
ವಿಜಯನಗರ (ಜೂ. 17): ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆಯ ಸಾಧ್ಯತೆಗಳು ಚರ್ಚೆಗೆ ಗ್ರಾಸವಾಗಿರುವ ಸಂದರ್ಭದಲ್ಲೇ, ಸಚಿವ ಸತೀಶ್ ಜಾರಕಿಹೊಳಿ ಅವರು ಹೊಸಪೇಟೆಯಲ್ಲಿ ಸಿಎಂ ಬದಲಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ನಮ್ಮದೇ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ, ಸಿಎಂ ಬದಲಾವಣೆ ಬಗ್ಗೆ ಕೇಳಿದರೆ ನಾವು ಏನು ಹೇಳಬಹುದು?' ಎಂದು ಹಾಸ್ಯಾತ್ಮಕವಾಗಿ ಉತ್ತರ ನೀಡಿದ್ದಾರೆ. ನಿಮಗೆ ಅಷ್ಟೊಂದು ಕುತೂಹಲವಿದ್ದರೆ, ಬೆಂಗಳೂರಿಗೆ ಬನ್ನಿ. ಹೊಸಪೇಟೆಯಲ್ಲಿ ಕುಂತು ಹೇಳೋಕಾಗೋಲ್ಲ ಎಂದು ಹೇಳಿದರು.
ಹೊಸಪೇಟೆಯಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ ಅವರು, ಸಿಎಂ ಬದಲಾವಣೆ ವಿಷಯಗಳ ಬಗ್ಗೆ ತಿಳಿಯಬೇಕಾದ್ರೆ ಬೆಂಗಳೂರಿಗೆ ಬನ್ನಿ. ನಾನೇ ನಿಮ್ಮನ್ನು ಸಿಎಂ ಅವರನ್ನು ಭೇಟಿಮಾಡಿಸಿ ಕೇಳಿಸುತ್ತೇನೆ. ದಲಿತ ಸಚಿವರು ಹಾಗೂ ಶಾಸಕರ ಸಭೆ ಸಿಎಂ ಬದಲಾವಣೆಗೆ ಸಂಬಂಧಪಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. 'ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ವಿಷಯ ಈಗ ಮುಗಿದ ಅಧ್ಯಾಯ. ಮತ್ತೆ ಅದನ್ನು ತೆಗೆಯಬೇಕಾದ ಅವಶ್ಯಕತೆಯಿಲ್ಲ' ಎಂದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ:
'ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಹೊಸ ಶಾಸಕರಿಗೆ ಮಂತ್ರಿಗಿರಿ ನೀಡಬಾರದು ಎಂಬ ನಿರ್ಧಾರವೂ ಆಗಿದೆ. ನಮ್ಮ ಪ್ರಕಾರ ಯಾರಿಗೂ ಯಾವುದೂ ಖಚಿತವಿಲ್ಲ. ನೀವು ಬೇಕಾದ್ರೆ ಡೆಲ್ಲಿಗೆ ಹೋಗಿ ಕೇಳಿ ಎಂಬಂತೆ ಸ್ಪಷ್ಟತೆಯಿಲ್ಲದ ಉತ್ತರ ನೀಡಿದರು.
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯಾ?
ರಾಜ್ಯದಲ್ಲಿ ಇತ್ತೀಚೆಗೆ ನಡೆದ ದೌರ್ಜನ್ಯ, ಅಪರಾಧ ಪ್ರಕರಣಗಳ ಹಿನ್ನೆಲೆಯಲ್ಲಿ, 'ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೆ? ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಾ, 'ಆಯಾ ಘಟನೆಯಾದಾಗ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಕೆಲವೊಮ್ಮೆ ಮುಂಜಾಗೃತಾ ಕ್ರಮವೂ ನಡೆಯುತ್ತದೆ. ಆದರೆ ಕೆಲವೊಮ್ಮೆ ಘಟನೆಗಳು ಕೈ ಮೀರಿ ನಡೆದು ಬಿಡುತ್ತವೆ. ಅಂತಹ ಸಂದರ್ಭದಲ್ಲೂ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದರು.
ಕಾಲ್ತುಳಿತ ಪ್ರಕರಣ ಕುರಿತು:
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದ ಕುರಿತು ಮಾತನಾಡಿದ ಅವರು, 'ಈ ಪ್ರಕರಣದಲ್ಲಿ ಸರ್ಕಾರ, ಅಸೋಸಿಯೇಶನ್ ಹಾಗೂ ಸಾರ್ವಜನಿಕರೂ ಭಾಗಿಯಾಗಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ತಪ್ಪು ಎಲ್ಲರಲ್ಲಿಯೂ ಇದೆ. ಈ ಸಂಬಂಧ ಡಿಸಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಜೊತೆಗೆ ಸಿಐಡಿಯ ತನಿಖೆಯೂ ನಡೆಯುತ್ತಿದೆ. 15 ದಿನಗಳಲ್ಲಿ ವರದಿ ಬರಲಿದೆ. ನಂತರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ದಯಾನಂದ ಅಮಾನತು ಹಾಗೂ ಮರು ನೇಮಕ ಕುರಿತು:
ಬೆಂಗಳೂರು ಪೊಲೀಸ್ ಕಮಿಷನರ್ ಆಗಿದ್ದ ದಯಾನಂದ ಅವರನ್ನು ಅಮಾನತು ಮಾಡಲಾಗಿದ್ದದನ್ನು ಉಲ್ಲೇಖಿಸಿದ ಜಾರಕಿಹೊಳಿ, 'ಈಗಾಗಲೇ ತನಿಖೆ ನಡೆಯುತ್ತಿದೆ. ವರದಿ ಬಂದ ನಂತರ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ. ಅವರನ್ನು ಮರು ನೇಮಕ ಮಾಡಬೇಕೋ ಅಥವಾ ಬೇರೆ ನಿರ್ಧಾರವೋ ಎಂಬುದು ಸಿಎಂ ಅವರ ಇಚ್ಛೆಯ ಮೇಲೆ ಅವಲಂಬಿತವಾಗಿದೆ' ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.