
ಬೆಂಗಳೂರು (ಜೂ.01): ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಪ್ರಕರಣ ಈಗ ಹೈಕಮಾಂಡ್ ಮಟ್ಟಕ್ಕೆ ತಲುಪುವ ಲಕ್ಷಣಗಳು ಕಾಣಿಸುತ್ತಿವೆ. ಈ ವಿವಾದದ ಬೆನ್ನಲ್ಲೇ ಜಮೀರ್ ಅಹಮದ್ ತೀವ್ರ ಆತಂಕಕ್ಕೆ ಒಳಗಾಗಿದ್ದು, ಬೆಂಗಳೂರಿನಲ್ಲಿ ಸಂಧಾನ ಮತ್ತು ತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ. ವಿಶೇಷವೆಂದರೆ, ಜಮೀರ್ ಅವರ ದೆಹಲಿ ಪ್ರವಾಸಕ್ಕೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬ್ರೇಕ್ ಹಾಕಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಸೋಮವಾರ ಬೆಳಿಗ್ಗೆ ದೆಹಲಿಗೆ ಹೋಗುವ ಸಿದ್ಧತೆಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜಮೀರ್ ಅಹಮದ್ ಖಾನ್ ಭೇಟಿ ಮಾಡಿದ್ದರು. ಈ ವೇಳೆ ವೈರಲ್ ಆಗಿರುವ ಆಡಿಯೋ ಕುರಿತು ಜಮೀರ್ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಆದರೆ, ಸಿದ್ದರಾಮಯ್ಯ ಅವರು ಈ ಸಮಯದಲ್ಲಿ ಜಮೀರ್ ದೆಹಲಿಗೆ ಬರುವುದು ಸೂಕ್ತವಲ್ಲ ಎಂಬ ಕಿವಿಮಾತು ಹೇಳಿದ್ದಾರೆ. "ಈಗಾಗಲೇ ವಿವಾದ ಸೃಷ್ಟಿಯಾಗಿದೆ, ಈ ಹೊತ್ತಿನಲ್ಲಿ ನೀವು ದೆಹಲಿಗೆ ಬಂದರೆ ಅದು ನೆಗೆಟಿವ್ ಆಗಿ ಬಿಂಬಿತವಾಗಬಹುದು. ಸದ್ಯಕ್ಕೆ ಬೆಂಗಳೂರಿನಲ್ಲೇ ಉಳಿದುಕೊಳ್ಳಿ" ಎಂದು ಸಿಎಂ ಸೂಕ್ಷ್ಮವಾಗಿ ಸಲಹೆ ನೀಡಿದ್ದಾರೆ. ಸಿಎಂ ಸಲಹೆಯ ಬೆನ್ನಲ್ಲೇ ಜಮೀರ್ ತಮ್ಮ ದೆಹಲಿ ಪ್ರವಾಸವನ್ನು ರದ್ದುಗೊಳಿಸಿ ಬೆಂಗಳೂರಿನಲ್ಲೇ ಉಳಿಯಲು ನಿರ್ಧರಿಸಿದ್ದಾರೆ.
ದೆಹಲಿ ಪ್ರವಾಸ ರದ್ದಾದ ಬೆನ್ನಲ್ಲೇ ಜಮೀರ್ ಅಹಮದ್ ಆತಂಕದಿಂದ ಮುಸ್ಲಿಂ ನಾಯಕರ ಮೊರೆ ಹೋಗಿದ್ದಾರೆ. ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ಕಾಂಗ್ರೆಸ್ ನಾಯಕರೊಬ್ಬರಿಗೆ ಸೇರಿದ ಖಾಸಗಿ ಗೆಸ್ಟ್ ಹೌಸ್‌ನಲ್ಲಿ ಜಮೀರ್ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರು ಹಾಗೂ ಎಂಎಲ್ಸಿ ನಸೀರ್ ಅಹ್ಮದ್ ಖಾನ್ ಕೂಡ ಉಪಸ್ಥಿತರಿದ್ದರು ಎನ್ನಲಾಗಿದೆ. ಆಡಿಯೋ ವಿವಾದದಿಂದ ಆಗಬಹುದಾದ ರಾಜಕೀಯ ಹಾನಿಯನ್ನು ತಡೆಯುವುದು ಹೇಗೆ ಮತ್ತು ಹೈಕಮಾಂಡ್ ಮುಂದೆ ಯಾವ ರೀತಿ ಸ್ಪಷ್ಟನೆ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ.
ವೈರಲ್ ಆಡಿಯೋದಲ್ಲಿ ಕಾಂಗ್ರೆಸ್ ವಿರೋಧಿ ಮಾತುಗಳು ಕೇಳಿಬಂದಿರುವುದು ಜಮೀರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅದರಲ್ಲೂ ದಾವಣಗೆರೆಯ ಶಾಸಕ ಸಮರ್ಥ ಶಾಮನೂರು ಅವರು ಈ ಬಗ್ಗೆ ಹೈಕಮಾಂಡ್‌ಗೆ ದೂರು ನೀಡುವ ಎಚ್ಚರಿಕೆ ನೀಡಿರುವುದು ಜಮೀರ್ ಅವರ ನಿದ್ದೆಗೆಡಿಸಿದೆ. ಒಂದು ಕಡೆ ಇದು 'ನಕಲಿ ಆಡಿಯೋ' ಎಂದು ಜಮೀರ್ ವಾದಿಸುತ್ತಿದ್ದರೂ, ಪಕ್ಷದೊಳಗಿನ ಇತರ ನಾಯಕರು ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಬೀಡುಬಿಟ್ಟಿರುವ ಜಮೀರ್, ಈ ವಿವಾದದ ಹುತ್ತದಿಂದ ಹೇಗೆ ಹೊರಬರುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.