
ಬೆಂಗಳೂರು: ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೋಮವಾರ ಮತ್ತೊಮ್ಮೆ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ. ಈ ಭೇಟಿ ವೇಳೆ, ಮೊದಲ ಹಂತದ ಸಂಪುಟದಲ್ಲಿ ಯಾರ್‍ಯಾರನ್ನು ಪರಿಗಣಿಸಬೇಕೆಂಬ ಬಗ್ಗೆ ಚರ್ಚಿಸಿ, ಹೆಸರುಗಳನ್ನು ಅಖೈರುಗೊಳಿಸಲಿದ್ದಾರೆ. ಜತೆಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ, ಡಿಸಿಎಂ ಹುದ್ದೆ ಸೃಷ್ಟಿ, ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಕುರಿತೂ ಈ ವೇಳೆ ಚರ್ಚೆ ನಡೆಸುವ ಸಾಧ್ಯತೆಯಿದೆ.
ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರು ಕಳೆದ ಒಂದು ವಾರದಲ್ಲಿ ಮೂರನೇ ಬಾರಿಗೆ ಎಐಸಿಸಿ ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ತೆರಳುತ್ತಿದ್ದಾರೆ. ಇದೀಗ ನೂತನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಜೂ.3ಕ್ಕೆ ಪ್ರಮಾಣವಚನ ಸ್ವೀಕಾರವೂ ನಿಗದಿಯಾಗಿದೆ.
ಹೀಗಾಗಿ ಸೋಮವಾರ ಬೆಳಗ್ಗೆ 10ಕ್ಕೆ ಬೆಂಗಳೂರಿನಿಂದ ತೆರಳಿ ಮಧ್ಯಾಹ್ನ ಬಳಿಕ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ಚರ್ಚಿಸಲಿದ್ದಾರೆ. ನಂತರ ರಾಹುಲ್‌ಗಾಂಧಿ ಒಪ್ಪಿಗೆ ಪಡೆದು ಪಟ್ಟಿ ಅಂತಿಮಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚಿವ ಸಂಪುಟದ ಸ್ವರೂಪ ಹೇಗಿರಬೇಕು? ಯಾರಿಗೆ ಅವಕಾಶ ನೀಡಬೇಕು. ಸಿದ್ದರಾಮಯ್ಯ ಅವರ ಸಂಪುಟದಲ್ಲಿನ ಎಷ್ಟು ಮಂದಿಯನ್ನು ಪುನರಾವರ್ತಿಸಬೇಕು. ಜಾತಿ, ಪ್ರಾದೇಶಿಕತೆ, ಹಿರಿಯ, ಕಿರಿಯ ಮಾನದಂಡಗಳನ್ನು ಆಧರಿಸಿ ಯಾರನ್ನು ಪರಿಗಣಿಸಬೇಕು ಎಂಬ ಬಗ್ಗೆ ಅಂತಿಮ ಹಂತದ ಚರ್ಚೆ ನಡೆಯಲಿದೆ.
ಈಗಾಗಲೇ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರು ತಮ್ಮ ಆಯ್ಕೆಯ ಪಟ್ಟಿಯನ್ನು ವರಿಷ್ಠರಿಗೆ ನೀಡಿದ್ದು, ಈ ಬಗ್ಗೆ ಇರುವ ಗೊಂದಲಗಳನ್ನು ಬಗೆಹರಿಸಿ ಹೈಕಮಾಂಡ್ ಅಂತಿಮ ಪಟ್ಟಿ ಸಿದ್ಧಪಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ಎರಡು ವರ್ಷಗಳ ಅವಧಿ ಮಾತ್ರ ಇರುವ ಕಾರಣಕ್ಕೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕೇ ಅಥವಾ ಬೇಡವೇ? ಮಾಡಿದರೆ ಎಷ್ಟು ಹುದ್ದೆ ಸೃಷ್ಟಿಸಬೇಕು ಎಂಬ ಬಗ್ಗೆಯೂ ಸೋಮವಾರ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.
ಇನ್ನು ಸಭಾಧ್ಯಕ್ಷರಾಗಿರುವ ಯು.ಟಿ.ಖಾದರ್ ಅವರ ಹೆಸರು ಸಂಪುಟ ಸ್ಥಾನಕ್ಕೆ ಪರಿಗಣಿಸುವ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಭಾಧ್ಯಕ್ಷರನ್ನು ಬದಲಿಸಿದರೆ ಆ ಜಾಗಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂಬ ಗೊಂದಲಕ್ಕೂ ಪರಿಹಾರ ಕಂಡುಕೊಳ್ಳುವ ನಿರೀಕ್ಷೆಯಿದೆ.
ಎಚ್.ಕೆ.ಪಾಟೀಲ್, ಡಾ.ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್, ಆರ್.ವಿ.ದೇಶಪಾಂಡೆ ಹಾಗೂ ಟಿ.ಬಿ.ಜಯಚಂದ್ರ ಹೆಸರು ಚರ್ಚೆಯಲ್ಲಿದ್ದು, ಅಂತಿಮ ನಿರ್ಧಾರ ಹೈಕಮಾಂಡ್ ತೆಗೆದುಕೊಳ್ಳಲಿದೆ.
ಇದೇ ವೇಳೆ ಶಿವಕುಮಾರ್ ನಿಭಾಯಿಸುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಗಾದಿಯನ್ನು ಯಾರಿಗೆ ನೀಡಬೇಕೆಂಬ ಕುರಿತು ಚರ್ಚೆ ನಡೆಯಲಿದೆ. ಸತೀಶ್ ಜಾರಕಿಹೊಳಿ ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಾ.ಜಿ.ಪರಮೇಶ್ವರ್, ಬಿ.ಕೆ.ಹರಿಪ್ರಸಾದ್ ಹೆಸರೂ ಕೂಡ ಮುಂಚೂಣಿಗೆ ಬಂದಿದ್ದು, ಇದರ ಬಗ್ಗೆಯೂ ಚರ್ಚೆಯಾಗಬಹುದು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.