ಬೀದರ್‌: ಶರಣರ ನಾಡಲ್ಲಿ ಜಾತಿ ಲೆಕ್ಕಾಚಾರ ಮೇಲುಗೈ..!

By Kannadaprabha News  |  First Published Apr 25, 2023, 10:07 AM IST

ಈ ಹಿಂದೆ ಬಿಜೆಪಿಯ ಭದ್ರ ಕೋಟೆಯಾಗಿದ್ದ ಬೀದರ್‌ ಇದೀಗ ಹರಿದು ಹಂಚಿ ಹೋಗಿದೆ. ಒಂದು ಎಸ್ಸಿ ಮೀಸಲು ಸೇರಿ 6 ಕ್ಷೇತ್ರಗಳನ್ನು ಹೊಂದಿದ್ದು, ಎರಡರಲ್ಲಿ ಬಿಜೆಪಿ, ಮೂರರಲ್ಲಿ ಕಾಂಗ್ರೆಸ್‌ ಹಾಗೂ ಒಂದರಲ್ಲಿ ಜೆಡಿಎಸ್‌ ಶಾಸಕರಿದ್ದಾರೆ.


ಅಪ್ಪಾರಾವ್‌ ಸೌದಿ

ಬೀದರ್‌(ಏ.25):  ಬೀದರ್‌ ಜಾತಿ, ಮತ, ಪಂಥಗಳನ್ನು ಧಿಕ್ಕರಿಸಿ ಸಮಾನತೆ ಸಾರಿರುವ ಬಸವಾದಿ ಶರಣರ ನಾಡಾಗಿದ್ದರೂ ಇಲ್ಲಿ ಜಾತಿಯದ್ದೇ ಲೆಕ್ಕಾಚಾರ. ಪಕ್ಷ ವರ್ಚಸ್ಸಿಗಿಂತ ವ್ಯಕ್ತಿ ವರ್ಚಸ್ಸಿನದ್ದೇ ವಿಚಾರ. ಈ ಹಿಂದೆ ಬಿಜೆಪಿಯ ಭದ್ರ ಕೋಟೆಯಾಗಿದ್ದ ಬೀದರ್‌ ಇದೀಗ ಹರಿದು ಹಂಚಿ ಹೋಗಿದೆ. ಒಂದು ಎಸ್ಸಿ ಮೀಸಲು ಸೇರಿ 6 ಕ್ಷೇತ್ರಗಳನ್ನು ಹೊಂದಿದ್ದು, ಎರಡರಲ್ಲಿ ಬಿಜೆಪಿ, ಮೂರರಲ್ಲಿ ಕಾಂಗ್ರೆಸ್‌ ಹಾಗೂ ಒಂದರಲ್ಲಿ ಜೆಡಿಎಸ್‌ ಶಾಸಕರಿದ್ದಾರೆ.

Tap to resize

Latest Videos

undefined

ಬೀದರ್‌

ಕಾಂಗ್ರೆಸ್‌, ಜೆಡಿಎಸ್‌ ನೇರ ಹಣಾಹಣಿ

ನೇರ ಸ್ಪರ್ಧೆ ಹಾಗೂ ಜಾತಿ, ಮತ ವಿಭಜನೆಯ ತವರೂರಂತಿದೆ ಬೀದರ್‌ ಕ್ಷೇತ್ರ. ಕಾಂಗ್ರೆಸ್‌ಗೆ ಹಾಲಿ ಶಾಸಕ ರಹೀಂಖಾನ್‌ ವಿರುದ್ಧ ಬಿಜೆಪಿ ಟಿಕೆಟ್‌ ವಂಚಿತ ಸೂರ್ಯಕಾಂತ ನಾಗಮಾರಪಳ್ಳಿ ಜೆಡಿಎಸ್‌ ಅಭ್ಯರ್ಥಿ. ಬಿಜೆಪಿಯಿಂದ ಆಕಸ್ಮಿಕವಾಗಿ ಟಿಕೆಟ್‌ ಪಡೆದ ಈಶ್ವರಸಿಂಗ್‌ ಠಾಕೂರ್‌ ಸ್ವಪಕ್ಷದ ಮುಖಂಡರ ಬೆಂಬಲ ಪಡೆಯಲೇ ಹರಸಾಹಸ ಪಡಬೇಕಿದೆ. ಕ್ಷೇತ್ರದ ನಿರ್ಣಾಯಕ ಮತ ಬ್ಯಾಂಕ್‌ ಲಿಂಗಾಯತ ಸಮುದಾಯದ ಮುಖಂಡರನೇಕರು ಸೂರ್ಯಕಾಂತ ನಾಗಮಾರಪಳ್ಳಿ ಬೆಂಬಲಕ್ಕಿದ್ದಾರೆ. ಕಳೆದ ಚುನಾವಣೆ ನಂತರ ಕ್ಷೇತ್ರದ ಉದ್ದಗಲಕ್ಕೂ ಸರ್ಕಾರಿ ಯೋಜನೆಗಳನ್ನು ಮನೆಬಾಗಿಲಿಗೆ ತಲುಪಿಸುವ, ಕೋವಿಡ್‌ನಲ್ಲಿ ಮನೆ ಮಾತಾಗಿದ್ದ ಸೂರ್ಯಕಾಂತ ನಾಗಮಾರಪಳ್ಳಿ ಅಲ್ಪಸಂಖ್ಯಾತರು ಮತ್ತು ಒಬಿಸಿ ಮತದಾರರನ್ನೂ ಸೆಳೆದಿದ್ದಾರೆ. ಕಾಂಗ್ರೆಸ್‌ನ ರಹೀಂ ಖಾನ್‌ ಪರಂಪರಾಗತ ಮತಗಳನ್ನು ನೆಚ್ಚಿಕೊಂಡಿದ್ದಾರೆ. ಮುಸ್ಲಿಂ ಬಾಹುಳ್ಯದ ಬೀದರ್‌ ಕ್ಷೇತ್ರದಲ್ಲಿ ಮತ ವಿಭಜನೆಯಾಗದಂತೆ ತಯಾರಿ ನಡೆಸಿದ್ದಾರೆ. ಲಿಂಗಾಯತ, ಎಸ್ಸಿ, ಎಸ್ಟಿಹಾಗೂ ಕ್ರಿಶ್ಚಿಯನ್‌ ಮತ ಬೇಟೆಯಾಡುವ ತವಕದಲ್ಲಿದ್ದಾರೆ. ಬಿಜೆಪಿಯ ಈಶ್ವರಸಿಂಗ್‌ ಠಾಕೂರ್‌ ಮತದಾರರ ಮನೆಬಾಗಿಲಿಗೆ ಎಡತಾಕುತ್ತಿದ್ದಾರೆ. ಸ್ಥಳೀಯ ಬಿಜೆಪಿಯಲ್ಲಿ ನಾಗಮಾರಪಳ್ಳಿ ಕುಟುಂಬಕ್ಕೆ ಆತ್ಮೀಯರಾಗಿರುವವರು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಠಾಕೂರ್‌ಗೆ ಸ್ವಪಕ್ಷದವರನ್ನೇ ಒಂದೆಡೆ ಸೇರಿಸುವುದು ಸಾಹಸ. ಪ್ರಧಾನಿ ಮೋದಿ, ಕೇಂದ್ರ ನಾಯಕರು ಠಾಕೂರ್‌ ಜೊತೆ ಪ್ರಚಾರಕ್ಕೆ ಸೇರಿದರೆ ತ್ರಿಕೋನ ಇಲ್ಲಾಂದ್ರೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮಧ್ಯೆ ನೇರ ಸ್ಪರ್ಧೆ ಸದ್ಯದ ಚಿತ್ರಣ. ಇತರೆ ಪಕ್ಷಗಳು, ಪಕ್ಷೇತರರು ಈ ಬಾರಿ ಲೆಕ್ಕ ಹಾಕಿ ನೋಡಿದರೆ ಹೆಚ್ಚಿದ್ದಾರೆ. ಪಕ್ಷೇತರರಿಂದಾಗಿ ಅಲ್ಪಸ್ವಲ್ಪ ಮತಗಳು ಆಚೀಚೆ ಹೋದರೂ ಸೋಲು-ಗೆಲುವಿನ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆಗಳಿವೆ.

Karnataka Assembly Elections 2023: ಸಿಎಂ ತವರಲ್ಲಿ ಬಿಜೆಪಿ ಭೇದಿಸಲು ಕಾಂಗ್ರೆಸ್‌ ಭಾರೀ ಕಸರತ್ತು..!

ಭಾಲ್ಕಿ

ಖಂಡ್ರೆ ವರ್ಸಸ್‌ ಖಂಡ್ರೆ ಕಾಳಗ ಜೋರು

ಭಾಲ್ಕಿ ಖಂಡ್ರೆ ಕಾಳಗದ ಕುಟುಂಬ ರಾಜಕಾರಣಕ್ಕೆ ಹೇಳಿ ಮಾಡಿಸಿದ ಕ್ಷೇತ್ರ. ನೇರ ಸ್ಪರ್ಧೆ ಇದರ ವಿಶೇಷತೆ. ಬೀದರ್‌ ಕ್ಷೇತ್ರಕ್ಕೆ ಕಮಲ ಪಾಳಯದ ಟಿಕೆಟ್‌ ಅನ್ನೂ ನಿರ್ಣಯಿಸುವಲ್ಲಿ ಪ್ರಮುಖ ಪಾತ್ರವಹಿಸುವ ತಾಕತ್ತು ಈ ಕ್ಷೇತ್ರದ್ದು. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಹಾಗೂ ಮಾಜಿ ಸಚಿವ ಈಶ್ವರ ಖಂಡ್ರೆಗೆ ಸೋದರ ಸಂಬಂಧಿ ಬಿಜೆಪಿಯ ಪ್ರಕಾಶ ಖಂಡ್ರೆ ಮತ್ತೊಮ್ಮೆ ಎದುರಾಳಿ. 2008ರಲ್ಲಿ ಸೋಲುಂಡಿದ್ದ ಪ್ರಕಾಶ್‌ ಈಗ ಈಶ್ವರಗೆ ಪ್ರಬಲ ಪ್ರತಿಸ್ಪರ್ಧಿ. ಎಂದಿನಂತೆ ಕಾಂಗ್ರೆಸ್‌ ತನ್ನ ಪರಂಪರಾಗತ ಅಲ್ಪಸಂಖ್ಯಾತ, ಹಿಂದುಳಿದ ಮತಗಳ ಜೊತೆಗೆ ಸ್ವಧರ್ಮೀಯ ಲಿಂಗಾಯತ ಮತಗಳನ್ನು ನೆಚ್ಚಿಕೊಂಡಿದ್ದಾರೆ. 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಡಿ.ಕೆ.ಸಿದ್ರಾಮ್‌ಗೆ ಟಿಕೆಟ್‌ ಕೈತಪ್ಪಿದ್ದರೂ ಪ್ರಕಾಶ್‌ ಜೊತೆಗಿದ್ದೆನೆಂದು ಹೇಳುವ ಅವರು ಆತ್ಯಾಪ್ತ ಜೆಡಿಎಸ್‌ನ ನಾಗಮಾರಪಳ್ಳಿ ಪರ ಬೀದರ್‌ನಲ್ಲಿ ಬ್ಯಾಟಿಂಗ್‌ ಮಾಡೋದು ಅನಿವಾರ್ಯ. ಅಷ್ಟಕ್ಕೂ ಈಶ್ವರ್‌ಗೆ ಟಕ್ಕರ್‌ ಕೊಡಲು ಪ್ರಕಾಶ್‌ ಖಂಡ್ರೆಗೆ ಭಾಲ್ಕಿಯಲ್ಲಿ ಡಿ.ಕೆ.ಸಿದ್ರಾಮ್‌ ಬೆನ್ನೆಲುಬಾಗಿ ನಿಂತಲ್ಲಿ ಮಾತ್ರ ಈಶ್ವರ ಸರಳ ಗೆಲುವಿಗೆ ಮೂಗುದಾರ ಹಾಕೋ ಸಾಧ್ಯತೆಯಿದೆ. ಲಿಂಗಾಯತ ಮತ್ತು ಮರಾಠಾ ಸಮಾಜದ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಮರಾಠಾ ಟಿಕೆಟ್‌ಗಾಗಿ ಬಿಜೆಪಿಯಲ್ಲಿ ಭಾರೀ ಬೇಡಿಕೆಯಿತ್ತು. ಆದರೆ ಬಿಜೆಪಿ ಹೈಕಮಾಂಡ್‌ ಅದಕ್ಕೆ ಸೊಪ್ಪು ಹಾಕದೆ ಲಿಂಗಾಯತರ ಮೊರೆ ಹೋಗಿದ್ದು, ಮರಾಠಿಗರ ಮುನಿಸು ಬಿಜೆಪಿಗೆ ಇರುಸು ಮುರುಸು ತರಬಹುದು. ಅಷ್ಟಕ್ಕೂ ಖಂಡ್ರೆದ್ವಯವರ ಕಾಳಗ ಭಾಲ್ಕಿಯಲ್ಲಿ ಜೋರಾಗೋದಂತು ಸ್ಪಷ್ಟ.

ಬೀದರ್‌ ದಕ್ಷಿಣ
ಖೇಣಿ, ಬೆಲ್ದಾಳೆ ಜತೆ ಖೇಣಿ ಗುದ್ದಾಟ

ಕ್ಷೇತ್ರ ಪುನರ್‌ ವಿಂಗಡನೆ ನಂತರ ಮೊದಲ ಬಾರಿ ರಾಜ್ಯ ಮಕ್ಕಳ ಪಕ್ಷವನ್ನು ಕಾಣುವಂತೆ ಮಾಡಿದ್ದ ಕ್ಷೇತ್ರವಿದು. ಮಾಜಿ ಶಾಸಕ ಬಂಡೆಪ್ಪ ಖಾಶೆಂಪೂರ್‌ ಪ್ರತಿನಿಧಿಸುತ್ತಿರುವ ಈ ಕ್ಷೇತ್ರದಲ್ಲಿ ಈ ಹಿಂದೆ ಎಂಟ್ರಿ ಹೊಡೆದಿದ್ದ ಮಕ್ಕಳ ಪಕ್ಷದ ಅಂದಿನ ಅಧ್ಯಕ್ಷ, ನೈಸ್‌ ಕಂಪನಿ ಮುಖ್ಯಸ್ಥ ಮಾಜಿ ಶಾಸಕ ಅಶೋಕ ಖೇಣಿ ಈಗ ಮತ್ತೊಮ್ಮೆ ಕಾಂಗ್ರೆಸ್‌ ಅಭ್ಯರ್ಥಿ. ಬಿಜೆಪಿಯಿಂದ ಡಾ.ಶೈಲೇಂದ್ರೆ ಬೆಲ್ದಾಳೆ ಅಭ್ಯರ್ಥಿಯಾದರೆ, ಆಪ್‌ನಿಂದ ಮಾಜಿ ಸಚಿವ ದಿ.ಮಿರಾಜೋದ್ದೀನ್‌ ಪಟೇಲ್‌ ಸಹೋದರ ನಸೀಮೋದ್ದೀನ್‌ ಪಟೇಲ್‌ ಅಭ್ಯರ್ಥಿ. ಮಾಜಿ ಸಿಎಂ ಧರಂಸಿಂಗ್‌ ಅಳಿಯ ಚಂದ್ರಸಿಂಗ್‌ ಕಾಂಗ್ರೆಸ್‌ ಟಿಕೆಟ್‌ ಸಿಗದೆ ಪಕ್ಷೇತರರಾಗಿ ಕಣದಲ್ಲಿದ್ದಾರೆ. ಸಂಪೂರ್ಣ ಗ್ರಾಮಗಳಿಂದಲೇ ಕೂಡಿರುವ ಈ ಕ್ಷೇತ್ರದಲ್ಲಿ ಜಾತಿ, ಮತ ವಿಭಜನೆ ಜೋರಾಗಿದೆ. ಖೇಣಿಗೆ ಪ್ರಮುಖವಾಗಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಚಂದ್ರಾಸಿಂಗ್‌ ಮೊದಲ ಎದುರಾಳಿ. ಇದರೊಂದಿಗೆ ಆಮ್‌ ಆದ್ಮಿ ಪಕ್ಷದ ನಸೀಮೋದ್ದೀನ್‌ ಪಟೇಲ್‌, ಮತ್ತೊಬ್ಬ ಸ್ವತಂತ್ರ ಅಭ್ಯರ್ಥಿ ವಹೀದ್‌ ಲಖನ್‌ ಕಾಂಗ್ರೆಸ್‌ನ ಪರಂಪರಾಗತ ಅಲ್ಪಸಂಖ್ಯಾತ, ದಲಿತ ಹಾಗೂ ಹಿಂದುಳಿದ ಮತಗಳನ್ನು ಸೆಳೆದರೆ ಅಚ್ಚರಿಯಿಲ್ಲ. ಅದೇ ರೀತಿ ಜೆಡಿಎಸ್‌ ಅಭ್ಯರ್ಥಿ ಬಂಡೆಪ್ಪ ಖಾಶೆಂಪೂರ್‌ಗೂ ಈ ಮೂವರು ಅಭ್ಯರ್ಥಿಗಳ ಮತ ವಿಭಜನೆ ಆತಂಕ ಎದುರಾಗೋದು ಸುಳ್ಳೇನಲ್ಲ. ಇನ್ನು ಗೆಲುವಿಗಾಗಿ ಕುರುಬ ಸಮುದಾಯದ ಮತಗಳನ್ನು ಒಗ್ಗೂಡಿಸುವಲ್ಲಿ ಖಾಶೆಂಪೂರ್‌ ಶ್ರಮಿಸಬೇಕಿದೆ. ಬಿಜೆಪಿ ಅಭ್ಯರ್ಥಿ ಡಾ.ಶೈಲೇಂದ್ರ ಬೆಲ್ದಾಳೆ ಕ್ಷೇತ್ರದ ಲಿಂಗಾಯತ ಮತ್ತು ಹಿಂದುಳಿದ ವರ್ಗಗಳ ಬಹುಸಂಖ್ಯಾತ ಮತಗಳನ್ನು ನಂಬಿದ್ದಾರೆ. ಲಿಂಗಾಯತ ಮತಗಳನ್ನು ಖೇಣಿ ಕೂಡ ಸೆಳೆದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಬದಲಾಗಬಹುದು. ಲಿಂಗಾಯತ, ಮುಸ್ಲಿಂ ಮತ್ತು ಗೊಂಡ ಕುರುಬ ಮತದಾರರದ್ದೇ ಇಲ್ಲಿ ಪ್ರಾಬಲ್ಯವಿದೆ.

ಔರಾದ್‌
ಪ್ರಭು ಚೌವಾಣ್‌ಗೆ ಜೈಸಿಂಗ್‌ ಪೈಪೋಟಿ

ಇದು ಎಸ್ಸಿ ಮೀಸಲು ಕ್ಷೇತ್ರ. ಬಿಜೆಪಿಯಿಂದ ಮೂರು ಬಾರಿ ಶಾಸಕರಾಗಿರುವ ಪ್ರಭು ಚವ್ಹಾಣ್‌ಗೆ ಪ್ರಬಲ ಪೈಪೋಟಿ ನೀಡಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಳೆದು-ತೂಗಿ ಅಭ್ಯರ್ಥಿಗಳನ್ನು ಹಾಕಿದೆ. ಮೂರು ಬಾರಿ ಗೆದ್ದಿರುವ ಪ್ರಭು ಚವ್ಹಾಣ್‌ ಸಿಕ್ಸರ್‌ ಹೊಡೆಯುವ ತವಕದಲ್ಲಿದ್ದಾರೆ. ಆದರೆ ಕ್ಷೇತ್ರದ ಪ್ರಭುತ್ವ ವಿರೋಧಿ ಅಲೆ ಜೊತೆಗೆ ಸ್ವಜಾತಿಯವರ ಮತ ವಿಭಜನೆ ಆತಂಕ ಕಮಲ ಪಾಳಯಕ್ಕಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ನಿವೃತ್ತ ಐಎಎಸ್‌ ಅಧಿಕಾರಿ ಡಾ.ಭೀಮಸೇನ ಸಿಂಧೆ ಕಣಕ್ಕಿಳಿದಿರೋದು ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ. ಕಳೆದ ಚುನಾವಣೆಯಲ್ಲೇ ಟಿಕೆಟ್‌ ಗಿಟ್ಟಿಸಿಕೊಳ್ಳಲು ಪ್ರಬಲ ಪೈಪೋಟಿ ನೀಡಿದ್ದ ಸಿಂಧೆಗೆ ಟಿಕೆಟ್‌ ಕೈತಪ್ಪಿತ್ತು. ಇದೀಗ ಟಿಕೆಟ್‌ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಲಿಂಗಾಯತ, ಲಂಬಾಣಿ ಮತ್ತು ಇತರೆ ಎಸ್‌ಸ್ಸಿ, ಎಸ್ಟಿಸಮುದಾಯದವರ ಬಾಹುಳ್ಯದ ಈ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಜೈಸಿಂಗ್‌ ರಾಠೋಡ್‌ ಅವರು ಪ್ರಭು ಚವ್ಹಾಣ್‌ ನಿದ್ದೆಗೆಡಿಸಿದ್ದಾರೆ. ಇದರೊಂದಿಗೆ ಏಕತಾ ಫೌಂಡೇಶನ್‌ನ ರವೀಂದ್ರ ಸ್ವಾಮಿ ಅವರ ಯುವ ಪಡೆ ಬಿಜೆಪಿಗೆ ಸಮಸ್ಯೆ ತಂದಿಡಬಹುದು.

ಉತ್ತರಕನ್ನಡ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ಕೋರ್ಟ್‌ ಮೆಟ್ಟಿಲೇರಲು ಕಾಂಗ್ರೆಸ್‌ ಸಿದ್ಧತೆ..!

ಹುಮನಾಬಾದ್‌
ತ್ರಿಕೋನ ಸ್ಪರ್ಧೆ ಇಲ್ಲಿನ ವಿಶೇಷ

ಜಾತಿ, ಮತ ವಿಭಜನೆಗಿಂತ ಇಲ್ಲಿ ವ್ಯಕ್ತಿ ವರ್ಚಸ್ಸು ಮತದಾರರಿಗೆ ಮುಖ್ಯ. ಕಾಂಗ್ರೆಸ್‌ ಹಾಗೂ ಬಿಜೆಪಿಯೊಂದಿಗೆ ಜೆಡಿಎಸ್‌ ಕೂಡ ಇಲ್ಲಿ ಪ್ರಬಲ. ಹೀಗಾಗಿ ತ್ರಿಕೋನ ಸ್ಪರ್ಧೆ ಇಲ್ಲಿನ ವಿಶೇಷ. ಮೂರು ಬಾರಿ ಶಾಸಕರಾಗಿರುವ ರಾಜಶೇಖರ ಪಾಟೀಲ್‌ ನಾಲ್ಕನೇ ಬಾರಿ ಕಾಂಗ್ರೆಸ್‌ನ ಹುರಿಯಾಳು. ಶಾಸಕ ಪಾಟೀಲ್‌ ಸಹೋದರ ಸಂಬಂಧಿ ಡಾ.ಸಿದ್ದು ಪಾಟೀಲ್‌ ಬಿಜೆಪಿ ಅಭ್ಯರ್ಥಿ. ಇನ್ನು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪುತ್ರ ಫೈಝ್‌ ಸಿಎಂ ಇಬ್ರಾಹಿಂ ದಳ ಅಭ್ಯರ್ಥಿ. ಲಿಂಗಾಯತ ಹಾಗೂ ಮುಸ್ಲಿಂ ಬಾಹುಳ್ಯದ ಈ ಕ್ಷೇತ್ರದಲ್ಲಿ ಒಬಿಸಿ ಮತದಾರರ ಸಂಖ್ಯೆಯೂ ಹೆಚ್ಚಿದೆ. ಜೆಡಿಎಸ್‌ ಅಲ್ಪಸಂಖ್ಯಾತರ ಮತಗಳನ್ನು ಒಗ್ಗೂಡಿಸಲು ಹರಸಾಹಸ ಮಾಡುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಲಿಂಗಾಯತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರೋದು ಲಿಂಗಾಯತ ಮತ ವಿಭಜನೆಯ ನಿರೀಕ್ಷೆ ಮೂಡಿಸಿದೆ. ಹುಮನಾಬಾದ್‌ನಲ್ಲಿ ಕಾಂಗ್ರೆಸ್‌ ಗಟ್ಟಿಗೊಳಿಸಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಈಗಾಗಲೇ ಬಂದು ಹೋಗಿದ್ದಾರೆ. ಕಮಲ ಅರಳಿಸಲು ಸ್ವತಃ ಪ್ರಧಾನಿ ಮೋದಿ ಭೇಟಿ ನಿಗದಿಯಾಗಿದೆ. ಕ್ಷೇತ್ರದಲ್ಲಿ ಲಿಂಗಾಯತ ಮತ ವಿಭಜನೆ ಕಾಂಗ್ರೆಸ್‌ಗೆ ಮುಳುವಾದರೂ ಅಚ್ಚರಿ ಇಲ್ಲ.

ಬಸವಕಲ್ಯಾಣ
ಕಾಂಗ್ರೆಸ್‌, ಜೆಡಿಎಸ್‌ ಮಧ್ಯ ನೇರ ಸ್ಪರ್ಧೆ

ಅಣ್ಣ ಬಸವಣ್ಣ ನಡೆದಾಡಿರುವ, ಇಡೀ ವಿಶ್ವಕ್ಕೆ ಸಮಾನತೆ ಸಾರಿದ ಬಸವಾದಿ ಶರಣರ ಕಾರ್ಯಕ್ಷೇತ್ರವಿದು. ಆದರೂ ಇಲ್ಲಿ ಜಾತಿಯೇ ಅಭ್ಯರ್ಥಿಗಳ ಗೆಲುವಿಗೆ ನಿರ್ಣಾಯಕ. ಎರಡೂವರೆ ವರ್ಷಗಳ ಹಿಂದೆ ಕೋವಿಡ್‌ನಿಂದ ಅಕಾಲಿಕವಾಗಿ ನಿಧನ ಹೊಂದಿದ ಶಾಸಕ ಬಿ.ನಾರಾಯಣರಾವ್‌ ಅವರ ಸ್ಥಾನ ತುಂಬಲು ನಡೆದ ಉಪಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿಯ ಶರಣು ಸಲಗರ ಈ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿ. ಉಪಚುನಾವಣೆಯಲ್ಲೇ ಕಾಂಗ್ರೆಸ್‌ ಟಿಕೆಟ್‌ಗಾಗಿ ಭಾರೀ ಪ್ರಯತ್ನ ನಡೆಸಿ ವಿಫಲರಾಗಿದ್ದ ಮಾಜಿ ಸಿಎಂ ಧರಂಸಿಂಗ್‌ ಪುತ್ರ ವಿಜಯಸಿಂಗ್‌ ಕಾಂಗ್ರೆಸ್‌ನಿಂದ ಕಣದಲ್ಲಿದ್ದಾರೆ. ಜೆಡಿಎಸ್‌ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಘೋಷಿಸಿತ್ತಾದರೂ ಕೊನೇ ಕ್ಷಣದಲ್ಲಿ ನಿರ್ಧಾರ ಬದಲಿಸಿ ಪ್ರಬಲ ಕೋಳಿ ಸಮಾಜದ ಸಂಜಯ ವಾಡೇಕರ್‌ಗೆ ಟಿಕೆಟ್‌ ನೀಡಿದ್ದು, ಮಾಜಿ ಶಾಸಕ ಖೂಬಾರನ್ನು ಮತ್ತೆ ದಳ ತನ್ನ ತೆಕ್ಕೆಗೆ ಸೇರಿಸಿಕೊಂಡಿದ್ದು ಕಾಂಗ್ರೆಸ್‌ಗೆ ಅನುಕೂಲ ಮಾಡಿಕೊಟ್ಟಂತಿದೆ. ಇದರಿಂದ ಮುಸ್ಲಿಂ ಮತಗಳು ಕಾಂಗ್ರೆಸ್‌ನತ್ತ ಹರಿದು, ಖೂಬಾ ಮೂಲಕ ಲಿಂಗಾಯತ ಮತಗಳ ವಿಭಜನೆಯಾದರೆ ಲಾಭ ಆಗುವ ನಿರೀಕ್ಷೆ ಇದೆ. ಬಿಜೆಪಿಯ ಶರಣು ಸಲಗರ ಉಪಚುನಾವಣೆಯಲ್ಲಿ ಎದುರಿಸಿದಂತೆ ಸ್ವಪಕ್ಷೀಯರ ವಿರೋಧವನ್ನು ಇಂದಿಗೂ ಎದುರಿಸುತ್ತಿದ್ದಾರೆ. ಒಳ-ಹೊರಗಿನವರು ಎಂಬ ವಾದ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಧ್ಯ ನೇರ ಸ್ಪರ್ಧೆ ಖಚಿತ.

click me!