ಜಾತಿಗಣತಿ ‘ಧರ್ಮ ಕಾಲಂ’ನಲ್ಲಿ ಹಿಂದು ಎಂದೇ ಬರೆಸಲು ಕರೆ: ಬಿಜೆಪಿ ಲಿಂಗಾಯತ ನಾಯಕರ ಆಗ್ರಹ

Published : Sep 17, 2025, 04:47 AM IST
Lingayat leaders protest

ಸಾರಾಂಶ

ರಾಜ್ಯ ಸರ್ಕಾರದ ಜಾತಿ ಸಮೀಕ್ಷೆ ವಿರುದ್ಧ ಸಿಡಿದೆದ್ದಿರುವ ರಾಜ್ಯ ಬಿಜೆಪಿಯ ಲಿಂಗಾಯತ ಸಮುದಾಯದ ನಾಯಕರು, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಸಿ ಸಮೀಕ್ಷೆ ಹೆಸರಲ್ಲಿ ವೀರಶೈವ ಲಿಂಗಾಯತ ಸಮುದಾಯ ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ.

ಬೆಂಗಳೂರು (ಸೆ.17): ರಾಜ್ಯ ಸರ್ಕಾರದ ಜಾತಿ ಸಮೀಕ್ಷೆ ವಿರುದ್ಧ ಸಿಡಿದೆದ್ದಿರುವ ರಾಜ್ಯ ಬಿಜೆಪಿಯ ಲಿಂಗಾಯತ ಸಮುದಾಯದ ನಾಯಕರು, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಸಿ ಸಮೀಕ್ಷೆ ಹೆಸರಲ್ಲಿ ವೀರಶೈವ ಲಿಂಗಾಯತ ಸಮುದಾಯ ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆ ವೇಳೆ ಧರ್ಮದ ಕಾಲಂನಲ್ಲಿ ‘ಹಿಂದು’ ಎಂದು, ಜಾತಿ ಕಾಲಂನಲ್ಲಿ ‘ವೀರಶೈವ ಲಿಂಗಾಯತ’ ಎಂಬುದಾಗಿ ನಮೂದಿಸಬೇಕು ಎಂಬ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಇದನ್ನು ಅಖಿಲ ಭಾರತ ವೀರಶೈವ ಮಹಾಸಭಾ ಸೇರಿ ಸಮುದಾಯದ ಹಿರಿಯರು ಹಾಗೂ ಮಠಾಧೀಶರೊಂದಿಗೆ ಚರ್ಚಿಸಿ ಮನವೊಲಿಸಲು ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕರು ನಿರ್ಧರಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಯಡಿಯೂರಪ್ಪ ಸೇರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಕೇಂದ್ರ ರೇಲ್ವೆ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಮಾಜಿ ಸಂಸದರಾದ ಪ್ರಭಾಕರ ಕೋರೆ, ಜಿ.ಎಂ.ಸಿದ್ದೇಶ್ವರ್‌, ಭಗವಂತ್ ಖೂಬಾ, ವಿಜಯ ಸಂಕೇಶ್ವರ, ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಬಿ.ಸಿ.ಪಾಟೀಲ್‌, ಮಾಜಿ ಶಾಸಕ ವೀರಣ್ಣ ಚರಂತಿಮಠ ಮತ್ತಿತರರು ಪಾಲ್ಗೊಂಡಿದ್ದರು.

ಇದೇ ತಿಂಗಳ 19ರಂದು ಹುಬ್ಬಳ್ಳಿಯಲ್ಲಿ ವೀರಶೈವ-ಲಿಂಗಾಯತ ಸಮುದಾಯದವರಲ್ಲಿ ಸಮೀಕ್ಷೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವೀರಶೈವ-ಲಿಂಗಾಯತ ಏಕತಾ ಸಮಾವೇಶ ನಡೆಸಲಾಗುತ್ತಿದೆ. ಈ ಸಮಾವೇಶದಲ್ಲಿ ಸರಿಯಾದ ಮಾಹಿತಿ ರವಾನೆಯಾಗಬೇಕು ಎಂಬ ನಿಲುವಿಗೆ ಸಭೆ ಬಂದಿದೆ. ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ವೀರಶೈವ ಲಿಂಗಾಯತ ಸಮುದಾಯ ಎಲ್ಲ ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಮರೆತು ಒಗ್ಗಟ್ಟು ಪ್ರದರ್ಶಿಸಬೇಕಿದೆ.

ರಾಜ್ಯದ ಕಾಂಗ್ರೆಸ್ ಸರ್ಕಾರ ನಡೆಸಲು ಮುಂದಾಗಿರುವ ಜಾತಿ ಸಮೀಕ್ಷೆಯಲ್ಲಿ ನಾವು ಸ್ಪಷ್ಟ ಮಾಹಿತಿ ನೀಡದಿದ್ದರೆ ಮುಂದಿನ ಪೀಳಿಗೆಗೆ ತೊಂದರೆ ಉಂಟಾಗಲಿದೆ. ಹೀಗಾಗಿ, ಈಗಲೇ ಎಲ್ಲರೂ ಒಗ್ಗಟ್ಟಿನಿಂದ ಸೂಕ್ತ ನಿರ್ಣಯ ಕೈಗೊಂಡು ಅದನ್ನು ಸಮುದಾಯದ ಜನರಿಗೆ ತಲುಪಿಸಬೇಕು ಎಂದು ಸಲಹೆ ನೀಡಿದರು. ಸಭೆ ಬಳಿಕ ಪ್ರಭಾಕರ ಕೋರೆ, ರೇಣುಕಾಚಾರ್ಯ, ವೀರಣ್ಣ ಚರಂತಿಮಠ ಅವರು ಅಖಿಲ ಭಾರತ ವೀರಶೈವ ಮಹಾಸಭೆಯ ಮಹಾಪ್ರಧಾನ ಕಾರ್ಯದರ್ಶಿಯೂ ಆಗಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಸಮೀಕ್ಷೆ ಹಿಂದೆ ಷಡ್ಯಂತ್ರ-ವಿಜಯೇಂದ್ರ

ಸಂವಿಧಾನದಲ್ಲಿ-ಕಾನೂನಿನಲ್ಲಿ ಅವಕಾಶ ಇಲ್ಲದೇ ಇದ್ದರೂ ರಾಜ್ಯ ಸರ್ಕಾರ ಜಾತಿ ಜನಗಣತಿ ನಡೆಸುತ್ತಿದೆ. ಸಮೀಕ್ಷೆ ನೆಪದಲ್ಲಿ ಜಾತಿ ಗಣತಿ ಮಾಡಲು ಸಿದ್ದರಾಮಯ್ಯ ಅವರ ಸರ್ಕಾರ ಹೊರಟಿದೆ. ಈ ನಿರ್ಧಾರದ ಹಿಂದೆ ಕುತಂತ್ರ ಮತ್ತು ಷಡ್ಯಂತ್ರ ಅಡಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಕ್ಷೇಪಿಸಿದರು. ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲಂಗಳನ್ನು ಗಮನಿಸಿದರೆ ಹಿಂದು, ಇಸ್ಲಾಂ, ಕ್ರಿಶ್ಚಿಯನ್, ಜೈನ, ಸಿಖ್ಖ್‌, ಬೌದ್ಧ, ಪಾರ್ಸಿ, ನಾಸ್ತಿಕರು, ಇತರೆ ಎಂಬ ವರ್ಗಗಳನ್ನು ಮಾಡಿದ್ದಾರೆ. ಇತರೆ ಎಂಬುದು ಕೂಡ ಕಾನೂನುಬಾಹಿರ.

ಸಿದ್ದರಾಮಯ್ಯ ತಮ್ಮ ಮನಸ್ಥಿತಿಯನ್ನು ಜಾತಿ ಜನಗಣತಿಯಲ್ಲಿ ಅನುಷ್ಠಾನಕ್ಕೆ ತರಲು ಹೊರಟಿದ್ದಾರೆ. ವೀರಶೈವ ಸಮಾಜವನ್ನು ಒಡೆಯುವ ಕುತಂತ್ರ, ಷಡ್ಯಂತ್ರ ಈ ಜಾತಿ ಜನಗಣತಿ ಹಿಂದೆ ಇದೆ. ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಸಮಾಜ ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಿ ಕೈಸುಟ್ಟುಕೊಂಡಿದ್ದರು. ಇದೀಗ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸರ್ವೇ ಮಾಡುವುದಾಗಿ ಹೇಳಿ ಮತ್ತೊಮ್ಮೆ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯುವ ಮತ್ತೊಂದು ದುಸ್ಸಾಹಸಕ್ಕೆ ಕೈಹಾಕಿದ್ದಾರೆ ಎಂದು ಆರೋಪಿಸಿದರು.

ಸಮಾಜದ ಗೊಂದಲ ಸರಿಪಡಿಸಬೇಕು, ಸಮಾಜವನ್ನು ಒಗ್ಗೂಡಿಸಬೇಕು, ಸಮಾಜವನ್ನು ಸಮರ್ಪಕ ದಿಕ್ಕಿನಲ್ಲಿ ಒಯ್ಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ತೀರ್ಮಾನ ಮಾಡಲಾಗಿದೆ. ಕೆಲ ಹಿರಿಯರು ವೀರಶೈವ ಮಹಾಸಭಾದ ಪ್ರಮುಖರ ಜೊತೆ ಚರ್ಚೆ ಮಾಡಬೇಕು; ಪಂಚ ಪೀಠಾಧೀಶ್ವರರು, ವಿರಕ್ತ ಮಠದ ಸ್ವಾಮೀಜಿಗಳ ಜೊತೆ ಚರ್ಚಿಸಿ, ಒಳಪಂಗಡ ಮರೆತು ಒಟ್ಟಾಗಿ, ಒಂದಾಗಿ ಸಮಾಜದ ಹಿತದೃಷ್ಟಿಯಿಂದ, ರಾಜ್ಯದ ಹಿತದೃಷ್ಟಿಯಿಂದ ಮುಂದೆ ಸಾಗಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೇಂದ್ರದ ಸಚಿವ ವಿ.ಸೋಮಣ್ಣ, ಪ್ರಮುಖರಾದ ಪ್ರಭಾಕರ ಕೋರೆ, ವಿಜಯ ಸಂಕೇಶ್ವರ, ವೀರಶೈವ ಲಿಂಗಾಯತ ಸಮುದಾಯದ ಪ್ರಮುಖರು ಭಾಗವಹಿಸಿದ್ದರು. ಸಮಾಜದ ಹಿತದೃಷ್ಟಿಯಿಂದ ಅನೇಕ ವಿಚಾರಗಳನ್ನು ಚರ್ಚಿಸಿದ್ದೇವೆ; ಅಂತಿಮ ನಿರ್ಣಯಕ್ಕೆ ಬಂದಿದ್ದೇವೆ ಎಂದು ಹೇಳಿದರು.

ಸಮುದಾಯ ಒಡೆಯುವ ಕೆಲಸ-ಬೊಮ್ಮಾಯಿ

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಇಲ್ಲದಿರುವ ಜಾರಿ ಸೇರಿಸಿ ಜಾತಿ ನಡುವೆ ಸಂಘರ್ಷ ಉಂಟು ಮಾಡಿ ತಮ್ಮ ರಾಜಕೀಯ ರೊಟ್ಟಿ ಸುಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ವೀರಶೈವ ಲಿಂಗಾಯತ ಒಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಜನರು ಜಾಗೃತರಾಗಿದ್ದಾರೆ. ನಿಮ್ಮ ರಾಜಕೀಯ ಹುನ್ನಾರಕ್ಕೆ ಅವರು ಬಲಿಯಾಗುವುದಿಲ್ಲ.

2018ರಲ್ಲಿ ಜನ ಒಮ್ಮೆ ಪಾಠ ಕಲಿಸಿದ್ದಾರೆ. ನಮ್ಮ ಧರ್ಮ ಮತ್ತು ಸಮಾಜ ಒಡೆಯುವ ಕೆಲಸ ಮಾಡಬೇಡಿ ಎಂದರು. ಕರ್ನಾಟಕದ ಎಲ್ಲ ಸಮುದಾಯಗಳಲ್ಲಿ ಒಗ್ಗಟ್ಟು ಇರಬೇಕು. ವೀರಶೈವ ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ, ಎಸ್ಸಿ ಎಸ್ಟಿ, ಹಿಂದುಳಿದ ವರ್ಗ ಎಲ್ಲರೂ ಒಗ್ಗಟ್ಟಾಗಿರಬೇಕು. ಈಗ ಕಾಗಿನೆಲೆ ಪೀಠ ಇದೆ. ಮುಂದಿನ ದಿನಗಳಲ್ಲಿ ಕುರುಬ ಕ್ರಿಶ್ಚಿಯನ್ ಪೀಠ ಆರಂಭವಾಗುತ್ತದೆ. ಸಮಾಜವನ್ನು ಎಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ