೆಯಿಂದ ರಾಜಕೀಯ ಪ್ರಾರಂಭಿಸಿದೆ. 1983 ರಲ್ಲಿ ಮೊದಲ ಚುನಾವಣೆಗೆ ಡೆಪಾಸಿಟ್ ಮಾಡಲು ನನ್ನ ಬಳಿ ಹಣ ಇರಲಿಲ್ಲ. ನನ್ನ ಕಚೇರಿ ಕ್ಲರ್ಕ್ ಆನಂದ 250ರೂ ಡೆಪಾಸಿಟ್ ಕಟ್ಟಿದರು. ಜನರೇ ಹಣ ಕೊಟ್ಟು ಚುನಾವಣೆ ಗೆಲ್ಲಿಸಿದರು. ಆ ಚುನಾವಣೆಯಲ್ಲಿ ಜನರೇ 63 ಸಾವಿರ ರೂಪಾಯಿ ಖರ್ಚು ಮಾಡಿ ನನ್ನನ್ನು ಆರಿಸಿದರು. ನನ್ನ ಒಂಬತ್ತು ಚುನಾವಣೆ ಗೆಲುವಲ್ಲೂ ಜನರೇ ಹಣ ಖರ್ಚು ಮಾಡಿ ನನ್ನನ್ನು ಗೆಲ್ಲಿಸಿದ್ದಾರೆ‌. ದಲಿತರು, ಶೋಷಿತರು, ಅಲ್ಪಸಂಖ್ಯಾತರ ಹಾಗೂ ಸಮಸ್ತ ಜನರ ಏಳಿಗೆಗಾಗಿ ಮಾತ್ರ ನನ್ನ ಅಧಿಕಾರ ಮುಡಿಪಾಗಿಟ್ಟಿದ್ದೇನೆ. ಬಿಜೆಪಿ, ಜೆಡಿಎಸ್ ಒಟ್ಟಾಗಿ ಎಷ್ಟೇ ಪಾದಯಾತ್ರೆ ನಡೆಸಿದರೂ ನಾನು ಜಗ್ಗಲ್ಲ, ಬಗ್ಗಲ್ಲ. ಹಿಂದುಳಿದ ವರ್ಗಗಳಲ್ಲಿ ದೇವರಾಜ ಅರಸು ಬಿಟ್ಟರೆ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮುಗಿಸಿದ್ದು ನಾನು ಮಾತ್ರ. ಇದನ್ನು ಬಿಜೆಪಿ, ಜೆಡಿಎಸ್ ಸಹಿಸುತ್ತಿಲ್ಲ. ಆದರೆ ಎಲ್ಲಿಯವರೆಗೂ ಸೇನಾನಿಗಳಾದ ನಿಮ್ಮ ಆಶೀರ್ವಾದ ನನ್ನ ಮೇಲೆ ಇರುತ್ತದೋ ಅಲ್ಲಿಯವರೆಗೂ ನನ್ನನ್ನು ಯಾವ ಪಾದಯಾತ್ರೆಗಳೂ ಅಲುಗಾಡಿಸಲು ಸಾಧ್ಯವಿಲ್ಲ' ಎಂದು ಸಿದ್ಧರಾಮಯ್ಯ ಬರೆದುಕೊಂಡಿದ್ದಾರೆ.

ಸಿಎಂ ಸೀಟಿನ ಮೇಲೆ ಕಣ್ಣಿಟ್ಟವರಿಗೆ ಶಾಕ್ ಕೊಟ್ಟ ರಾಯರೆಡ್ಡಿ; ಮುಂದಿನ 3 ವರ್ಷ 10 ತಿಂಗಳ ಸಿದ್ದರಾಮಯ್ಯನವರೇ ಸಿಎಂ!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಮಾಜಿ ಗರ್ಲ್‌ಫ್ರೆಂಡ್ ಬಾಂಬ್
ಜನರೊಂದಿಗೆ ಸಂಪರ್ಕ ಸಾಧಿಸಿ, ಸೋಶಿಯಲ್ ಮೀಡಿಯಾ ಬಳಸಿ: ಸಂಸದರಿಗೆ ಮೋದಿ ಕರೆ