
ಚಿಕ್ಕಬಳ್ಳಾಪುರ (ಮೇ 31): ಚಿಕ್ಕಬಳ್ಳಾಪುರ ಮತ್ತು ಕೋಲಾರ ಬರ ಪೀಡಿತ ಜಿಲ್ಲೆಗಳಿಗೆ ಹೊಸ ಮುಖ್ಯಮಂತ್ರಿಗಳು ನೀರು ತಂದು ನೀರಿನ ದಾಹ ನೀಗಿಸಬೇಕು. ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ನೀರು, ನೆಲ, ಜನರ ವಿಚಾರದಲ್ಲಿ ನಾವು ರಾಜಕಾರಣ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇಂದು ಚಿಕ್ಕಬಳ್ಳಾಪುರದಲ್ಲಿ ನಡೆದ ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಿಕ್ಸೂಚಿ ಭಾಷಣ ಮಾಡಿದರು. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಮಣ್ಣು ಬಹಳ ಶ್ರೇಷ್ಠವಾಗಿರುವಂಥದ್ದು ಇಲ್ಲಿಯ ರೈತರ ಬೆವರಿನ ಹನಿ ಭೂಮಿಗೆ ಬಿದ್ದರೆ ಭೂಮಿ ತಾಯಿ ಒಳ್ಳೆಯ ಬೆಳೆ ಕೊಡುತ್ತಾಳೆ ಒಂದು ಕಾಲದಲ್ಲಿ ಇಡೀ ಬೆಂಗಳೂರಿಗೆ ತರಕಾರಿ, ಹಣ್ಣು, ರೇಷ್ಮೆ, ಕೊಡುವ ಕೆಲಸ ಈ ಜಿಲ್ಲೆಗಳು ಮಾಡುತ್ತಿದ್ದವು. ಇಲ್ಲಿ ಐದು ನದಿಗಳಿದ್ದರೂ ಬತ್ತಿ ಹೋಗಿವೆ. ಪಶ್ಚಿಮ ಘಟ್ಟದಿಂದ ಹರಿದು ಬರುವಜೀವಸೆಲೆ ನಿಂತು ಹೋಗಿದೆ. ಪಶ್ಚಿಮ ಘಟ್ಟದಲ್ಲಿ ನೀರಿನ ಸೆಲೆಯನ್ನು ಉಳಿಸುವ ಪಯತ್ನ ಮಾಡದ ಕಾರಣ ಇದೆಲ್ಲ ಆಗಿದೆ ಎಂದರು.
ನಾನು ನೀರಾವರಿ ಸಚಿವನಿದ್ದಾಗ ಕೋಲಾರದ ಪತಕರ್ತರು ಇಲ್ಲಿ ಫ್ಲೋರೈಡ್ ಯುಕ್ತ ನೀರಿದೆ ಅದನ್ನು ಬಂದು ನೋಡಿ ಎಂದು ಹೇಳಿದರು. ನಾನು ಬಂದು ನೋಡಿ ತಾಂತ್ರಿಕ ತಜ್ಞರೊಡನೆ ಮಾತನಾಡಿದೆ. ಅಂತಾರಾಜ್ಯ ವಿವಾದ ಇಲ್ಲದಂತೆ ಎತ್ತಿನ ಹೊಳೆ ಯೋಜನೆಯನ್ನು ಮಾಡಿದೆ. ಅದಕ್ಕೂ ಮೊದಲು ನೇತ್ರಾವತಿ ತಿರುವು ಯೋಜನೆ ಪ್ರಸ್ತಾಪ ಇತ್ತು. ಅದರಿಂದ ಸುಮಾರು 11 ಸಾವಿರ ಹೆಕ್ಟೇರ್ ಅರಣ್ಯ ನಾಶವಾಗುತ್ತಿತ್ತು. ಹೀಗಾಗಿ ಅದು ಸಾಧ್ಯವಿಲ್ಲವಾಯಿತು. ನನ್ನ ಉದ್ದೇಶ ಪೈಪ್ ಲೈನ್ ಮೂಲಕ ನೀರು ತಂದಿದ್ದರೆ ಹತ್ತು ಟಿಎಂಸಿ ನೀರು ಎರಡೂ ಜಿಲ್ಲೆಗೆ ಕೊಡಬಹುದಿತ್ತು. ಯಾರಿಗೆ ತಾಂತ್ರಿಕ ಜ್ಞಾನ ಇಲ್ಲವೋ ಅವರು ಅಲ್ಲಿ ನೀರೇ ಇಲ್ಲ ಎಂದು ಅಭಿಪ್ರಾಯ ಸೃಷ್ಟಿಸಿದರು. ಅದಕ್ಕಾಗಿ ಎರಡು ವರ್ಷ ಹಾಳಾಯಿತು. ಆ ನಂತರ ಕಾಲುವೆ ಮೂಲಕ. ನೀರು ತರುವ ಪ್ರಯತ್ನ ನಡೆದಿದೆ. ಈಗ ಹೊಸ ಮುಖ್ಯಮಂತ್ರಿ ಬಂದಿದ್ದಾರೆ. ಅವರು ನೀರಾವರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ನಾವು ಎತ್ತಿನಹೊಳೆ ಲಿಫ್ಟ್ ಮೂಲಕ ನೀರು ತರುವ ಕಾರ್ಯ ಮಾಡಿದ್ದೇವು ಅವರು ಅದಕ್ಕೆ ಬಟನ್ ಹೊಡೆಯುವ ಮೂಲಕ ಆರಂಭಿಸಿದ್ದಾರೆ ಎಂದರು.
ಬರ ಪೀಡಿತ ಜಿಲ್ಲೆಗಳಿಗೆ ನೀರು ತಂದು ನೀರಿನ ದಾಹ ನೀಗಿಸಬೇಕು. ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ನೀರಿನ ವಿಚಾರ, ಜನರ ವಿಚಾರದಲ್ಲಿ ನೆಲದ ವಿಚಾರದಲ್ಲಿ ನಾವು ರಾಜಕಾರಣ ಮಾಡುವುದಿಲ್ಲ. ಒಂದು ಸಮಯ ಕಳೆದರೆ ಅದರ ದೂರಗಾಮಿಯ ಪರಿಣಾಮವಾಗುತ್ತದೆ. ಒಂದು ಸಮಯ ಕಳೆದರು ಅದರ ವೆಚ್ಚ ಒಂದು ಸಾವಿರ ಕೋಟಿ ಇದ್ದದ್ದು ಹತ್ತು ಪಟ್ಟು ಹೆಚ್ಚಾಗುತ್ತದೆ. ಒಂದು ಅಂತಾರಾಜ್ಯ ಜಲ ವಿವಾದ ಐವತ್ತು ವರ್ಷವಾದರೂ ಮುಗಿದಿಲ್ಲ. ಅದಕ್ಕೆ ನಾನು ಸಂಸತ್ತಿನಲ್ಲಿ ಅಂತಾರಾಜ್ಯ ಜಲವಿವಾದ ಕಾಯಿದೆ ಸಂಪೂರ್ಣ ಬದಲಾವಣೆ ಮಾಡಬೇಕು. ನದಿ ಅಭಿವೃದ್ಧಿ ನಿಟ್ಟಿನಲ್ಲಿ ಬದಲಾವಣೆ ಮಾಡಬೇಕು ಎಂದು ಸಂಸತ್ತಿನಲ್ಲಿ ಹೇಳಿದ್ದೇನೆ. ಪ್ರಧಾನ ಮಂತಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ನ್ಯಾಯಮಂಡಳಿಗಳಲ್ಲಿ ವರ್ಷಾನುಗಟ್ಟಲೇ ಬಿದ್ದಿರುವ ಪ್ರಕರಣಗಳನು ಕಾನೂನು ಬದಲಾವಣೆ ಮಾಡಲು ಉತ್ಸುಕರಾಗಿದ್ದಾರೆ. ಅದು ಕಾನೂನು ಬದಲಾದರೆ ಬಹಳಷ್ಟು ಬದಲಾವಣೆಯಾಗುತ್ತದೆ ಎಂದರು.
ಇದು ನಮ್ಮ ಬದುಕಿನ ಪಶ್ನೆ. ಪತ್ರಕರ್ತರು ಇದಕ್ಕೆ ಬಹಳಷ್ಟು ಬೆಂಬಲ ಕೊಟ್ಟಿದ್ದರು. ಮುಂದೆಯೂ ಕೊಡುತ್ತಾರೆ ಎನ್ನುವ ವಿಶ್ವಾಸ ಇದೆ. ಚಿಕ್ಕಬಳ್ಳಾಪುರ ಪತ್ರಕರ್ತರು ಇದರ ಬಗ್ಗೆ ಹೆಚ್ಚಿನ ಬೆಂಬಲ ಕೊಡಬೇಕು. ಇಡ್ಲಿ ದೋಸೆಗಿಂತ ಪ್ರತಿಯೊಬ್ಬರ ಮನೆಗೆ ಅನ್ನ ಕೊಡುವ ಜವಾಬ್ದಾರಿಯನ್ನು ತಾವು ತೆಗೆದುಕೊಳ್ಳಬೇಕು. ಪತಕರ್ತರೊಂದಿಗಿನ ನಮ್ಮ ಸಂಬಂಧ ಯಾವಾಗಲೂ ಉತ್ತಮವಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಸ್ಥಳೀಯ ಪತ್ರಿಕೆಗಳಿಗೆ 4 ಪುಟಗಳ ಜಾಹೀರಾತು ನೀಡಲು ಆದೇಶ ಮಾಡಿದೆ. ಅದೇ ರೀತಿ ಹಿಂದುಳಿದ ವರ್ಗಗಳ ಪತ್ರಿಕೆಗಳಿಗೆ ಜಾಹೀರಾತು ನೀಡಲು ಆದೇಶ ಮಾಡಿದೆ. ಎಲ್ಲ ಸಮುದಾಯಗಳ ಧ್ವನಿಗಳು ಬೆಳಕಿಗೆ ಬರಬೇಕು. ಕೇವಲ ಶಹರದ ಸುದ್ದಿಯನ್ನು ಮಾಡದೇ ಎಲ್ಲ ವರ್ಗದ ಧ್ವನಿಯಾಗಿ ಕೆಲಸ ಮಾಡಬೇಕು. ಉತ್ತಮ ಕೆಲಸ ಮಾಡುತ್ತಿದ್ದೀರಿ. ಮಕ್ಕಳ ಪ್ರತಿಭೆಗಳನ್ನು ಗುರುತಿಸಿರುವುದು ಬಹಳ ಸಂತೋಷವಾಗಿದೆ. ಸಂಸದ ಡಾ. ಸುಧಾಕರ್ ಅವರು ಬಂದ ಮೇಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿಯಾಗಿದೆ. ಮೆಡಿಕಲ್ ಕಾಲೇಜು, ಕನ್ನಡ ಭವನ ತರಲು ಅವರು ಸಾಕಷ್ಟು ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.