
ಬೆಂಗಳೂರು : ಅಮೆರಿಕದ ಬಾಸ್ಟನ್ ನಗರದಲ್ಲಿ ನಡೆಯುತ್ತಿರುವ ‘ಬಯೋ-2025’ ಸಮಾವೇಶದಲ್ಲಿ ಭಾಗವಹಿಸಲು ತೆರಳಬೇಕಾಗಿದ್ದ ಕರ್ನಾಟಕದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರವಾಸಕ್ಕೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದ್ದು, ಈ ಬಗ್ಗೆ ಬೆಂಗಳೂರಿಗೆ ವಾಪಸಾದ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ಯಾರಿಸ್‌ನಲ್ಲಿರುವ ಪ್ರಿಯಾಂಕ್ ಖರ್ಗೆ ಅವರು ಜೂ.16 ರಿಂದ 19ರವರೆಗೆ ಬಾಸ್ಟನ್‌ನಲ್ಲಿ ನಡೆಯುತ್ತಿದ್ದ ಬಯೋ-2025 ಸಮಾವೇಶದಲ್ಲಿ ಭಾಗವಹಿಸಲು ತೆರಳಬೇಕಿತ್ತು. ರಾಜ್ಯ ಐಟಿ-ಬಿಟಿ ಇಲಾಖೆಯ ಅಧಿಕಾರಿಗಳು ಈಗಾಗಲೇ ಬಾಸ್ಟನ್ ಸೇರಿಕೊಂಡಿದ್ದರು. ಆದರೆ ಪ್ರಿಯಾಂಕ್ ಖರ್ಗೆ ಅವರಿಗೆ ಬಾಸ್ಟನ್‌ಗೆ ತೆರಳಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ ಎನ್ನಲಾಗಿದೆ.
ಈ ಬಗ್ಗೆ ಎಕ್ಸ್‌ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ‘ಅನುಮತಿ ನಿರಾಕರಣೆ ಬಗ್ಗೆ ಸದ್ಯಕ್ಕೆ ಯಾವುದೇ ಬಹಿರಂಗ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ನಾನು ಬೆಂಗಳೂರಿಗೆ ಹಿಂತಿರುಗಿದ ನಂತರ, ಅನುಮತಿ ನಿರಾಕರಣೆಯ ಕುರಿತು ಕೇಂದ್ರ ಸರ್ಕಾರದಿಂದ ಸ್ಪಷ್ಟ ವಿವರಣೆ ಪಡೆದು ಬಳಿಕ ಮಾತನಾಡುತ್ತೇನೆ’ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರು ನನ್ನ ವಿರುದ್ಧ ಮಾಡಿದ ವೈಯಕ್ತಿಕ ದಾಳಿಗೆ ಕಲಬುರಗಿಯ ಜನರು ಉತ್ತರ ನೀಡಿದ್ದಾರೆ
ಬಿಜೆಪಿ ನಾಯಕರು ನನ್ನ ವಿರುದ್ಧ ಮಾಡಿದ ವೈಯಕ್ತಿಕ ದಾಳಿಗೆ ಕಲಬುರಗಿಯ ಜನರು ನನ್ನ ಪರ ಪ್ರತಿಭಟನೆ, ಹೋರಾಟ ಮಾಡುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಾಯಕರ ಷಡ್ಯಂತ್ರಕ್ಕೆ ಪ್ರತಿಯಾಗಿ ಕಲಬುರಗಿಯ ಪ್ರಜ್ಞಾವಂತ ನಾಗರಿಕರು ನನ್ನನ್ನು ಬೆಂಬಲಿಸುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ ಎಂದು ಹೇಳಿದ್ದಾರೆ. ರಾಜಕೀಯವಾಗಿ, ಸೈದ್ದಾಂತಿಕವಾಗಿ, ವೈಚಾರಿಕವಾಗಿ ನನ್ನನ್ನು ಎದುರಿಸಲು ಸಾಧ್ಯವಾಗದ ಬಿಜೆಪಿಯವರು ವೈಯಕ್ತಿಕ ದಾಳಿಗಳ ಮೂಲಕ ನನ್ನ ತೇಜೋವಧೆಗೆ ಪ್ರಯತ್ನಿಸಿದರು.
ಇದನ್ನು ಕಂಡು ಸಹಿಸದೇ ಪ್ರಜ್ಞಾವಂತ ನಾಗರಿಕರಾದ ನೀವು ಸಿಡಿದೆದ್ದಿದ್ದೀರಿ ಎಂದು ಹೋರಾಟಗಾರರಿಗೆ ಪ್ರಿಯಾಂಕ್ ಧನ್ಯವಾದ ಹೇಳಿದ್ದಾರೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಮನುವಾದದ ಮನಸ್ಥಿತಿಯವರ ಕುತಂತ್ರಗಳು ಸಫಲವಾಗುವುದಿಲ್ಲ. ಪ್ರಿಯಾಂಕ್ ಖರ್ಗೆ ಒಂಟಿಯಲ್ಲ, ನನ್ನೊಂದಿಗೆ ಬಾಬಾ ಸಾಹೇಬರನ್ನು ಅನುಸರಿಸುವ ಹಾಗೂ ಬಸವಣ್ಣನನ್ನು ಆರಾಧಿಸುವ ಸಾವಿರಾರು ಪಡೆಗಳಿವೆ ಎಂಬುದನ್ನು ಕಲಬುರಗಿಯ ಹೋರಾಟ ಎತ್ತಿ ತೋರಿಸಿದೆ ಎಂದು ಸಚಿವ ಖರ್ಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.