
ಬೆಂಗಳೂರು(ಸೆ. 11): ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಂಪುಟ ಕಸರತ್ತನ್ನು ವಿಧಾನಮಂಡಲದ ಅಧಿವೇಶನದ ಬಳಿಕವೇ ಕೈಗೆತ್ತಿಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ವಿಸ್ತರಣೆಯೊ ಅಥವಾ ಪುನಾರಚನೆಯೊ ಎಂಬುದು ಇತ್ಯರ್ಥವಾಗಬೇಕಾಗಿದೆ.
"
ಒಂದು ವೇಳೆ ಬಿಜೆಪಿ ಹೈಕಮಾಂಡ್ ಹಸಿರು ನಿಶಾನೆ ತೋರಿದಲ್ಲಿ ಭಾನುವಾರವೇ ಸಂಪುಟ ವಿಸ್ತರಣೆಗೆ ಮುಂದಾಗಬಹುದು ಎನ್ನಲಾಗುತ್ತಿದ್ದರೂ ಈ ಬಗ್ಗೆ ಶನಿವಾರವೇ ಸ್ಪಷ್ಟಚಿತ್ರಣ ಹೊರಬೀಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಂಪುಟ ವಿಸ್ತರಣೆ: ನಡ್ಡಾ-ಬಿಎಸ್‌ವೈ ಭೇಟಿ ಅಂತ್ಯ, ಸಿಎಂ ಫಸ್ಟ್ ರಿಯಾಕ್ಷನ್
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ವೇಳೆ ಸಂಪುಟ ಕಸರತ್ತಿನ ವಿಷಯ ಪ್ರಮುಖವಾಗಿ ಪ್ರಸ್ತಾಪವಾಗಿದೆ. ವಿಸ್ತರಣೆ ಮತ್ತು ಪುನಾರಚನೆ ಎರಡರ ಬಗ್ಗೆಯೂ ಯಡಿಯೂರಪ್ಪ ಅವರು ಪ್ರಸ್ತಾಪ ಮುಂದಿಟ್ಟಿದ್ದಾರೆ. ಪ್ರಧಾನಿ ಜೊತೆ ಚರ್ಚಿಸಿದ ಬಳಿಕ ನಿರ್ಧಾರ ಕೈಗೊಳ್ಳುವುದಾಗಿ ನಡ್ಡಾ ಅವರು ತಿಳಿಸಿದ್ದಾರೆ.
ಯಾರಿಗೆ ಸಿಗಬಹುದು?:
ಒಂದು ವೇಳೆ ವಿಸ್ತರಣೆ ಆಗುವುದಾದರೆ ಖಾಲಿ ಇರುವ ಆರು ಸ್ಥಾನಗಳ ಪೈಕಿ ಅನ್ಯ ಪಕ್ಷಗಳಿಂದ ವಲಸೆ ಬಂದು ವಿಧಾನಪರಿಷತ್ ಸದಸ್ಯರಾಗಿರುವ ಎಂ.ಟಿ.ಬಿ.ನಾಗರಾಜ್ ಮತ್ತು ಆರ್.ಶಂಕರ್ ಅವರಿಗೆ ಸಚಿವ ಸ್ಥಾನ ಖಾತ್ರಿ ಎನ್ನಲಾಗುತ್ತಿದೆ. ಇನ್ನುಳಿದ ನಾಲ್ಕು ಸ್ಥಾನಗಳ ಪೈಕಿ ಹಿರಿಯ ಶಾಸಕರಾಗಿರುವ ಉಮೇಶ್ ಕತ್ತಿ ಮತ್ತು ಅರವಿಂದ್ ಲಿಂಬಾವಳಿ ಅವರಿಗೆ ಸಚಿವ ಸ್ಥಾನ ನೀಡಿ ಎರಡು ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳುವ ಸಂಭವವಿದೆ.
ಸೋಮವಾರದಿಂದ ಆರಂಭವಾಗಲಿರುವ ಅಧಿವೇಶನಕ್ಕೂ ಮೊದಲೇ ವಿಸ್ತರಣೆ ಮಾಡುವ ಬಗ್ಗೆ ಯಡಿಯೂರಪ್ಪ ಅವರು ಒಲವು ಹೊಂದಿದ್ದರೂ ಬಿಜೆಪಿ ವರಿಷ್ಠರು ಅದಕ್ಕೆ ಅನುಮತಿ ನೀಡುವ ಸಾಧ್ಯತೆ ಕಡಮೆ ಎನ್ನಲಾಗುತ್ತಿದೆ.
ಸಂಪುಟ ವಿಸ್ತರಣೆಗಾಗಿ ಸಿಎಂ ದೆಹಲಿಗೆ; ಸಾಹುಕಾರ್ ಜಾರಕಿಹೊಳಿ ದೇವೇಂದ್ರನ ಆಸ್ಥಾನಕ್ಕೆ.!
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರಧಾನಿ ಬಳಿ ಮಾತನಾಡಿದಾಗ ನಡ್ಡಾ ಜೊತೆ ಚರ್ಚೆ ಮಾಡಿ ಹೋಗಿ ಎಂದು ಸೂಚಿಸಿದ್ದರು. ಅದರಂತೆ ನಡ್ಡಾ ಅವರನ್ನು ಭೇಟಿ ಮಾಡಿ ಸುದೀರ್ಘವಾಗಿ ಸಂಪುಟದ ಬಗ್ಗೆ ಚರ್ಚೆ ಮಾಡಿದ್ದೇನೆ. ಪ್ರಧಾನಿ ಮತ್ತು ತಾವು ಕೂತು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ನಡ್ಡಾ ಎಂದಿದ್ದಾರೆ. ಅಧಿವೇಶನಕ್ಕೆ ಮುನ್ನ ಸಂಪುಟ ವಿಸ್ತರಣೆ ಆಗಬೇಕು ಅನ್ನುವುದು ನನ್ನ ಅಪೇಕ್ಷೆಯಾಗಿದೆ. ವಿಸ್ತರಣೆಯೋ, ಪುನಾರಚನೆಯೋ ಅಥವಾ ಎಷ್ಟುಮಂದಿ ಎನ್ನುವುದನ್ನು ಹೈಕಮಾಂಡ್ ಮುಖಂಡರು ತಿಳಿಸಲಿದ್ದಾರೆ.
- ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.