
ಬೆಂಗಳೂರು : ಬಂಗಾರ ಪಡೆದು ಐಶ್ವರ್ಯಾ ಗೌಡ ನಡೆಸಿದ ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು(ಇ.ಡಿ.) ಮಾಜಿ ಸಂಸದ ಡಿ.ಕೆ.ಸುರೇಶ್‌ಗೆ ಸಮನ್ಸ್ ಜಾರಿಗೊಳಿಸಿದೆ.
ಪ್ರಕರಣದ ಪ್ರಮುಖ ಆರೋಪಿ ಐಶ್ವರ್ಯಾ ಗೌಡ ತಾನು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ತಂಗಿ ಹಾಗೂ ತನಗೆ ಹಲವು ಪ್ರಭಾವಿ ರಾಜಕೀಯ ವ್ಯಕ್ತಿಗಳ ಪರಿಚಯವಿದೆ ಎಂದು ಹೇಳಿಕೊಂಡು ಚಿನ್ನಾಭರಣ ವ್ಯಾಪಾರಿಗಳು, ಪರಿಚಿತರು ಸೇರಿದಂತೆ ಕೆಲವರಿಂದ ಚಿನ್ನಾಭರಣ ಹಾಗೂ ಕೋಟ್ಯಂತರ ರು. ಹಣ ಪಡೆದು ವಂಚಿಸಿದ ಆರೋಪದಡಿ ಬೆಂಗಳೂರಿನ ಚಂದ್ರಾಲೇಔಟ್ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು.
ಈ ಪ್ರಕರಣಗಳಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ಪ್ರತ್ಯೇಕ ಪ್ರಕರಣ ದಾಖಲಿಸಿತ್ತು. ಈ ಸಂಬಂಧ ಆರೋಪಿ ಐಶ್ವರ್ಯಾ ಗೌಡ ಅವರನ್ನು ಬಂಧಿಸಿತ್ತು. ಆಕೆಯ ಮನೆ ಮೇಲೆ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿತ್ತು.
ಮುಂದುವರೆದ ತನಿಖೆಯಲ್ಲಿ ಆರೋಪಿ ಐಶ್ವರ್ಯಾ ಗೌಡ ಅವರ ಬ್ಯಾಂಕ್ ಖಾತೆಗಳ ಪರಿಶೀಲನೆ ವೇಳೆ ಸುಮಾರು 70 ಕೋಟಿ ರು.ಗೂ ಅಧಿಕ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಕಳೆದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಐಶ್ವರ್ಯಾ ಹಲವು ರಾಜಕೀಯ ನಾಯಕರೊಂದಿಗೆ ಹಣಕಾಸು ವ್ಯವಹಾರ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಇ.ಡಿ. ಅಧಿಕಾರಿಗಳು ಮಾಜಿ ಸಂಸದ ಡಿ.ಕೆ.ಸುರೇಶ್‌ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದ್ದಾರೆ.
ಆರೋಪಿ ಐಶ್ವರ್ಯಾ ಗೌಡ ಮಾಜಿ ಸಚಿವ ವಿನಯ್ ಕುಲಕರ್ಣಿ ಜತೆಗೂ ವ್ಯಾವಹಾರಿಕ ಸಂಬಂಧ ಇರಿಸಿಕೊಂಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಇ.ಡಿ. ಅಧಿಕಾರಿಗಳು ವಿನಯ್ ಕುಲಕರ್ಣಿ ಮನೆ ಮೇಲೆಯೂ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದರು. ಇದೀಗ ಮಾಜಿ ಸಚಿವ ಡಿ.ಕೆ.ಸುರೇಶ್ ವಿಚಾರಣೆಗೆ ಸಮನ್ಸ್ ಜಾರಿಗೊಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.